ಹೊಸದಿಲ್ಲಿ: ಪಕ್ಷದ ಪರವಾಗಿ ಪಾದಯಾತ್ರೆ ನಡೆಸುತ್ತಿದ್ದ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮೇಲೆ ವ್ಯಕ್ತಿಯೊಬ್ಬ ದ್ರವವೊಂದನ್ನು ಎರಚಿರುವ ಘಟನೆ ದಕ್ಷಿಣ ದೆಹಲಿಯ ಮಾಳವೀಯ ನಗರದಲ್ಲಿ ನಡೆದಿದೆ.
ಆರೋಪಿಯನ್ನು ಅಶೋಕ್ ಝಾ ಎಂದು ಗುರುತಿಸಲಾಗಿದ್ದು ಆತನ್ನು ಕೇಜ್ರಿವಾಲ್ ಬೆಂಬಲಿಗರು ಥಳಿಸಿ ಪೊಲೀಸರ ವಶಕ್ಕೊಪ್ಪಿಸಿದ್ದಾರೆ. ಘಟನೆಯನ್ನು ಖಂಡಿಸಿರುವ ಆಪ್, “ಬಿಜೆಪಿ ಆಡಳಿತಾವಧಿಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ರಾಷ್ಟ್ರ ರಾಜಧಾನಿಯಲ್ಲಿ ಮಾಜಿ ಸಿಎಂ ಸುರಕ್ಷಿತವಾಗಿಲ್ಲ ಎಂದಾದರೆ ಶ್ರೀ ಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದೆ.
ಏತನ್ಮಧ್ಯೆ ದೆಹಲಿ ಸಿಎಂ ಅತಿಶಿ, ಬಂಧಿತ ಆರೋಪಿಯು ಬಿಜೆಪಿ ಕಾರ್ಯಕರ್ತ ಎಂದು ಆರೋಪಿಸಿದ್ದಾರೆ. ಮತ್ತು ಸಚಿವ ಸೌರಭ್ ಭಾರದ್ವಾಜ್, ಆರೋಪಿಯು ಕೇಜ್ರಿವಾಲ್ ಮೇಲೆ ಸ್ಪಿರಿಟ್ ಎಸೆದಿದ್ದು ಅವರನ್ನು ಜೀವಂತ ಸುಡಲು ಮುಂದಾಗಿದ್ದ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಳೆದೊಂದು ತಿಂಗಳಿನಲ್ಲಿ ಕೇಜ್ರಿವಾಲ್ ವಿರುದ್ಧ ಅ.25ರಂದು ವಿಕಾಸ್‌ಪುರಿಯಲ್ಲಿ, ನ.27ರಂದು ನಂಗ್ಲೋಯಿಯಲ್ಲಿ, ಮತ್ತು ನ.30ರಂದು ಮಾಳವೀಯನಗರದಲ್ಲಿ ಒಟ್ಟು 3 ಬಾರಿ ದಾಳಿ ನಡೆದಿದೆ ಎಂದು ಆಪ್ ತಿಳಿಸಿದೆ.