Advertisement
ಪದ್ಮಶ್ರೀ ಬಂದರೂ ಸುಕ್ರಜ್ಜಿ ಬದಲಾಗಿಲ್ಲ.ಗದ್ದೆ ಮತ್ತು ಕಾಡಿನ ನಡುವೆ ಗಾಢ ಸಂಬಂಧ ಸುಕ್ರಜ್ಜಿಯ ಜೊತೆಗೆ ಇದೆ. ಪ್ರಶಸ್ತಿಗಳು ಬರಲಾರಂಭಿಸಿ ಎರಡು ದಶಕಗಳೇ ಕಳೆದಿವೆ. ಮೊನ್ನೆ ಪದ್ಮಶ್ರೀ ಬಂದಾಗಲೂ ಸುಕ್ರಜ್ಜಿ ಉರುವಲು ಸಂಗ್ರಸಲು ಬಡಗೇರಿ ಸಮೀಪದ ಗದ್ದೆ ಬಯಲಿನಂಚಿನ ಕಾಡಿಗೆ ತೆರಳಿದ್ದರು. ಸ್ವಲ್ಪವೂ ಬೇಸರಲ್ಲ. ದಣಿಲ್ಲ. ಬಂದವರೆಲ್ಲರನ್ನು ಸಂತೈಸಿ, ಕುಶಲವಿಚಾರಿಸಿ ನಗುತ್ತಲೇ ಮಾತಾಡಿದ್ದಾರೆ. ಪ್ರಶಸ್ತಿ ಬಂದದ್ದಕ್ಕೆ ಖುಷಿ ಇದೆ. ಆದರೆ ಇನ್ನು ಹೆಚ್ಚು ಸಂತಸವಾಗಬೇಕಿದ್ದರೆ…..ಇದಾಗಬೇಕು ಎಂಬ ಸಮುದಾಯದ ಬೇಡಿಕೆಯನ್ನು ಪ್ರಬಲವಾಗಿಯೇ ಮಂಡಿಸಿದ್ದಾರೆ. ಅವರ ಬದುಕಿನ ಕ್ರಮದಲ್ಲಿ ಒಂದು ರೀತಿಯ ಹಠ ಯಾವಗಲೂ ಇದೆ. ಸಾರಾಯಿಯಿಂದ ಸಮುದಾಯ ನಾಶವಾಗುತ್ತಿರುವುದನ್ನು ಹತ್ತಿರದಿಂದ ಕಂಡಿರುವ ಗ್ರಾಮಗಳಲ್ಲಿ ಸಾರಾಯಿ ಮಾರಾಟ ನಿಲ್ಲಬೇಕೆಂಬ ಹೋರಾಟ ಹಾದಿಯಲ್ಲಿ ಗ್ರಾಮ ಸಮುದಾಯದಿಂದಲೇ ಪ್ರತಿರೋಧವನ್ನು ಸಹ ಉಂಡಿದ್ದಾರೆ.
Related Articles
ಭೂಮಿಯ ಜೊತೆ ಬೆವರಿನ ಸಂಬಂಧ ಅವರಿಗೆ ಗೊತ್ತು. ಹಾಗಾಗಿ ಅಡುಗೆ ಮನೆಯೂ ಅವರಿಗೆ ಗೊತ್ತು. ಗದ್ದೆಯ ಬದುಕು ಗೊತ್ತು. ಹೊರ ಜಗತ್ತು ಅವರಿಗೆ ಗೊತ್ತು. ಸಾಮಾಜಿಕ ಹೋರಾಟಗಳಿಂದ ಹಿಡಿದು ಸಭೆ ಸಮಾರಂಭಗಳ ತನಕ ಎಲ್ಲೆಲ್ಲಿ ಹೇಗೇಗೆ ವರ್ತಿಸಬೇಕು. ಹೇಗೆ ಮಾತಾಡಬೇಕು. ಎಷ್ಟು ಮಾತಾಡಬೇಕು ಎಂಬ ಅರಿವು ಸಹ ಅವರಿಗೆ ಸ್ಪಷ್ಟವಾಗಿದೆ. ಪ್ರಶಸ್ತಿಗಳು ಬಂದ ಮೇಲೆ ಮತ್ತು ಬರುವುದಕ್ಕಿಂತ ಮುಂಚೆ ನಾಡಿವ ವಿವಿಧ ಕ್ಷೇತ್ರಗಳ ವಿದ್ವಾಂಸರ ಜೊತೆ ಅವರು ಒಡನಾಡಿದ್ದಾರೆ. ಮಾತಾಡಿದ್ದಾರೆ. ಹಾಡಿದ್ದಾರೆ. ಆದರೂ ಅವರು ಬದಲಾಗಿಲ್ಲ.
