Advertisement

ಪಡುಮಲೆ: ಗರಡಿ ನಿರ್ಮಾಣವಾಗಲಿ; ಪುತ್ತೂರು ಬಸ್‌ ನಿಲ್ದಾಣಕ್ಕೆ ಕೋಟಿ-ಚೆನ್ನಯ ಹೆಸರು

06:36 PM Mar 27, 2023 | Team Udayavani |

ಪುತ್ತೂರು: ಪುತ್ತೂರಿನ ಇತಿಹಾಸ, ಚರಿತ್ರೆಗೆ ನಕ್ಷತ್ರದಂತೆ ಇರುವ ಶಕ್ತಿಗಳೆಂದರೆ ಕೋಟಿ-ಚೆನ್ನಯರು. ಅಂತಹ ಕಾರಣಿಕ ಶಕ್ತಿಗಳ ಹೆಸರನ್ನು ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಇಡುವ ಮೂಲಕ ಸರಕಾರ ಗೌರವ ಸಲ್ಲಿಸಿದೆ ಎಂದು ರಾಜ್ಯ ಕಿಯೋನಿಕ್ಸ್‌ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ ಹೇಳಿದರು.

Advertisement

ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಕೋಟಿ ಚೆನ್ನಯ ನಾಮಕರಣದ ಸಮಾರಂಭದ್ಲಲಿ ಅವರು ಮಾತನಾಡಿದರು. ಕರಾವಳಿಯಲ್ಲಿ 264 ಗರಡಿಗಳಿವೆ. ಕೋಟಿ -ಚೆನ್ನಯರು ಒಂದು ಜಾತಿಯಲ್ಲಿ ಹುಟ್ಟಿ ರಬಹುದು. ಆದರೆ ಅದನ್ನು ಮೀರಿ ಬೆಳೆದು ನಿಂತ ದೈವಿಕ ಶಕ್ತಿಗಳಾಗಿದ್ದಾರೆ. ಹಾಗಾಗಿ ಅವರನ್ನು ಒಂದು ಜಾತಿಗೆ ಸೀಮಿತಪಡಿಸಬಾರದು ಎಂದರು. ಅವರ ಜನ್ಮಭೂಮಿಯಲ್ಲಿ ಗರಡಿಯಿಲ್ಲ. ಇಂತಹ ಪುಣ್ಯ ಭೂಮಿಯಲ್ಲಿ ಗರಡಿ ನಿರ್ಮಿಸಿ ಆ ನೆಲವನ್ನು ಬೆಳಗಿಸಬೇಕು ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಶುಭ ಹಾರೈಸಿದರು. ನಗರಸಭೆ ಅಧ್ಯಕ್ಷ ಕೆ.ಜೀವಂಧರ್‌ ಜೈನ್‌ ಮಾತನಾಡಿ ಕೋಟಿ ಚೆನ್ನಯರ ನಾಮಕರಣ ನಗರಸಭೆಗೂ ಹೆಮ್ಮೆ ತಂದಿದೆ ಎಂದರು. ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಜಯಂತ ನಡುಬೈಲು ಮಾತ ನಾಡಿ, ಗೆಜ್ಜೆಗಿರಿ, ಪಡುಮಲೆ, ಹನುಮ ಗಿರಿ ಕ್ಷೇತ್ರಗಳನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಕೆಲಸವನ್ನು ಶಾಸಕರು ಮಾಡಿದ್ದಾರೆ ಎಂದರು.

ಶಾಸಕರಿಗೆ ಸಮ್ಮಾನ 
ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಕೋಟಿ ಚೆನ್ನಯ ನಾಮಕರಣ ಮಾಡಲು ಕಾರಣ ಕರ್ತರಾದ ಶಾಸಕ ಸಂಜೀವ ಮಠಂದೂರು ಅವರನ್ನು ಬಿಲ್ಲವ ಸಮಾಜದ ವಿವಿಧ ಸಂಘಟನೆಯಿಂದ ಸಮ್ಮಾನಿಸಲಾಯಿತು. ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್‌. ಗೌರಿ, ಸಹಾಯಕ ಆಯುಕ್ತ ಗಿರೀಶ್‌ ನಂದನ್‌, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್‌ ಶೆಣೈ, ಬಿಜೆಪಿ ಹಿಂದುಳಿದ ಮೋರ್ಚಾದ ಜಿಲ್ಲಾಧ್ಯಕ್ಷ ಆರ್‌. ಸಿ. ನಾರಾಯಣ್‌, ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಉಲ್ಲಾಸ್‌ ಕೋಟ್ಯಾನ್‌, ನಗರಸಭೆ ಪೌರಾಯುಕ್ತ ಮಧು ಎಸ್‌. ಮನೋಹರ್‌ಉಪಸ್ಥಿತರಿದ್ದರು.

ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಸ್ವಾಗತಿಸಿದರು. ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ಮುರಳೀಧರ ಆಚಾರ್ಯ ವಂದಿಸಿದರು. ಉಮೇಶ್‌ ಶೆಟ್ಟಿ ಮತ್ತು ಮಾಧವ ಶೆಣೈ ನಿರೂಪಿಸಿದರು.

Advertisement

ಗರಡಿಗಳಿಗೆ ಸ್ಥಳ ಮಂಜೂರಿಗೆ ಸರಕಾರ ಬದ್ಧ
ನಾಮಕರಣದ ಫ‌ಲಕ ಅನಾವರಣ ಮಾಡಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಪ್ರಯತ್ನದಿಂದ ಪುತ್ತೂರು ಬಸ್‌ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರನ್ನಿಡಲಾಗಿದೆ. ಭವಿಷ್ಯದಲ್ಲಿ ಕರಾವಳಿಯ 264 ಗರಡಿಗಳ ಪೈಕಿ ಸರಕಾರಿ ಜಾಗದಲ್ಲಿ ಇರುವ ಗರಡಿಗಳಿಗೆ ಜಾಗ ಮಂಜೂರು ಮಾಡಲು ಸರಕಾರ ಬದ್ಧವಾಗಿದೆ ಎಂದ ಅವರು, ಪುತ್ತೂರಿನಲ್ಲಿ ಕೋಟಿ-ಚೆನ್ನಯರ ಹೆಸರಿನಲ್ಲಿ ಥೀಮ್‌ ಪಾರ್ಕ್‌ ನಿರ್ಮಿಸುವ ಯೋಜನೆ ಇದ್ದು ಅದಕ್ಕೆ ಬೇಕಾದ ಸರಕಾರಿ ಜಾಗ ಮಂಜೂರಾತಿ ಮಾಡಿಕೊಡುವ ಬಗ್ಗೆ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ ಎಂದರು.

ಜಿಲಾಡಳಿತ ಸಹಕಾರ
ಜಿಲ್ಲಾಧಿಕಾರಿ ಎಂ.ಆರ್‌. ರವಿ ಕುಮಾರ್‌ ಮಾತನಾಡಿ, ಕೋಟಿ ಚೆನ್ನಯರಂತಹ ವೀರ ಪುರುಷರು ಯುವ ಸಮುದಾಯಕ್ಕೆ ಸ್ಫೂರ್ತಿಯಾಗಿದ್ದಾರೆ. ಪಡುಮಲೆ ಜನ್ಮಸ್ಥಳದಲ್ಲಿ ಗರಡಿ ನಿರ್ಮಾಣಕ್ಕಾಗಿ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ನೀಡುವ ಕೋರಿಕೆಗೆ ಜಿಲ್ಲಾಡಳಿತದ ವತಿಯಿಂದ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next