ಪುತ್ತೂರು: ನಗರಕ್ಕೆ ತಾಗಿಕೊಂಡಿರುವ ಈ ಗ್ರಾಮಕ್ಕೇ ಬಸ್‌ಗಳ ಕೊರತೆ ಎಂದರೆ ನಂಬಬೇಕಾದದ್ದೇ. ಪಟ್ನೂರು ಗ್ರಾಮಸ್ಥರ ಒಕ್ಕೊರಲ ಬೇಡಿಕೆಯೆಂದರೆ ನಮಗೆ ಸಾಕಷ್ಟು ಬಸ್ ವ್ಯವಸ್ಥೆ ಬೇಕೇಬೇಕು ಎಂಬುದು. ಇದು ತುರ್ತು ಅಗತ್ಯವೂ ಸಹ.
ಮುರದಿಂದ ಕವಲೊಡೆದು ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ಈ ಗ್ರಾಮ ಹರಡಿಕೊಂಡಿದೆ. ಶೇ.75 ರಷ್ಟು ಭಾಗ ಬನ್ನೂರು ಗ್ರಾ.ಪಂ. ವ್ಯಾಪ್ತಿಗೆ, ಶೇ.25 ರಷ್ಟು ಭಾಗ ನಗರಸಭೆ ವ್ಯಾಪ್ತಿಗೆ ಸೇರಿದೆ. ಎರಡೂ ಭಾಗಗಳಲ್ಲಿ ಬೇಡಿಕೆಗಳ ಪಟ್ಟಿ ದೊಡ್ಡದಿದೆ.
ಗ್ರಾಮಸ್ಥರ ಮೊದಲ ಬೇಡಿಕೆ ಬಸ್ ಸೌಕರ್ಯ. ಗ್ರಾಮಸ್ಥರ ಎಲ್ಲ ವ್ಯವಹಾರಗಳು ಪುತ್ತೂರು ನಗರ ಆಧಾರಿತವಾಗಿ ನಡೆಯುತ್ತದೆ. ಶಾಲೆ, ವಾಣಿಜ್ಯ ವ್ಯವಹಾರ ಕ್ಷೇತ್ರಗಳಿಗೆ ನಗರವೇ ಅನಿವಾರ್ಯ. ಪುತ್ತೂರು -ಮುರ-ಪಟ್ನೂರು ಮಾರ್ಗವಾಗಿ ಬೆಳಗ್ಗೆ 8 ಗಂಟೆಗೆ, ಸಂಜೆ 6 ಗಂಟೆಗೆ ಒಂದು ಬಸ್ ಮಾತ್ರ ಸಂಚರಿಸುತ್ತದೆ. ಬೆಳಗ್ಗೆ 8 ರ ಬಳಿಕವಾಗಲೀ, ಸಂಜೆ 6 ರ ಮೇಲಾಗಲೀ ಬೇರೆ ಬಸ್ ಇಲ್ಲ. ನೂರಾರು ಶಾಲಾ ಮಕ್ಕಳು ನಗರಕ್ಕೆ ಶಿಕ್ಷಣಕ್ಕೆ ಬರುತ್ತಿದ್ದು ಬಸ್ ಬರುವ ಸಮಯಕ್ಕೆ ಹಾಜರಾಗುವುದು ಕೊಂಚ ತಡವಾದರೂ ಬಾಡಿಗೆ ವಾಹನಗಳೇ ಗತಿ.
ಶನಿವಾರದ ಕಥೆ
ಶನಿವಾರದ ಸಂಚಾರದ ಕಥೆಯಂತೂ ಸಂಕಟದ್ದೆ. ಮಧ್ಯಾಹ್ನ ತರಗತಿಗಳು ಮುಗಿಯುತ್ತವೆ. ಆಗ ವಿದ್ಯಾರ್ಥಿಗಳು ಮುರದ ತನಕ ಬಸ್‌ನಲ್ಲಿ ಬಂದು ಅನಂತರ ರಿಕ್ಷಾದಲ್ಲಿ ತಮ್ಮ ಮನೆಯನ್ನು ತಲುಪಬೇಕು. ವಾರದ ಇತರೆ ದಿನಗಳಲ್ಲೂ ಸಂಜೆ ವೇಳೆ ವಿಶೇಷ ತರಗತಿಗಳು ಇದ್ದರೆ ಬಾಡಿಗೆ ವಾಹನಗಳನ್ನೇ ಆಶ್ರಯಿಸಬೇಕು. ಪರೀಕ್ಷಾ ಸಂದರ್ಭದಲ್ಲಂತೂ ಮುಂಚಿನ ದಿನವೇ ಬಾಡಿಗೆ ವಾಹನ ಗೊತ್ತುಪಡಿಸಿಕೊಳ್ಳಬೇಕು ಎನ್ನುತ್ತಾರೆ ಶಾಲಾ ವಿದ್ಯಾರ್ಥಿಗಳು.
