ಬೆಂಗಳೂರು: ಗ್ರಾಮೀಣ ಪ್ರದೇಶಗಳನ್ನು ಬಹಿರ್ದೆಸೆ ಮುಕ್ತಗೊಳಿಸಲು ಪಣ ತೊಟ್ಟಿರುವ ಕೇಂದ್ರ ಸರ್ಕಾರ, ಇದೀಗ “ಸ್ವಚ್ಛ ಭಾರತ ಮಿಷನ್’ ಯೋಜನೆಯಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಯೋಗದೊಂದಿಗೆ “ಸ್ವಚ್ಛ ಸುಂದರ ಶೌಚಾಲಯ ಸ್ಪರ್ಧೆ’ ಹಮ್ಮಿಕೊಂಡಿದೆ.
ಈಗಾಗಲೇ ಆರಂಭವಾಗಿರುವ ಸ್ಪರ್ಧೆ ಮಾಸಾಂತ್ಯವರೆಗೂ ದೇಶದೆಲ್ಲೆಡೆ ನಡೆಯಲಿದ್ದು ಶೌಚಾಲಯಕ್ಕೆ ಸೃಜನಾತ್ಮಕವಾಗಿ ಬಣ್ಣ ಬಳಿಸಿದ ಗ್ರಾಮೀಣ ಪ್ರದೇಶದ ಕುಟುಂಬಕ್ಕೆ ಕೇಂದ್ರ ಸರ್ಕಾರದ “ಪುರಸ್ಕಾರ’ ದೊರೆಯಲಿದೆ. ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯಗಳ ಸುಸ್ಥಿರ ಬಳಕೆ ಬಗ್ಗೆ ಜಾಗೃತಿ, ಶೌಚಾಲಯದ ಮಾಲೀಕತ್ವದ ಬಗ್ಗೆ ಅರಿವು ಹಾಗೂ ಉತ್ತಮ ಗುಣಮಟ್ಟದ ಶೌಚಾಲಯ ನಿರ್ಮಾಣದ ಖಾತರಿ ಪಡಿಸುವಿಕೆ ಸೇರಿದಂತೆ ಹಲವು ಸದುದ್ದೇಶಗಳನ್ನು “ಸ್ವಚ್ಛ ಸುಂದರ ಶೌಚಾಲಯ ಸ್ಪರ್ಧೆ’ಯಲ್ಲಿ ಒಳಗೊಂಡಿದೆ.
ಒಂದು ತಿಂಗಳ ಸ್ಪರ್ಧಾವಧಿಯಲ್ಲಿ (ಜ.1 ರಿಂದ 31ರವರೆಗೆ) ಅತಿ ಹೆಚ್ಚು ಶೌಚಾಲಯಗಳಿಗೆ ಬಣ್ಣ ಬಳಿಯುವ ಸಂಖ್ಯೆ ಮತ್ತು ಶೇಕಡಾವಾರು ಸಾಧನೆ ಆಧಾರದ ಮೇಲೆ ಜಿಲ್ಲೆ ಮತ್ತು ಗ್ರಾಪಂ ಮತ್ತು ವೈಯಕ್ತಿಕ ಗೃಹ ಶೌಚಾಲಯಗಳನ್ನು ಕೇಂದ್ರ ಸರ್ಕಾರವೇ ಪುರಸ್ಕಾರಕ್ಕೆ ಆಯ್ಕೆ ಮಾಡಿ ಪ್ರಕಟಿಸಲಿದೆ. ಕೇಂದ್ರದ ಈ ಆಂದೋಲನವನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಈಗಾಗಲೇ ಗ್ರಾಪಂ ಅಧ್ಯಕ್ಷರು ಮತ್ತು ಜಿಪಂ ಸಿಇಒಗೆ ವಹಿಸಲಾಗಿದೆ. ಅಲ್ಲದೆ ಜಿಲ್ಲೆ ಮತ್ತು ಗ್ರಾಮ ಪಂಚಾಯ್ತಿ ಹಂತದಲ್ಲಿ ಆಂದೋಲನದ ಕುರಿತು ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸೂಚಿಸಲಾಗಿದೆ.
