Advertisement

ಕಟ್ಟದಪ್ಪ ಪ್ರಿಯ ಪಡುಬಿದ್ರಿ ಗಣಪತಿಗೆ ವಿಶೇಷ ಅಪ್ಪ ಸೇವೆ

06:15 AM Aug 13, 2017 | Team Udayavani |

ಪಡುಬಿದ್ರಿ: ಇಲ್ಲಿನ ಸೀಮೆಗೊಡೆಯನಾಗಿ ಮಹಾಲಿಂಗೇಶ್ವರ ಹಾಗೂ ಕ್ಷಿಪ್ರ ಪ್ರಸಾದವನ್ನಿತ್ತು ಕಾಯುವ ಜಗತøಸಿದ್ಧ ಮಹಾಗಣಪತಿಯ ಕ್ಷೇತ್ರವಾಗಿ ಮೆರೆದಿದೆ. ಇಲ್ಲಿ ಮಹೇಶ್ವರನು ಪ್ರಧಾನ ದೇವರಾಗಿದ್ದು ಉಪಸ್ಥಾನ ಅಧಿಪತಿಯಾಗಿ ವಿನಾಯಕನಿರುವನು. 

Advertisement

ಪಡುಬಿದ್ರಿ ಗಣಪತಿಯು “ಕಟ್ಟದಪ್ಪ'(ಕಟಾಹಾಪೂಪ) ಪ್ರಿಯನಾಗಿದ್ದು, ಆ. 12ರಂದು ಇಲ್ಲಿ ಸಾರ್ವಜನಿಕ ಅಪ್ಪ ಸೇವೆಯು ನಡೆದಿದ್ದು, ಆ. 13ರಂದು ಪಾರಂಪರಿಕವಾಗಿ ನಡೆದು ಬಂದಿರುವ ಬ್ರಾಹ್ಮಣ ಸಮುದಾಯದ ಅಪ್ಪ ಸೇವೆ ವಿಶೇಷವಾಗಿ ನಡೆಯಲಿದೆ. 

ಪ್ರಚಲಿತ
ಆಟಿ ತಿಂಗಳಲ್ಲಿ ರೈತಾಪಿ ವರ್ಗ ತಮ್ಮ ಕೃಷಿ ಕಾಯಕವನ್ನು ಮುಗಿಸಿ ಧಾರಾಕಾರವಾಗಿ ಸುರಿವ ಮಳೆಗೆ ಮನೆಯೊಳಗಿದ್ದೇ ತಾವು ಬಿತ್ತಿರುವ ಭತ್ತವು ಮುಂದೆ ಉತ್ತಮ ಫಸಲಾಗಲಿ ಎಂದು ಬೇಡಿಕೊಳ್ಳುವ ಕಾಲವಿದು. ಮಳೆಗಾಲದಲ್ಲಿ ನೀರ ತೋಡುಗಳಿಗೆ “ಕಟ್ಟ'(ಒಡ್ಡು)ಗಳನ್ನು ಕಟ್ಟಿಕೊಂಡು ಶ್ರಮವಹಿಸಿ ತಾವು ನೀರೊಡ್ಡುವ ಗದ್ದೆಗಳಿಂದ ಉತ್ತಮ ಫಲ ಬರಲಿ ಎಂದು ಗ್ರಾಮದ ದೈವ,  ದೇವರುಗಳನ್ನು ಪ್ರಾರ್ಥಿಸುತ್ತಾರೆ. ಕೃಷಿ ಕಾಯಕಕ್ಕಾಗಿ ಕಟ್ಟಗಳನ್ನು ಕಟ್ಟಿದ ಬಳಿಕ ಈ ಒಡ್ಡುಗಳ ರಕ್ಷಣೆ ಮತ್ತು ಹೇರಳ ನೀರಾಶ್ರಯಕ್ಕಾಗಿ ಗ್ರಾಮ ದೇವರಿಗೆ ಸಮರ್ಪಿತಗೊಳ್ಳುವ ಅಪ್ಪ ಸೇವೆಗೆ “ಕಟ್ಟದಪ್ಪ’ವೆಂಬ ನಾಮಧೇಯವೂ ಪ್ರಚಲಿತವಿದೆ.

