Advertisement

ಮನಸ್ಸಿಗೆ ಮುದ ನೀಡಿದ ಚಿತ್ರಸಂತೆ

07:01 PM Mar 08, 2021 | Team Udayavani |

ಕಲಬುರಗಿ: ಹೊರಗೆ ತಲೆ ಸುಡುವ ಬಿರು ಬಿಸಿಲು. ಕಣ್ಣೆತ್ತಿ ನೋಡಲು ಆಗದಷ್ಟು ಸೂರ್ಯನ ಪ್ರತಾಪ. ಅದೇ ಸ್ವಲ್ಪ ಬಿಡುವು ಮಾಡಿಕೊಂಡು ರಸ್ತೆಯಿಂದ ಒಳ ಹೊಕ್ಕು ಹೋದರೆ ಕಣ್ಮನ ಸೆಳೆಯುವ ಚಿತ್ತಾರಗಳು. ಮನಸ್ಸಿಗೆ ಮುದ ನೀಡುವ ಬಣ್ಣ-ಬಣ್ಣ ಕಲಾಕೃತಿಗಳು. ಕಿವಿಗೆ ಇಂಪೆನಿಸುವ ಗಾಯನ.

Advertisement

ಇದು ಇಲ್ಲಿನ ಕನ್ನಡ ಭವನ ಆವರಣದಲ್ಲಿರುವ ಬಾಪುಗೌಡ ದರ್ಶನಾಪುರ ರಂಗ ಮಂದಿರದಲ್ಲಿ ರವಿವಾರ ಚಿತ್ರಸಂತೆ ನೀಡಿದ ಹಿತ ಅನುಭವ. ವೈವಿಧ್ಯಮಯ ಬಣ್ಣಗಳೊಂದಿಗೆ ಭಾವನೆಗಳನ್ನು ಬೆರೆಸಿ ಕಲಾವಿದರ ಕುಂಚದಲ್ಲಿ ಅರಳಿದ ಹೊಸ ಲೋಕವೇ ಅನಾವರಣಗೊಂಡಿತ್ತು. ಕಲಾಸಕ್ತರ ಕಣ್ಣಿಗೆ ಹಬ್ಬದ ವಾತಾವರಣವನ್ನು ಚಿತ್ರಸಂತೆ ಸೃಷ್ಟಿಸಿತ್ತು.

ಕಲ್ಯಾಣ ಕರ್ನಾಟಕ ಮಾನವ ಅಭಿವೃದ್ಧಿ, ಕೃಷಿ ಮತ್ತು ಸಾಂಸ್ಕೃತಿಕ ಸಂಘ, ವಿಕಾಸ ಅಕಾಡೆಮಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಗುಲಬರ್ಗಾ ವಿಶ್ವವಿದ್ಯಾಲಯ ಚೈತನ್ಯಮಯಿ ಟ್ರಸ್ಟ್‌, ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ, ದಿ ಆರ್ಟ್‌ ಇಂಟಿಗ್ರೇಶನ್‌ ಸೊಸೈಟಿ ಸಂಯುಕ್ತಾಶ್ರಯದಲ್ಲಿ ನಡೆದ ಚಿತ್ರಸಂತೆಯಲ್ಲಿ ವಿವಿಧ ಕಲಾ ಪ್ರಕಾರದ ಚಿತ್ರಗಳು ಗಮನ ನೋಡುಗರ ಸೆಳೆದವು.

ನಾಡಿನ ಪ್ರಖ್ಯಾತ ಕಲಾವಿದ ಎಸ್‌.ಎಂ. ಪಂಡಿತರ ಶಿಷ್ಯ, ಶತಾಯುಷಿ ಕಲಾವಿದ ಎಂ.ಎಂ.ಕೋರಾಕರ್‌ ಸೇರಿ ಕಲಬುರಗಿ, ಬೀದರ್‌, ಯಾದಗಿರಿ,ರಾಯಚೂರು, ಬಾಗಲಕೋಟೆ, ಬೆಳಗಾವಿ ಸೇರಿ 90ಕ್ಕೂ ಹೆಚ್ಚು ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದರು. ರೈತಾಪಿ ಜೀವನ, ಗ್ರಾಮೀಣ ಸೊಗಡು, ನಿಸರ್ಗ ಚಿತ್ರ, ಅಮೂರ್ತಚಿತ್ರ, ನೈಜ ಶೈಲಿಯ ಚಿತ್ರಗಳು, ಜಲವರ್ಣಗಳಲ್ಲಿ ರಚಿಸಿದ ಚಿತ್ರಗಳು, ಉಬ್ಬು ಚಿತ್ರಗಳು, ಶಿಲ್ಪ ಕಲಾಕೃತಿಗಳು ಕಲಾಸಕ್ತರನ್ನು ಸೆಳೆದವು. ಕೊರೊನಾ ಕುರಿತಾದ ಕಲಾಕೃತಿಗಳು ಪ್ರದರ್ಶನದಲ್ಲಿ ಕಂಡು ಬಂದವು.

