ಕುಂದಾಪುರ: ಸುತ್ತಲೂ ಆವರಿಸಿರುವ ಜಲರಾಶಿ. ಇದರ ಮಧ್ಯೆ ಒಂದು ಊರು. ಈ ಊರು ತಲುಪಬೇಕಾದರೆ ಈ ಜಲ ರಾಶಿಯನ್ನು ಸೀಳಿಕೊಂಡೇ ಸಾಗಬೇಕು. ಅದು ಕೇವಲ ದೋಣಿ ಮೂಲಕ ಮಾತ್ರ. ಮಕ್ಕಳು ಶಾಲೆಗೆ ಹೋಗಲು, ಜನರು ಕೆಲಸಕ್ಕೆ ಹೋಗಲು, ದಿನಸಿ ತರಲು, ಕಚೇರಿಗಳಿಗೆ, ದೋಣಿಯೊಂದೇ ಆಧಾರ. ಯಾರಿಗಾದರೂ ಅನಾರೋಗ್ಯ ಉಂಟಾದರೂ ದೋಣಿಯಲ್ಲಿಯೇ ಆಚೆ ದಡದಿಂದ ಈಚೆ ದಡಕ್ಕೆ ಕರೆತರಬೇಕು.
ಕಟ್‌ಬೆಲ್ತೂರು ಗ್ರಾಮದ ಸುಳ್ಸೆ ಸಮೀಪದ ದ್ವೀಪದಂತಿರುವ ಪಡುಕುದ್ರು ಎಂಬ ಊರಿನಲ್ಲಿ ನೆಲೆಸಿರುವ ಎರಡು ಕೂಡು ಕುಟುಂಬಗಳ ನೂರಕ್ಕೂ ಮಿಕ್ಕಿ ಜನ ಪಡುತ್ತಿರುವ ನಿತ್ಯದ ಬವಣೆಯಿದು.
ಶಾಲೆಗೆ ಹೋಗುವ ಮಕ್ಕಳು
ಇಲ್ಲಿರುವ ಎರಡು ಮನೆಗಳಿಂದ ಸುಳ್ತೆ, ಹೆಮ್ಮಾಡಿ, ಕುಂದಾಪುರ, ಮಣಿಪಾಲಕ್ಕೆ ಶಾಲಾ- ಕಾಲೇಜುಗಳಿಗೆ ಹೋಗುವ 10 ಮಂದಿ ಮಕ್ಕಳಿದ್ದಾರೆ. ಒಬ್ಬರು ಶಿಕ್ಷಕಿಯೂ ಇದ್ದಾರೆ. ನಿತ್ಯ ಕೆಲಸಕ್ಕೆ ಹೋಗುವವರೂ ಇದ್ದಾರೆ. ಅವರೆಲ್ಲ ಪ್ರತೀ ದಿನ ಈ ದೋಣಿಯಲ್ಲೇ ಸಾಗಬೇಕು. ಜೋರು ಮಳೆ ಬಂದರೆ ದೋಣಿ ನಡೆಸಲು ಇಬ್ಬರು ಬೇಕು. ನದಿ ನೀರಿನ ಸೆಳೆತ ಜಾಸ್ತಿ ಇರುವುದರಿಂದ ದೋಣಿ ಕೊಚ್ಚಿಕೊಂಡು ಬೇರೆಡೆ ಹೋಗುವ ಆತಂಕವೂ ಇರುತ್ತದೆ. ನೆರೆ ಬಂದಾಗಲಂತೂ ದೋಣಿ ನಡೆಸಲು ಸಾಧ್ಯವೇ ಇಲ್ಲದ ಸ್ಥಿತಿ ಇರುತ್ತದೆ. ಆಗೆಲ್ಲ ಮಕ್ಕಳು ರಜೆಯೇ ಮಾಡಬೇಕಾಗುತ್ತದೆ.