Advertisement
ಇಪ್ಪತ್ತನೇ ವಯಸ್ಸಿಗೆ ಗಂಡನನ್ನು ಕಳೆದುಕೊಂಡ ಅವರದು ಬಾಲ್ಯವಿವಾಹ. ಹುಟ್ಟಿದ ಎರಡು ಮಕ್ಕಳನ್ನು ಕಳೆದು ಕೊಂಡ ನತದೃಷ್ಟೇ. ಆದರೂ ಅವರು ಹಾಡಿನ ಬದುಕಿಗೆ ಬೆನ್ನು ತೋರಿಸಲಿಲ್ಲ. ಈ ಪ್ರತಿಭೆಯ ಹಿಂದೆ ಅಜ್ಜಿಯ, ಹಾಡು ಕಲಿಸಿದ ತಾಯಿಯ ಪ್ರಭಾವ ದಟ್ಟವಾಗಿದೆ. ಈಗ ಅವರು ಹಾಡಲು ಶುರು ಮಾಡಿದರೆ ನಿಲ್ಲಿಸಿ ಎಂದರು ಎತ್ತಿಕೊಂಡ ಹಾಡನ್ನು ಪೂರ್ತಿಗೊಳಿಸದೇ ಬಿಡಲಾರರು. ಭಾವ ಕೆಡಿಸದೇ ಹಾಡಬಲ್ಲರು. ಅಪಾರ ನೆನಪಿನ ಶಕ್ತಿ ಅವರಿಗಿದೆ. ಸಹಿ ಮಾಡಲು ಮಾತ್ರ ಕಲಿತಿರುವ ಅಕ್ಷರಸ್ಥೆ ಗಂಟೆಗಟ್ಟಲೆ ಹಾಡಬಲ್ಲಳು. ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ಭಾಗಕ್ಕೆ ಐದು ವರ್ಷಗಳ ಕಾಲ ವಿಶೇಷ ಉಪನ್ಯಾಕಿಯಾಗಿ ಹಾಲಕ್ಕಿ ಜಾನಪದ ಹಾಡು ಮತ್ತು ಕುಣಿತ ಹಾಗೂ ವೇಷ ಭೂಷಣ, ಹಾಲಕ್ಕಿಗಳ ಅಡುಗೆ ಪದ್ಧತಿಯ ಕುರಿತು ಜಾನಪದ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಶ್ರೇಯಸ್ಸು ಸುಕ್ರಿಜ್ಜಿಗೆ ಇದೆ.
ಗೇಣಿ ಜಮೀನಿನಲ್ಲಿ ದುಡಿಯುವುದನ್ನು ವಿರೋಧಿಸಿ ದುಡಿಯುವ ರೈತರಿಗೆ ಭೂಮಿ ಹೋರಾಟ ಪ್ರಾರಂಭಿಸಿದ್ದ ದಿನಕರ ದೇಸಾು ರೈತಕೂಟದಲ್ಲಿ ಬಾಲ್ಯದಲ್ಲೇ ಸಕ್ರಿಯ ಗೊಂಡಿದ್ದರು ಸುಕ್ರಿ ಬೊಮ್ಮ ಗೌಡ. 1960ರ ದಶಕದಲ್ಲೇ ಭ್ರಷ್ಟಾಚಾರ ವಿರೋಧಿ ಮೆರವಣಿಗೆಯಲ್ಲಿ ಪೊರಕೆ ಹಿಡಿದು ಭಾಗವಹಿಸಿದ್ದರು. ರೈತರ ಅತಿಕ್ರಮಣ ಜಮೀನಿಗೆ ಪಟ್ಟಾ ನೀಡಿಕೆಗೆ ಒತ್ತಾಯಿಸಿ ಹೋರಾಟದ ಭಾಗವಾಗಿದ್ದು, ಸಾರಾಯಿ ವಿರೋಧಿ ಆಂದೋಲನದ ಭಾಗವಾಗಿದ್ದು ಸುಕ್ರಜ್ಜಿಯ ನೆನಪಿನ ಕೋಶದಲ್ಲಿ ಭದ್ರವಾಗಿವೆ.