ವ್ಯಕ್ತಿ ಚಿತ್ರಕ್ಕೆ ಬೇಡಿಕೆ: ಚಿತ್ರ ಸಂತೆಯಲ್ಲಿ ಸ್ಥಳದಲ್ಲೇ ಬಿಡಿಸುವ ವ್ಯಕ್ತಿ ಚಿತ್ರಕ್ಕೆ ಹೆಚ್ಚಿನ ಬೇಡಿಕೆ ಕಂಡುಬಂತು. ಚಿತ್ರಸಂತೆಗೆ ಆಗಮಿಸಿದ್ದ ಹಲವರು ಕಲಾವಿದರ ಮುಂದೆ ಕೂತು ತಮ್ಮದೇ ಚಿತ್ರ ಬಿಡಿಸಿಕೊಂಡು ಸಂಭ್ರಮ ಪಟ್ಟರು. ಏಕಾಗ್ರತೆಯಿಂದ ಕುಳಿತು ನೈಜ ಚಿತ್ರ, ರೇಖಾ, ವ್ಯಂಗ್ಯ ಚಿತ್ರಗಳನ್ನು ಬಿಡಿಸಿಕೊಂಡರು. ಇನ್ನು ಕೆಲವರು ತಮಗೆ ಬೇಕಾದವರು ಅಥವಾ ತಮ್ಮದೇ ಹಳೆಯ ಚೆಂದದ ಫೋಟೋಗಳನ್ನು ಮೊಬೈಲ್‌ನಲ್ಲಿ ತೋರಿಸಿ ಅದೇ ರೀತಿ ಚಿತ್ರಗಳನ್ನು ಕಲಾವಿದರಿಂದ ರಚಿಸಿಕೊಂಡರು.

Advertisement

ಮಕ್ಕಳ ಕಲರವ: ಚಿತ್ರಸಂತೆ ಅಂಗವಾಗಿ ಪ್ರೌಢ ಶಾಲೆ ಮಕ್ಕಳಿಗೆ ಸ್ಥಳದಲ್ಲೇ ಚಿತ್ರಕಲೆ ಬಿಡಿಸುವ ಮತ್ತು ಕುಂಭ ಕಲೆಯ ಕಾರ್ಯಾಗಾರ ನಡೆಯಿತು. ವಿವಿಧ ಶಾಲೆಗಳ ಸುಮಾರು 300 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಇದರಿಂದ ಚಿತ್ರಸಂತೆಯಲ್ಲಿ ಮಕ್ಕಳ ಕಲರವ ಜೋರಾಗಿಯೇ ಇರುವುದೊಂದಿಗೆ ಮತ್ತಷ್ಟು ಮೆರಗು ತುಂಬಿತ್ತು. ಕೋವಿಡ್ ಜಾಗೃತಿ, ಸ್ವಚ್ಛ ಕಲಬುರಗಿ ಮತ್ತು ಹಳ್ಳಿ ಜೀವನ ಕುರಿತ ಮಕ್ಕಳ ಸ್ಥಳದಲ್ಲೇ ಚಿತ್ರ ಬಿಡಿಸಿದರು.

ಕುಂಬಾರಿಕೆ ಕೌಶಲ್ಯ ಮಕ್ಕಳಲ್ಲಿ ಬೆರುಗು ಮೂಡಿಸಿತ್ತು. ಮಕ್ಕಳು, ಯುವಕ, ಯುವತಿಯರು ತಾವೇ ಕೈಯಾರೇ ಮಣ್ಣು ಬಳಸಿ ಮಡಿಕೆ, ಪಾತ್ರೆ, ಪಗಡಿ, ಹೂಕುಂಡಗಳನ್ನು ತಯಾರು ಮಾಡಿ ಖುಷಿ ಪಟ್ಟರು. ಅಲ್ಲದೇ, ಚಿತ್ರಸಂತೆಯಲ್ಲಿ ದಿನವಿಡೀ ಮನೋರಂಜನೆ ಕಾರ್ಯಕ್ರಮ ನಡೆಯಿತು. ಕಲಾವಿದರಿಂದ ಚಿತ್ರಗೀತೆಗಳು ಗಾಯನ, ಕಾಲೇಜು ವಿದ್ಯಾರ್ಥಿಗಳಿಂದ ಮೂಡಿ ಬಂದ ನೃತ್ಯ, ಭರತನಾಟ್ಯ ಹಾಗೂ ಮಿಮಿಕ್ರಿ ಗಮನ ಸೆಳೆಯಿತು.

ಚಿತ್ರ ಬಿಡಿಸುವ ಉದ್ಘಾಟನೆ: ಇದಕ್ಕೂ ಬೆಳಗ್ಗೆ ಚಿತ್ರ ಸಂತೆಯನ್ನು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಮಹೇಂದ್ರ ಡಿ. ಚಿತ್ರ ಬಿಡಿಸುವುದರ ಮೂಲಕ ಉದ್ಘಾಟಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ದಯಾನಂದ ಅಗಸರ, ಗುವಿವಿ ದೃಶ್ಯಕಲಾ ವಿಭಾಗದ ಸಂಯೋಜನಾಧಿಕಾರಿ ಅಬ್ದುಲ್‌ ರಬ್‌ ಉಸ್ತಾದ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕ ದತ್ತಪ್ಪ ಸಾಗನೂರ, ಚಿತ್ರಸಂತೆಯ ಪ್ರಧಾನ ಸಂಯೋಜಕ ಡಾ| ಎ.ಎಸ್‌. ಪಾಟೀಲ, ಸಂಯೋಜಕ ಡಾ|ಪರಶುರಾಮ ಪಿ. ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next