Advertisement
ತೇರು ಕಟ್ಟುವ ಕಾರ್ಯಕ್ಕೆ ವಿಶೇಷ ಮಹತ್ವವಿದ್ದು ಮೊಗವೀರ ಸಮಾಜದವರೇ ಇಲ್ಲಿ ತೇರು ಕಟ್ಟುತ್ತಾರೆ. ಕಡಲ ಮಕ್ಕಳು ಕಾಯಕಕ್ಕೆ ರಜೆ ಸಾರಿ ತೇರು ಕಟ್ಟುವ ಕಾಯಕವನ್ನು ನೂರಾರು ವರ್ಷಗಳಿಂದ ಚಾಚೂ ತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ.
ಮಾ.14ರಂದು ಜಾತ್ರೆ ಆರಂಭವಾಗಿದ್ದು, ಮಾ.21ರಂದು ದೇವರ ರಥೋತ್ಸವ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಪಡುಬಿದ್ರಿ ಕಾಡಿಪಟ್ಣ ಹಾಗೂ ನಡಿಪಟ್ಣ ಎಂಬ ಎರಡು ಊರು ಮೊಗವೀರ ಸಮುದಾಯದವರು ಸಾಂಘಿಕವಾಗಿ ಪಡುಬಿದ್ರಿ ದೇಗುಲದ ರಥವನ್ನು ಆಯ ಪ್ರಮಾಣ ಬದ್ಧವಾಗಿ ಕಟ್ಟಿ ಕೊಡುತ್ತಾರೆ. ದೊಡ್ಡ ವ್ಯಾಸದ ಸುತ್ತಳತೆಯ ಈ ಬ್ರಹ್ಮರಥವನ್ನು ಆಯನದ ಬಲಿ ನಡೆದ ಬಳಿಕ ಬೆಳಗ್ಗಿನ 7ಗಂಟೆಗೆ ಹೊರತರುತ್ತಾರೆ. ನಾಲ್ಕು ಘನಮರಗಳನ್ನು ನೆಟ್ಟು, 6 ಅಡ್ಡ ಹಲಗೆಗಳ ಅಖಾಡಗಳನ್ನು ನಿರ್ಮಿಸಿ, ಬೆತ್ತ ಹಾಗೂ ಅಡಕೆ ರೀಪುಗಳನ್ನು ಸುತ್ತಲೂ ಕಟ್ಟಿ ಮಧ್ಯಾಹ್ನದ 1-30ರ ಸುಮಾರಿಗೆ ಪೂರ್ಣಗೊಳಿಸಿ, ರಥದ ತುತ್ತತುದಿಯ ಮುಕುಟವನ್ನೂ ಇಟ್ಟು ಸಿದ್ಧಗೊಳಿಸುತ್ತಾರೆ. ತೇರು ಹೊರಕ್ಕೆ ತರುವ ಮೊದಲು ಗ್ರಾಮ ದೇವರು, ಶ್ರೀ ಕುಲಮಹಾಸ್ತ್ರೀ, ಶ್ರೀ ಮಹಾಲಕ್ಷಿ$¾à ದೇವರನ್ನು ಪ್ರಾರ್ಥಿಸಿ ಕೆಲಸವನ್ನು ಆರಂಭಿಸುತ್ತಾರೆ. ಬಳಿಕ ಕಟ್ಟಿದ ತೇರನ್ನು ದೇವಸ್ಥಾನದ ಎದುರು ಎಳೆದು ತಂದು ನಿಲ್ಲಿಸುತ್ತಾರೆ. ಅಲ್ಲಿಂದ ದೇವಸ್ಥಾನದ ಧ್ವಜಸ್ತಂಭದ ಮುಂದೆ ತೆರಳಿ ಅರ್ಚಕರೊಂದಿಗೆ ಮೊಗವೀರ ಜನಾಂಗದ ಉನ್ನತಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ಬಳಿಕ ಪ್ರಸಾದ ನೀಡಲಾಗುತ್ತದೆ.
Related Articles
ಹಿಂದೆ ತೇರು ಕಟ್ಟಲು ವ್ಯಕ್ತಿಯೊಬ್ಬರಿಗೆ 1-2 ರೂ. ನೀಡಲಾಗುತ್ತಿದ್ದು. ಇಂದು ದೇಗುಲ ಭಂಡಾರದಿಂದ 90 ರೂ. ಪಾವತಿಸಲಾಗುತ್ತದೆ. ದೇಗುಲ ರಥ ಕಟ್ಟುವುದು ಒಂದು ಗೌರವವಾಗಿದ್ದು ಮೊಗವೀರ ಸಮುದಾಯದವರು ಇದನ್ನು ಶ್ರದ್ಧಾ ಭಕ್ತಿಗಳಿಂದ ಮಾಡುತ್ತಾರೆ. ರಥ ಕಟ್ಟುವ ಕಾಯಕದ ಬಳಿಕ ಶ್ರದ್ಧಾಳುಗಳಿಗೆ ಅನ್ನಪ್ರಸಾದ ಬಡಿಸಲಾಗುತ್ತದೆ.
ಈ ಬಾರಿ ತೇರು ಕಟ್ಟುವ ಕಾಯಕವನ್ನು ಪಡುಬಿದ್ರಿ ನಡಿಪಟ್ಣ, ಕಾಡಿಪಟ್ಣ ಸಂಯುಕ್ತ ಸಭೆಯ ಅಧ್ಯಕ್ಷ ಸುಕುಮಾರ್ ಶ್ರೀಯಾನ್, ಕಾಡಿಪಟ್ಣ ಮೊಗವೀರ ಸಭೆಯ ಅಧ್ಯಕ್ಷ ಲೀಲಾಧರ ಸಾಲ್ಯಾನ್, ನಡಿಪಟ್ಣ ಸಭೆಯ ಅಧ್ಯಕ್ಷ ಶೇಖರ ಸಾಲ್ಯಾನ್ ಯುವಕರ ಮತ್ತು ಹಿರಿಯರ ದಂಡಿನೊಂದಿಗೆ ನಡೆಸಿದ್ದಾರೆ.
Advertisement