ಇಲ್ಲಿರುವ ಎರಡು ಮನೆಗಳ ಹಿರಿ ತಲೆಗಳಾದ ಅಕ್ಕಮ್ಮ (90) ಹಾಗೂ ಸುಬ್ಬಿ (84) ಅವರಿಬ್ಬರು ಈ ಪಡುಕುದ್ರುವಿಗೆ ಸೇತುವೆಗಾಗಿ ಅನೇಕ ವರ್ಷಗಳಿಂದ ಸತತ ಹೋರಾಟ ಮಾಡಿ, ಪ್ರಯತ್ನ ಪಟ್ಟಿದ್ದರು. ಅವರ ಕಾಲವಾಗಿ ಕೆಲವು ವರ್ಷವಾದರೂ ಇನ್ನೂ ಸೇತುವೆ ಬೇಡಿಕೆ ಮಾತ್ರ ಈಡೇರಿಲ್ಲ.
ಕೃಷಿ ಕಾರ್ಯವೂ ಕಷ್ಟವೇ
ಈ ಪಡುಕುದ್ರು ಅಂದಾಜು 20 ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿದೆ. ಹಿಂದೆ ಅದಕ್ಕೂ ಹೆಚ್ಚು ಪ್ರದೇಶವಿದ್ದು, ನದಿ ನೀರಿನ ಕೊರೆತಕ್ಕೆ ಕಿರಿದಾಗುತ್ತಿದೆ. ಈ ಪೈಕಿ 15 ಎಕರೆಗೂ ಮಿಕ್ಕಿ ಪ್ರದೇಶದಲ್ಲಿ ಭತ್ತ, ತೆಂಗು ಕೃಷಿ ಪ್ರದೇಶವಿದೆ. ಹಿಂದೆ ಕಬ್ಬು, ನೆಲೆಗಡಲೆ ಬೆಳೆಯುತ್ತಿದ್ದರು. ಆದರೆ ಈಗ ಭತ್ತದ ಬೆಳೆ ಕಟಾವಿಗೆ ಯಂತ್ರಗಳನ್ನು ತರಲು ಹೊಳೆಯಲ್ಲಿ ನೀರು ಕಡಿಮೆ ಆಗುವವರೆಗೆ ಕಾಯಬೇಕು. ಭತ್ತ ಅಕ್ಕಿ ಮಿಲ್‌ಗೆ ಸಾಗಿಸಲು, ತೆಂಗಿನ ಕಾಯಿ ಕೊಂಡೊಯ್ಯಲು ಹೀಗೆ ಎಲ್ಲ ಕೃಷಿ ಕಾರ್ಯಕ್ಕೂ ದೋಣಿಯನ್ನೇ ಅವಲಂಬಿಸಬೇಕಾಗಿದೆ. ಸಂಪರ್ಕ ಕಲ್ಪಿಸುವುದಾದರೆ 65 ಮೀಟರ್ ಉದ್ದದ ಸೇತುವೆ ನಿರ್ಮಿಸಬೇಕಾಗುತ್ತದೆ.