ಸ್ಪರ್ಧಾ ವಿನ್ಯಾಸ ಹೀಗಿರಬೇಕು: ಪ್ರತಿಯೊಬ್ಬ ಕುಟುಂಬದ ಮಾಲೀಕರು ತಮ್ಮ ಶೌಚಾಲಯಗಳಿಗೆ ಹೊಸದಾಗಿ ವಿನೂತನವಾಗಿ ಬಣ್ಣ ಬಳಿಸುವುದು. ಶೌಚಾಲಯದ ಗೋಡೆಯ ಮೇಲೆ ವಿಭಿನ್ನ ಸಂದೇಶ ಸಾರುವ ಚಿತ್ರ ಮತ್ತು “ಸ್ವಚ್ಛ ಭಾರತ್ (ಗ್ರಾ) ಚಿಹ್ನೆ’ ಬಿಡಿಸುವುದು. ಜತೆಗೆ ಗೋಡೆಗಳ ಮೇಲೆ ಶೌಚಾಲಯ ಬಳಕೆ ಕುರಿತ ಸಂದೇಶ ಬರೆಯಿಸುವುದನ್ನು ಕೂಡ ಕಡ್ಡಾಯವಾಗಿರುತ್ತದೆ. ಹಾಗೆಯೇ ಸ್ವಚ್ಛ ಭಾರತ್ ಮಿಷನ್ ಘೋಷ ವಾಕ್ಯಗಳ ಬರಹವನ್ನು ಬಳಸಬೇಕಾಗುತ್ತದೆ ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯ ಹಿರಿಯ ಅಧಿಕಾರಿಗಳೊಬ್ಬರು ಮಾಹಿತಿ ನೀಡಿದ್ದಾರೆ.
ಆಯ್ಕೆ ವಿಧಾನ ಹೇಗಿರುತ್ತೆ: ಸ್ವಚ್ಛ ಸುಂದರ ಶೌಚಾಲಯ ಸ್ಪರ್ಧಾವಧಿಯಲ್ಲಿ ಅತಿ ಹೆಚ್ಚು ಶೌಚಾಲಯಗಳಿಗೆ ಬಣ್ಣ ಬಳಿದಿರುವ ಶೇಕಡಾವಾರು ಫಲಿತಾಂಶದ ಆಧಾರದ ಮೇಲೆ ಪ್ರತಿ ರಾಜ್ಯದಿಂದ ಮೂರು ಜಿಲ್ಲೆಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ರೀತಿಯಲ್ಲಿ ಆಯ್ಕೆಯಾದ ಮೂರು ಜಿಲ್ಲೆಗಳ ಐದು ಸೃಜನಾತ್ಮಕ ಬಣ್ಣ ಬಳದಿರುವ ಶೌಚಾಲಯಗಳ ಫೋಟೋಗಳನ್ನು ರಾಜ್ಯ ಹಂತಕ್ಕೆ ಕಳುಹಿಸಿಕೊಡಲಾಗುತ್ತದೆ. ಪುರಸ್ಕಾರಕ್ಕೆ ಆಯ್ಕೆ ಮಾಡಲು ಕೇಂದ್ರ ಸರ್ಕಾರ ಮೌಲ್ಯ ಮಾಪನ ಸಮಿತಿಯನ್ನು ನೇಮಕ ಮಾಡಿದ್ದು ಎಲ್ಲಾ ರಾಜ್ಯಗಳು ಫೆಬ್ರುವರಿ 10 ರೊಳಗೆ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯದ ವೆಬ್‌ಸೈಟ್ wachhbharatmission.gov.insshaaya/portal ನಲ್ಲಿ ನಾಮ ನಿರ್ದೇಶನ ಮಾಡುವಂತೆ ಸೂಚಿಸಲಾಗಿದೆ.
ಬೆಂ.ನಗರ ಜಿಲ್ಲಾಡಳಿತ ಸಜ್ಜು: ಕೇಂದ್ರ ಸರ್ಕಾರ ರೂಪಿಸಿರುವ “ಸ್ವಚ್ಛ ಸುಂದರ ಶೌಚಾಲಯ ಸ್ಪರ್ಧೆ’ಗಾಗಿ ಬೆಂಗಳೂರು ನಗರ ಜಿಲ್ಲಾಡಳಿತ ಈಗಾಗಲೇ ಸಿದ್ಧವಾಗಿದೆ. ಇದನ್ನು ಯಶಸ್ವಿಗೊಳಿಸುವ ಸಂಬಂಧ ಆಯಾ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಗ್ರಾಮೀಣಾಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬೆಂಗಳೂರು ನಗರ ಜಿಪಂ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಶೌಚಾಲಯಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಈ ಸ್ಪರ್ಧೆಯ ಮುಖ್ಯಉದ್ದೇಶವಾಗಿದ್ದು, ಇದರ ಯಶಸ್ಸಿನ ಸಂಬಂಧ ಬೆಂಗಳೂರು ನಗರ ಜಿಲ್ಲಾಡಳಿತ ಆಯಾ ಅಧಿಕಾರಿಗಳಿಗೆ ಸೂಚನೆ ನೀಡಿದೆ.
-ಎಂ.ಎಸ್.ಅರ್ಚನಾ, ಬೆಂಗಳೂರು ನಗರ ಜಿ.ಪಂ ಸಿಇಒ
* ದೇವೇಶ ಸೂರಗುಪ್ಪ