ಪುತ್ತೂರು-ಮುರ-ಮತ್ತಾವು-ಪಳ್ಳ-ಪೆರ್ವೇಡಿ ಮೂಲಕ ಕೆದಿಲಕ್ಕೆ ಬಸ್ ಸಂಚರಿಸಬೇಕು. ಬೆಳಗ್ಗೆ, ಮಧ್ಯಾಹ್ನ, ಸಂಜೆ ವೇಳೆಯಲ್ಲಿ ತಲಾ ಎರಡು ಬಸ್‌ಗಳ ಅಗತ್ಯವಿದೆ. ಕುಂಜಾರು, ಪರಮಾರು, ಕುಂಬಾಡಿ, ಪಂಜಿಗುಡ್ಡೆ, ಅಂಡೆಪುಣಿ, ಕೊಡಂಗೆ ಮೊದಲಾದ ಭಾಗದಿಂದ ಬರುವ ವಿದ್ಯಾರ್ಥಿ ಗಳಿಗೂ ಈ ಸರಕಾರಿ ಬಸ್‌ಗಳೇ ಆಶ್ರಯ. ಹೀಗಾಗಿ ಹೆಚ್ಚುವರಿ ಬಸ್ ಓಡಾಟ ಇಲ್ಲಿ ಅತಿ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕನಿಷ್ಠ ಒಂದು ಹೆಚ್ಚುವರಿ ಬಸ್ ಸೌಕರ್ಯವಾದರೂ ಕೂಡಲೇ ಆಗಬೇಕಿದೆ. ಇದು ಗ್ರಾಮಸ್ಥರ ಆಗ್ರಹವೂ ಸಹ.
ಪ್ರತ್ಯೇಕ ಗ್ರಾ.ಪಂ. ಬೇಕು!
ಪಡ್ನೂರು ಗ್ರಾಮಕ್ಕೆ ಪ್ರತ್ಯೇಕ ಗ್ರಾ.ಪಂ. ಆಗಬೇಕು ಅನ್ನುವ ಬೇಡಿಕೆ ಇದೆ. ಪ್ರಸ್ತುತ ಬನ್ನೂರು ಗ್ರಾ.ಪಂ.ಗೆ ಹೋಗಲು ಮುರಕ್ಕೆ ಬಂದು ಅಲ್ಲಿಂದ ಬೊಳುವಾರಿಗೆ ಬಂದು ಪುನಃ ಉಪ್ಪಿನಂಗಡಿ ಬಸ್ ಮೂಲಕ ತಲುಪಬೇಕು. ಇದಕ್ಕಾಗಿ 8 ರಿಂದ 10 ಕಿ.ಮೀ.ಸಂಚರಿಸಬೇಕು. ಬನ್ನೂರು ಗ್ರಾ.ಪಂ.ವ್ಯಾಪ್ತಿಯ ಮೂರು ಗ್ರಾಮ ಗಳ ಪೈಕಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮ ಪಟ್ನೂರು. ಈ ಗ್ರಾಮವನ್ನು ಪ್ರತ್ಯೇಕ ಪಂ. ಆಗಿ ರೂಪಿಸಿದರೆ ನಮ್ಮ ಸುತ್ತಾಟವು ತಪ್ಪ ಲಿದೆ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.
