Advertisement

ಪದ್ಮಿನಿ ಪ್ರಮೋದ್‌ ಬಿಝಿಯಾಗ್ಬಿಟ್ರು …

09:03 AM Jun 07, 2019 | Lakshmi GovindaRaj |

ಕಿರುತೆರೆ ಮೂಲಕ ಹಿರಿತೆರೆ ಸ್ಪರ್ಶಿಸಿದ ನಟ ಪ್ರಮೋದ್‌, “ಪ್ರೀಮಿಯರ್‌ ಪದ್ಮಿನಿ’ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅವರ ಲವಲವಿಕೆಯ ಅಭಿನಯವನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಆ ಚಿತ್ರದ ಬಳಿಕ ಪ್ರಮೋದ್‌ ಅವರು ಮತ್ತೆ ಯಾವ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಹೌದು, ಅವರೀಗ ಹೊಸ ಚಿತ್ರಕ್ಕೆ ಹೀರೋ ಆಗಿದ್ದಾರೆ.

Advertisement

ಆ ಚಿತ್ರಕ್ಕೆ “ಮತ್ತೆ ಉದ್ಭವ’ ಎಂದು ಹೆಸರಿಡಲಾಗಿದೆ. ಈ ಚಿತ್ರವನ್ನು ಕೋಡ್ಲು ರಾಮಕೃಷ್ಣ ಅವರು ನಿರ್ದೇಶನ ಮಾಡುತ್ತಿದ್ದಾರೆ ಎಂಬುದು ವಿಶೇಷ. ಚಿತ್ರದ ಪೋಸ್ಟರ್‌ ನೋಡಿದರೆ, ಅದೊಂದು ಮನರಂಜನಾತ್ಮಕ ಸಿನಿಮಾ ಎಂಬುದು ಗೊತ್ತಾಗಲಿದೆ. ಕಾರಣ, ಶೀರ್ಷಿಕೆ ಜೊತೆಗೊಂದು ಗಣೇಶನ ಮುಖದ ಚಿತ್ರವಿದೆ. ಹಾಗಾಗಿ, ಇದೊಂದು ಫ‌ನ್‌ ಸಿನಿಮಾ ಅಂದುಕೊಳ್ಳಲು ಅಡ್ಡಿಯಿಲ್ಲ.

ಇನ್ನು, ಈ ಚಿತ್ರದಲ್ಲಿ ಪ್ರಮೋದ್‌ ಅವರಿಗೆ ನಾಯಕಿಯಾಗಿ, ಮಿಲನ ನಾಗರಾಜ್‌ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ ರಂಗಾಯಣ ರಘು ವಿಶೇಷ ಪಾತ್ರದಲ್ಲಿ ಮಿಂಚಲಿದ್ದಾರೆ. ಅವಿನಾಶ್‌, ಸುಧಾಬೆಳವಾಡಿ, ಮೋಹನ್‌, ಶುಭಾರಕ್ಷ ಸೇರಿದಂತೆ ಇನ್ನೂ ಅನೇಕರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಮೋಹನ್‌ ಛಾಯಾಗ್ರಹಣ ಮಾಡಿದರೆ, ವಿ.ಮನೋಹರ್‌ ಅವರು ಸಂಗೀತ ನೀಡುತ್ತಿದ್ದಾರೆ. ಕೆಂಪರಾಜು ಸಂಕಲನವಿದೆ.

ಜಯಂತ್‌ ಕಾಯ್ಕಿಣಿ ಹಾಗು ಪ್ರಹ್ಲಾದ್‌ ಅವರ ಗೀತರಚನೆ ಇರಲಿದೆ. ಥ್ರಿಲ್ಲರ್‌ ಮಂಜು ಅವರು ಸಾಹಸ ನಿರ್ದೇಶನ ಮಾಡಲಿದ್ದಾರೆ. ತ್ರಿಭುವನ್‌ ನೃತ್ಯ ನಿರ್ದೇಶಿಸಲಿದ್ದಾರೆ. ಇನ್ನು ಈ ಚಿತ್ರವನ್ನು ನಿತ್ಯಾನಂದ ಭಟ್‌, ಸತ್ಯ, ಮಹೇಶ್‌ ಮೋದ್ಗಲ್‌ ಮತ್ತು ರಾಜೇಶ್‌ ನಿರ್ಮಾಣ ಮಾಡುತ್ತಿದ್ದಾರೆ. ಜೂ.6 ರ ಗುರುವಾರ ಚಿತ್ರಕ್ಕೆ ಚಾಲನೆ ಸಿಗಲಿದ್ದು, ಜೆ.ಪಿ.ನಗರದ ಸತ್ಯ ಗಣಪತಿ ದೇವಾಲಯದಲ್ಲಿ ಮುಹೂರ್ತ ನೆರವೇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next