2 ಕುಟುಂಬ; 120 ಜನ
ಈ ಪಡುಕುದ್ರುವಿನಲ್ಲಿರುವುದು ಎರಡೇ ಕುಟುಂಬ. ಆದರೆ ಈ ಕುಟುಂಬದಲ್ಲಿ ಒಟ್ಟಾರೆ ಎಲ್ಲ ಸೇರಿದರೆ 125 ಜನ ಆಗುತ್ತಾರೆ. ಆದರೆ ಸಂಪರ್ಕ ಸಮಸ್ಯೆಯಿಂದ ಹೆಚ್ಚಿನವರು ಕುದ್ರುವಿನಿಂದ ಹೊರಗೆ ಮನೆ ಮಾಡಿಕೊಳ್ಳುವಂತಾಗಿದೆ. ನಾಗಮ್ಮ ದೇವಾಡಿಗರ ಮನೆಯಲ್ಲಿ ಒಟ್ಟಾರೆ 95 ಮಂದಿಯಿದ್ದು, ಈಗ ಇಲ್ಲಿರುವುದು 30 ಮಂದಿ. ಎಲ್ಲ ಹಬ್ಬ, ಪೂಜೆ, ಮನೆಯಲ್ಲಿ ಏನಾದರೂ ಕಾರ್ಯಕ್ರಮವಿದ್ದಾಗ ಬಂದು ಸೇರುತ್ತಾರೆ. ಇನ್ನು ಲಕ್ಷ್ಮಿ ಪೂಜಾರ್ತಿ ಅವರ ಮನೆಯಲ್ಲಿ ಒಟ್ಟಾರೆ 25 ಮಂದಿಯಿದ್ದು, ಈಗ 10 ಮಂದಿ ಮನೆಯಲ್ಲಿದ್ದಾರೆ.
ದೋಣಿಯೇ ಕೊಚ್ಚಿ ಹೋಗಿತ್ತು
ಪಡುಕುದ್ರುವಿನ ಜನರ “ಬದುಕಿನ ಬಂಡಿ’ಯಾಗಿದ್ದ ದೋಣಿಯೊಂದು 15 ದಿನಗಳ ಹಿಂದೆ ಭಾರೀ ಮಳೆ, ನೆರೆಗೆ ರಾತ್ರಿ ವೇಳೆ ಸುಮಾರು ಕೊಚ್ಚಿಕೊಂಡು ಹೋಗಿತ್ತು. ಆ ದೋಣಿಯನ್ನು ಸರಿಗೆ ಹಾಗೂ ಹಗ್ಗದಿಂದ ಕಟ್ಟಿ ಹಾಕಿದ್ದರೂ, ಅದು ಗಾಳಿ – ಮಳೆ ಅಬ್ಬರಕ್ಕೆ ಕಳಚಿಕೊಂಡು ಹೋಗಿತ್ತು. ಸುತ್ತ ಹುಡುಕಾಡಿದರೂ, ಸಿಕ್ಕಿರಲಿಲ್ಲ. ಸುಮಾರು ದೂರದ ಕಾಂಡ್ಲಾ ಮರಗಳ ಮಧ್ಯೆ ಸಿಲುಕಿ ಹಾಕಿಕೊಂಡಿತ್ತು.
ನೆರೆ ಬಂದಾಗ ತುಂಬಾ ಕಷ್ಟ
ಬೇರೆ ಸಮಯದಲ್ಲಿ ಹೇಗೋ ದೋಣಿಯಲ್ಲಿ ಸಂಚರಿಸಬಹುದು. ಆದರೆ ನೆರೆ ಬಂದಾಗ ದೋಣಿಯಲ್ಲಿ ಹೋಗಲೂ ಭಯವಾಗುತ್ತದೆ. ದೋಣಿ ನಡೆಸಲು ಇಬ್ಬರು ಬೇಕಾಗುತ್ತದೆ. ಅನೇಕ ವರ್ಷಗಳಿಂದ ಸೇತುವೆ ಮಾಡಿಕೊಡಿ ಎಂದು ಕೇಳುತ್ತಿದ್ದೇವೆ. 40 ವರ್ಷದಿಂದ ಈವರೆಗಿನ ಎಲ್ಲ ಶಾಸಕರಿಗೂ ಮನವಿ ಕೊಟ್ಟಾಯಿತು. ಇನ್ನೆಷ್ಟು ವರ್ಷ ಕಾಯಬೇಕೋ ಗೊತ್ತಿಲ್ಲ.
– ಮಂಜು ದೇವಾಡಿಗ, ರಮೇಶ್ ಪೂಜಾರಿ, ಪಡುಕುದ್ರು ನಿವಾಸಿಗಳು
– ಪ್ರಶಾಂತ್ ಪಾದೆ