ಕುಸಿಯುವ ಹಂತದಲ್ಲಿ ಬಯಲು ರಂಗಮಂದಿರ
ಪಡ್ನೂರು ಮಾದರಿ ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕರ ಕೊರತೆ ಸಾಕಷ್ಟಿದೆ. ಮುಖ್ಯವಾಗಿ ಇಲ್ಲಿ ದೈಹಿಕ ಶಿಕ್ಷಣ ನಿರ್ವಹಿಸಲು ಶಿಕ್ಷಕರೇ ಇಲ್ಲ. ಹೀಗಾಗಿ ಕ್ರೀಡೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಪ್ರೋತ್ಸಾಹ ನಿರೀಕ್ಷಿಸಲಾಗುತ್ತಿಲ್ಲ ಎನ್ನುವುದು ಕೆಲವು ಪೋಷಕರ ಅಳಲು. ಇಲ್ಲಿನ ಬಯಲು ರಂಗ ಮಂದಿರ ಕುಸಿಯುವ ಹಂತದಲ್ಲಿದ್ದು ಹೊಸ ರಂಗ ಮಂದಿರ ನಿರ್ಮಾಣ ಆಗಬೇಕಿದೆ. ಪ್ರಸ್ತುತ ಪಟ್ನೂರಲ್ಲದೇ ಸೇಡಿಯಾಪು, ಕುಂಬಾಡಿ, ಗಟ್ಟಿಮಾರು, ಬೇರಿಕೆ, ಪಂಜಿಗುಡ್ಡೆ ಪ್ರದೇಶಗಳಿಂದ ವಿದ್ಯಾರ್ಥಿಗಳು ಬರುತಿದ್ದು ಕಲಿಕೆಯ ದೃಷ್ಟಿಯಿಂದ ಮೂಲ ಸೌಕರ್ಯ ಒದಗಿಸಬೇಕಿದೆ.
ಲಿಂಕ್ ರಸ್ತೆ, ದಾರಿದೀಪ, ಕಾಲು ಸಂಕದ ಬೇಡಿಕೆ
ಸೇಡಿಯಾಪು-ಕೂಟೇಲು-ಆಟಿಕ್ಕೂ – ಪೆರ್ವೇಡಿ ಸಂಪರ್ಕ ರಸ್ತೆ ಅಭಿವೃದ್ಧಿ, ಯರ್ಮುಂಜಪಳ್ಳ-ಪಂಜಿಗುಡ್ಡೆ ಲಿಂಕ್ ರಸ್ತೆ, ಕುಂಬಾಡಿ -ಕಡ್ತಿಮಾರು ನಡುವೆ ಸೇತುವೆ, ಕೂಟೇಲು-ದೇತಂಡ್ಕ ಕಾಲು ಸಂಕ, ಬೇರಿಕೆ-ಸೇಡಿಯಾಪು, ಬನಾರಿ-ಪರಮಾರು ತನಕ ದಾರಿದೀಪ, ಗ್ರಾಮಕ್ಕೂಂದು ಸಾರ್ವಜನಿಕ ಶೌಚಾಲಯ, ಗ್ರಾಮಕ್ಕೆ ಪಶು ಆಸ್ಪತ್ರೆಯ ಶಾಖಾ ಕೇಂದ್ರ ಕಲ್ಪಿಸಬೇಕಿದೆ.
ಈ ಗ್ರಾಮಕ್ಕೂ ಹೋಬಳಿ ಸಮಸ್ಯೆ..!
ಚಿಕ್ಕಮುಡ್ನೂರು ಗ್ರಾಮದ ಹಾಗೆ ಪಡ್ನೂರು ಗ್ರಾಮಕ್ಕೂ ಹೋಬಳಿ ಕೇಂದ್ರದ ಸೌಲಭ್ಯ ಸಿಗುವುದು ಉಪ್ಪಿನಂಗಡಿಯಲ್ಲಿ. ಕಂದಾಯ ಇಲಾಖೆಯ ನಾಡಕಚೇರಿ, ರೈತ ಸಂಪರ್ಕ ಕೇಂದ್ರಕ್ಕೂ ಹದಿನೈದಕ್ಕೂ ಅಧಿಕ ಕಿ.ಮೀ. ದೂರದ ಉಪ್ಪಿನಂಗಡಿಯೇ ಗತಿ. ಪಟ್ನೂರಿನಲ್ಲಿ ಉಪ ಆರೋಗ್ಯ ಕೇಂದ್ರವಿದ್ದರೂ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉಪ್ಪಿನಂಗಡಿ ಆಸರೆ. ಹೋಬಳಿ ಪುನರ್ ವಿಂಗಡಣೆ ಮಾಡಿ ಪಟ್ನೂರು ಗ್ರಾಮವನ್ನು ಉಪ್ಪಿನಂಗಡಿ ಹೋಬಳಿಯಿಂದ ಬೇರ್ಪಡಿಸಿ ಪುತ್ತೂರು ಕಸಬಾ ಹೋಬಳಿಗೆ ಸೇರಿಸಬೇಕು ಎನ್ನುವ ಬೇಡಿಕೆ ಗ್ರಾಮಸ್ಥರದ್ದು.