ಹಾಲಕ್ಕಿ ಸಂಪ್ರದಾಯಿಕ ಉಡುಗೆಯನ್ನು ಈಗಲೂ ಪ್ರೀತಿಯಿಂದಲೇ ಉಡುವ ಅವರು ಶ್ರಮ ಜೀವನವನ್ನು ಮಾತ್ರ ಇಂದಿಗೂ ಮುಂದುವರಿಸಿದ್ದಾರೆ. ಗದ್ದೆ ಮಾಡು ಹಾಡುವ ಮಾಯೆಯ ಸುಖಗಳು ಅವರನ್ನು ಇಂದಿಗೂ ಕಾಡಿವೆ. ಜೀವ ಇರುವವರೆಗೂ ಹಾಡುವೆ ಎನ್ನುವ ಅವರು ಬದುಕಿನ ಕಷ್ಟಸುಖಗಳನ್ನು ಸಹ ಹಾಡು ಕಟ್ಟಿ ಹಾಡುವ ಪ್ರತಿಭಾವಂತೆ. ಸೃಜನಶೀಲ ಹಾಡುಗಾರ್ತಿ.
ಹಾಲಕ್ಕಿ ಜನಪದಕ್ಕೆ ತನ್ನದೇ ಆದ ನಾದವಿದೆ. ಲಯವೂ ಇದೆ. ಮದುವೆ ಮತ್ತು ಸಂಭ್ರಮಕ್ಕೆ ಹಾಡುಗಳಿವೆ. ಹೆಣ್ಣು ನೋಡಲು ಬರುವುದಕ್ಕೆ ಹಾಡುಗಳಿವೆ. ಮಾವನ ಮನೆಗೆ ಅಳಿಯ ಬಂದಾಗ ಮಾಳಿಗೆ ಮನೆಯ ಮೇಲೆ ಒಬ್ಬನೇ ಹೋದುದೇಕೆ ಎಂಬುದಕ್ಕೂ ಹಾಡುಗಳಿವೆ. ರಾಮಾಯಣ ಮಹಾಭಾರತ ಕಥಾ ಸನ್ನಿವೇಶಗಳನ್ನು ಹಾಡು ಮಾಡಿ ಹಾಡುವ ಇವರು ಸಮಯ ಸಂದರ್ಭಗಳಿಗೆ ತಕ್ಕಂತೆ ಕ್ಷಣದಲ್ಲಿ ಹಾಡು ಕಟ್ಟಿ ಹೇಳುವ ಅನುಭವಿ ತತ್ವಜಾnನಿಯೂ ಹೌದು. ಆಡಳಿತ ನಡೆಸುವವ ಅನ್ಯಾಯ ಪ್ರತಿಭಟಿಸುವ ಜಾನಪದವೂ ಹಾಲಕ್ಕಿಗಳಲ್ಲಿ ಇದೆ. ಸಂಪ್ರದಾಯದ ಹಾಡುಗಳ ಜೊತೆಗೆ ಪ್ರತಿಭಟನಾತ್ಮಕ ಕಾವ್ಯವೂ ಹಾಲಕ್ಕಿಗಳಲ್ಲಿ ಬ್ರಿಟಿಷ್ ಕಾಲಕ್ಕೆ ಹುಟ್ಟಿದೆ. ಹಗರಣ ಎಂಬ ಸಂಪ್ರದಾಯಿಕ ಪದ್ಧತಿಯ ಆಚರಣೆಯ ವೇಳೆ “ಹಗರಣ ಪಗರಣ’ ಹಾಡುಗಳ ಸಹ ಹಾಲಕ್ಕಿ ಸಮುದಾಯದ ಕೊಡುಗೆಯೇ ಆಗಿದೆ. ಸೋಬಾನೆ ಪದಗಳಿಗಿಂತ ಭಿನ್ನವಾಗಿ ನಿಲ್ಲುವ ಹಾಲಕ್ಕಿ ಜಾನಪದಕ್ಕೆ ತನ್ನದೇ ಆದ ಲಯವನ್ನು ಸುಕ್ರಜ್ಜಿ ಹಿಂದಿನ ತಲೆಮಾರುಗಳು ಬಿಟ್ಟುಹೋಗಿವೆ. ಆ ಕೊಂಡಿಯನ್ನು ತಾನು ಉಳಿಸಿ ಅದನ್ನು ಮುಂದಿನ ಜನಾಂಗಕ್ಕೆ ಧಾರೆ ಎರೆಯುವ ಕೆಲಸವನ್ನು ಸುಕ್ರಜ್ಜಿ ಮಾಡಿದ್ದಾರೆ.
ನಾಗರಾಜ್ ಹರಪನಹಳ್ಳಿ