Advertisement

Padubidri: ಮುದರಂಗಡಿಯಲ್ಲಿ ಕಾಡುಕೋಣ ಹಾವಳಿ; ವಾಹನ ಸವಾರರಿಗೆ ಅಪಾಯ

04:12 PM Oct 15, 2024 | Team Udayavani |

ಪಡುಬಿದ್ರಿ: ಮುದರಂಗಡಿ ಗ್ರಾ. ಪಂ. ವ್ಯಾಪ್ತಿಯಲ್ಲಿ ವರ್ಷಗಳಿಂದಲೇ ಚರ್ಚೆಯಾಗುತ್ತಿರುವ ಕಾಡುಕೋಣಗಳ ಹಾವಳಿ ಮತ್ತೆ ಅತಿಯಾಗಿದೆ. ಕೆಲಸ ಬಿಟ್ಟು ಮನೆಗೆ ಮೋಟಾರು ಬೈಕಲ್ಲಿ ತೆರಳುತ್ತಿದ್ದ ಸಾಂತೂರಿನ ರವಿ ಆಚಾರ್ಯ ಅವರಿಗೆ ರಸ್ತೆಗೆ ಅಡ್ಡಬಂದ ಕಾಡುಕೋಣದಿಂದಾಗಿ ಅಪಘಾತ ಸಂಭವಿಸಿದ್ದು ತೀವ್ರತರ ಗಾಯಗೊಂಡ ಅವರು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ವಲಯ ಅರಣ್ಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಹೇಳಿಕೆಗಳನ್ನು ಪಡೆದು ಕೊಂಡಿದ್ದಾರೆ. ಸರಕಾರದ ಸೂಕ್ತ ಪರಿಹಾರದ ಮೊತ್ತವನ್ನು ರವಿ ಆಚಾರ್ಯ ಅವರಿಗೆ ದೊರಕಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಕಾಪು ವಲಯ ಉಪ ಅರಣ್ಯ ಅಧಿಕಾರಿ ಜೀವನ್‌ದಾಸ್‌ ಶೆಟ್ಟಿ ಅವರು ಹೇಳಿದ್ದಾರೆ.

ಇನ್ನಾ, ಬೆಳ್ಮಣ್‌ ಜಂತ್ರ, ಕಿನ್ನಿಗೋಳಿ ಭಾಗದಲ್ಲೂ ಇದೀಗ ಈ ಕಾಡುಕೋಣಗಳು ಜನತೆಯ ಎದುರು ಪ್ರತ್ಯಕ್ಷವಾಗಿದ್ದು ಭಯಭೀತ ವಾತಾವರಣವು ಸೃಷ್ಟಿಯಾಗಿದೆ. ಇದಕ್ಕೆ ಅರಣ್ಯ ಇಲಾಖೆ ಸೂಕ್ತ ಕ್ರಮ ವನ್ನು ಕೈಗೊಳ್ಳಬೇಕಿದೆ ಎಂದೂ ಮುದರಂಗಡಿ ಗ್ರಾ. ಪಂ. ಮಾಜಿ ಅಧ್ಯಕ್ಷ, ಸದಸ್ಯ ರವೀಂದ್ರ ಪ್ರಭು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ನಾಳೆ ಕಾಡಿಗಟ್ಟುವ ಕಾರ್ಯಾಚರಣೆ
ಪಿಲಾರು ಅರಣ್ಯ ಪ್ರದೇಶದಲ್ಲಿ ಕಾಡುಕೋಣಗಳ ದಿಂಡುಗಳ ವಾಸ್ತವ್ಯವಿದೆ. ಬೆರಳೆಣಿಕೆಯಲ್ಲಿದ್ದ ಈ ಪ್ರಾಣಿಗಳ ಹೆಣ್ಣು, ಗಂಡು ಸಂತತಿಯಿಂದಾಗಿ ವಂಶಾಭಿವೃದ್ಧಿಯಾಗಿದ್ದು ಇಲ್ಲಿಂದ ಹೊರಬಂದಿರುವ ಕೆಲವೊಂದು ಕಾಡುಕೋಣಗಳು ಯುಪಿಸಿಎಲ್‌ಗಾಗಿ ಸಾಂತೂರಿನಲ್ಲಿ ಈ ಹಿಂದೆ ಕೆಐಎಡಿಬಿ ಸ್ವಾಧೀನಪಡಿಕೊಂಡಿರುವ ಭೂಭಾಗದಲ್ಲಿ ಹುಲುಸಾಗಿ ಹುಲ್ಲು ಬೆಳೆದಿರುವ ಎಕ್ರೆಗಟ್ಟಲೆ ಜಾಗದಲ್ಲಿ ಅವು ವಿಹರಿಸಿಕೊಂಡಿವೆ. ಇಲ್ಲೇ ಅವುಗಳ ಸಂಖ್ಯಾಭಿವೃದ್ಧಿಯೂ ಆಗಿದ್ದು ಅ. 16ರಂದು ಇಲಾಖಾ ಸಹಕಾರ ಹಾಗೂ ಸ್ಥಳೀಯರ ಜತೆಗೂಡಿ ಇವುಗಳನ್ನು ಮತ್ತೆ ಕಾಡಿಗಟ್ಟುವ ನಿಟ್ಟಿನಲ್ಲಿ ಪಟಾಕಿ ಸಿಡಿಸಿ ಓಡಿಸುವ ಕಾರ್ಯಾಚರಣೆಯನ್ನೂ ಕೈಗೊಳ್ಳಲಾಗುವುದೆಂದೂ ಅರಣ ಅಧಿಕಾರಿ ಜೀವನ್‌ದಾಸ್‌ ಶೆಟ್ಟಿ ಮಾಹಿತಿ ಇತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next