ಮನವಿ ಸಲ್ಲಿಕೆ: ಪಡ್ನೂರು ಗ್ರಾಮದ ಹಲವು ಬೇಡಿಕೆಗಳ ಬಗ್ಗೆ ಈಗಾಗಲೇ ಗ್ರಾಮ ಸಭೆ, ಸಾಮಾನ್ಯ ಸಭೆಗಳಲ್ಲಿ ಚರ್ಚಿಸಲಾಗಿದೆ. ಇದರ ಈಡೇರಿಕೆಗೆ ಸಂಬಂಧಿಸಿದವರಿಗೆ ಮನವಿ ಸಲ್ಲಿಸಲಾಗಿದೆ. –
ಜಯ ಏಕ, ಅಧ್ಯಕ್ಷರು, ಬನ್ನೂರು ಗ್ರಾ.ಪಂ.
ಗ್ರಾಮದ ಚಿತ್ರಣ: ಪಡ್ನೂರು ಗ್ರಾಮವು 579 ಹೆಕ್ಟೇರು ವಿಸ್ತೀರ್ಣ ಹೊಂದಿದ್ದು 2567 ಮನೆಗಳನ್ನು ಒಳಗೊಂಡಿದೆ. ಗ್ರಾಮದಲ್ಲಿ ಒಂದು ಮಾದರಿ ಹಿ.ಉ.ಪ್ರಾ. ಶಾಲೆ, ಪಡ್ನೂರು, ಪಳ್ಳದಲ್ಲಿ ಅಂಗನವಾಡಿ, ಪಡ್ನೂರಿನಲ್ಲಿ ಮದಗ ಶ್ರೀಜನಾರ್ದನ ದೇವಸ್ಥಾನ, ಅಂಚೆಕಚೇರಿ, ಹಾಲು ಉತ್ಪಾದಕರ ಸಹಕಾರ ಸಂಘಗಳು ಇವೆ. ಪಡ್ನೂರು ಗ್ರಾಮವು ಬನಾರಿ, ಪರಮಾರು, ಕುಂಜಾರು, ದೇಮೇರು, ಯರ್ಮುಂಜಪಳ್ಳ, ಪಂಜಿಗುಡ್ಡೆ, ಅಂಡೆಪುಣಿ, ಪೆರ್ವೇಡಿ, ಆಟಿಕ್ಕೂ, ಕೂಟೇಲು, ಕಡ್ತಿಮಾರು, ಕುಂಬಾಡಿ, ಸೇಡಿಯಾಪು ಪ್ರದೇಶಗಳನ್ನು ಒಳಗೊಂಡಿದೆ.
ಮುಖ್ಯ ಬೇಡಿಕೆಗಳು: ಪಡ್ನೂರು ಗ್ರಾಮಕ್ಕೆ ಹೆಚ್ಚುವರಿ ಬಸ್ ಓಡಾಟ, ಪ್ರತ್ಯೇಕ ಗ್ರಾಮ ಪಂಚಾಯತ್ ರಚನೆ, ಪುತ್ತೂರು ಕಸಬಾ ಹೋಬಳಿ ಕೇಂದ್ರಕ್ಕೆ ಸೇರ್ಪಡೆ ಸಹಿತ ಹತ್ತಾರು ಬೇಡಿಕೆಗಳಿವೆ. ಈ ಮೂರು ಬೇಡಿಕೆ ಅತಿ ಆವಶ್ಯಕವಾಗಿ ಈಡೇರಬೇಕಿದೆ. ಇದರಿಂದ ವಿದ್ಯಾರ್ಥಿಗಳ, ಸಾರ್ವಜನಿಕ ಸುತ್ತಾಟದ ಬವಣೆಗೆ ಪರಿಹಾರ ಸಿಗಲಿದೆ. –
ರಮಣಿ ಗಾಣಿಗ, ಸ್ಥಳೀಯರು
ಕಿರಣ್ ಪ್ರಸಾದ್ ಕುಂಡಡ್ಕ