ಕಟಾಹಾಪೂಪ
ಈ ಕಟ್ಟದಪ್ಪ ಸೇವೆಯ ದಿನ ರಾತ್ರಿ ಪೂಜೆಯ ಸಂದರ್ಭ ಊರ ಪ್ರಮುಖರ ಸಹಿತ ಕೃಷಿಕರೆಲ್ಲರೂ(ಬ್ರಾಹ್ಮಣರ ಸೇವೆಯಂದು ಬ್ರಾಹ್ಮಣ ಹತ್ತು ಸಮಸ್ತರು) ದೇವಳದಲ್ಲಿ ಸೇರುತ್ತಾರೆ. ಸಾಮೂಹಿಕವಾಗಿ ಮಹಾಲಿಂಗೇಶ್ವರ ಹಾಗೂ ಪ್ರಧಾನವಾಗಿ ಮಹಾಗಣಪತಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಶ್ರೀ ದೇವರ ಸಮರ್ಪಣೆಗಾಗಿ ಬೆಳಿಗ್ಗಿನಿಂದಲೇ ಬಾಣಸಿಗರು ದೊಡ್ಡ, ದೊಡ್ಡ ಬಾಣಲೆಯಲ್ಲಿ ಕಾಯಿಸಿ ತಯಾರಿಸಿ ದೊಡ್ಡ ದೊಡ್ಡ ಕಟಾಹಗಳಲ್ಲಿ ಸಮರ್ಪಣೆಗಾಗಿ ಶ್ರೀ ದೇವರ ಮುಂದಿಡುವ ಅಪ್ಪಗಳನ್ನು “ಕಟಾಹಾಪೂಪ’ವೆಂದೂ ಕರೆಯಲಾಗುತ್ತದೆ. 

ಸಾರ್ವಜನಿಕ ಅಪ್ಪ ಸೇವೆಯಂದು ಈ ಬಾರಿ 80ಮುಡಿ ಅಕ್ಕಿಯ ಅಪ್ಪವು ಗಣಪತಿಗೆ ಸಮರ್ಪಿತವಾಗಿದೆ. ಈ ಅಕ್ಕಿಗೆ 180ಕೆಜಿ ಅರಳು, ಸುಮಾರು 2,000 ತೆಂಗಿನಕಾಯಿ, 10ಕೆಜಿ ಏಲಕ್ಕಿ, 2.5ಟನ್‌ ಬೆಲ್ಲದೊಂದಿಗೆ ಮಿಶ್ರಣವನ್ನು ತಯಾರಿಸಿಕೊಂಡು ಸುಮಾರು 50 ಡಬ್ಬಿ ಎಣ್ಣೆಯಿಂದ ಕಬ್ಬಿಣದ ಬಾಣಲೆಗಳಲ್ಲಿ ಅಪ್ಪಗಳನ್ನು ಬೆಳಗ್ಗಿಂದ ಸಾಯಂಕಾಲದ ಆರೇಳು ಗಂಟೆಯವರೆಗೂ ಕಾಯಿಸಿ ತಯಾರಿಸಲಾಗುತ್ತದೆ.
 
ಪಡುಬಿದ್ರಿ ಗಣಪತಿಯನ್ನು ಮನಸಾರೆ ಆರಾಧಿಸುವ ಉದ್ಯಮಪತಿಗಳಿಂದ ತೊಡಗಿ ರಾಜ್ಯ, ದೇಶ ವಿದೇಶಗಳಿಂದಲೂ ಈ ವಿಶೇಷ ಅಪ್ಪ ಸೇವೆಗಾಗಿ ಬೇಡಿಕೆಗಳಿರುತ್ತವೆ. ದಿನನಿತ್ಯದ ಅಪ್ಪ ಸೇವೆಯೂ ಇಲ್ಲಿ ನಡೆಯುತ್ತಲಿದ್ದರೂ ವರ್ಷಕ್ಕೊಮ್ಮೆ ನಡೆವ ಈ ಕಟ್ಟದಪ್ಪ ಅಥವಾ ಕಟಾಹಾಪೂಪ ಸೇವೆಗೆ ವಿಶೇಷ ಮಹತ್ವವಿದೆ. ಈ ಸೇವೆಯಲ್ಲದೇ ಪಡುಬಿದ್ರಿ ಗಣಪತಿಗೆ ಪಂಚಕಜ್ಜಾಯ ಸೇವೆ ಅಚ್ಚುಮೆಚ್ಚು. ಬರೀ ತೆಂಗಿನಕಾಯಿ, ಅಕ್ಕಿ, ಉಪ್ಪುಗಳ ಮಿಶ್ರಣದಿಂದ ತಯಾರಿಸುವ “ಪೊಟ್ಟಪ್ಪ’ವೂ ಪಡುಬಿದ್ರಿ ಗಣಪನಿಗೆ ಸಂದಾಯವಾಗುವ ವಿಶೇಷ ಸೇವೆಯಾಗಿದೆ.

Advertisement

– ಆರಾಮ

Advertisement

Udayavani is now on Telegram. Click here to join our channel and stay updated with the latest news.

Next