ಪಡುಬಿದ್ರಿ: ಉಡುಪಿ ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ ಅವರು ಜಿಲ್ಲಾ ಕೈಗಾರಿಕೆ ಇಲಾಖೆ, ಪರಿಸರ ಇಲಾಖೆ ಅಧಿಕಾರಿಗಳು, ಕುಂದಾಪುರದ ಸಹಾಯಕ ಕಮಿಶನರ್ ಮಹೇಶ್‌ಚಂದ್ರ, ಕಾಪು ತಹಶೀಲ್ದಾರ್ ಡಾ| ಪ್ರತಿಭಾ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮತ್ತಿತರೊಂದಿಗೆ ನಂದಿಕೂರಿನ ಎಂ. 11 ಜೈವಿಕ ಡೀಸೆಲ್ ಉತ್ಪಾದನ ಘಟಕಕ್ಕೆ ಸ್ಥಳೀಯರ ದೂರಿನನ್ವಯ ಸೋಮವಾರ ಭೇಟಿ ನೀಡಿದರು.
ಸ್ಥಳೀಯರು, ಅಧಿಕಾರಿಗಳ, ಎಂ 11 ಆಡಳಿತ ನಿರ್ದೇಶಕ ಸುಬಾನ್ ಖಾನ್ ಜತೆಗೆ ಸಭೆ ನಡೆಸಿದ ಅವರು, ಸರಕಾರದ ಅನುಮತಿಯೊಂದಿಗೆ ಕೈಗಾರಿಕೆಯನ್ನು ಆರಂಭಿಸಿದ್ದೀರಿ. ಪರಿಸರ ಸಮಸ್ಯೆಗಳು ಉಳಿದುಕೊಂಡಿವೆ. ಜಲಮಾಲಿನ್ಯ ಆಗುವಂತಿಲ್ಲ. ಸ್ಥಳೀಯರಿಗೆ ಉದ್ಯೋಗ ನೀಡುವ ವಿಷಯದಲ್ಲಿ ರಾಜಿ ಇಲ್ಲ ಎಂದರು.
ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ನಾಗರಾಜ್ ಅವರು ಎಂ. 11 ಘಟಕವು ಉದ್ಯೋಗಿಗಳ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಸರಿಯಾಗಿ ನೀಡಿಲ್ಲ. 74 ಉದ್ಯೋಗಿಗಳಲ್ಲಿ 31 ಮಂದಿ ಉಡುಪಿಯವರಿದ್ದರೂ, 21 ಮಂದಿಯನ್ನು ತತ್‌ಕ್ಷಣದಿಂದಲೇ ಉದ್ಯೋಗದಿಂದ ತೆಗೆಯಲಾಗಿದೆ. ಇದು ಸರಿಯಲ್ಲ ಎಂದರು.
ಜಿಲ್ಲಾ ಪರಿಸರ ಇಲಾಖಾ ಅಧಿಕಾರಿ ಕೀರ್ತಿಕುಮಾರ್‌ಗೆ ಡಿಸಿ ನಿರ್ದೇಶನ ನೀಡಿ, ಪರಿಸರದಲ್ಲಿ ನೀರು ಮಾಲಿನ್ಯವಾಗಿರುವುದನ್ನು ಹಾಗೂ ಘಟಕದಿಂದ ಕೆಟ್ಟ ವಾಸನೆ ಹೊರ ಬರುವುದನ್ನು ಎನ್‌ಐಟಿಕೆ ಅಥವಾ ಐಐಟಿಯ ಹಿರಿಯ ತಜ್ಞರ ಸಮಕ್ಷಮದಲ್ಲಿ ಪರಿಶೀಲಿಸಿ ವರದಿ ತರಿಸಿಕೊಳ್ಳಬೇಕು ಎಂದರು.
ಶಾಸಕ ಸುರೇಶ್ ಶೆಟ್ಟಿ ಅವರೂ ಎಲ್ಲ ಉಪಕ್ರಮಗಳನ್ನು ಕೈಗೊಂಡು ಕೈಗಾರಿಕೆಯನ್ನು ಮುನ್ನಡೆಸಿ ಎಂದರು.
ಕಾಪು ತಾ. ಪಂ. ಮುಖ್ಯ ಇಒ ಜೇಮ್ಸ್ ಡಿ’ ಸಿಲ್ವ, ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಪಿಎಸ್‌ಐ ಪ್ರಸನ್ನ, ಕಂದಾಯ ಪರಿವೀಕ್ಷಕ ಸಾಹಿಲ್, ಗ್ರಾ. ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತಿತರರಿದ್ದರು.