ಹೊಸದಿಲ್ಲಿ: ಖ್ಯಾತ ಹಿನ್ನೆಲೆ ಗಾಯಕ ಎಸ್. ಪಿ.ಬಾಲಸುಬ್ರಹ್ಮಣ್ಯಂ (ಮರಣೋತ್ತರ) ಡಾ| ಬಿ.ಎಂ. ಹೆಗ್ಡೆ, ಕವಿ ಡಾ|ಚಂದ್ರಶೇಖರ ಕಂಬಾರ, ಆರ್.ಎಲ್.ಕಶ್ಯಪ್, ಕೆ.ವೈ. ವೆಂಕಟೇಶ್ ಸೇರಿದಂತೆ 118 ಮಂದಿ ಗಣ್ಯರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪದ್ಮಗೌರವಗಳನ್ನು ಮಂಗಳವಾರ ಪ್ರದಾನ ಮಾಡಿದ್ದಾರೆ.
ಡಾ|ಬಿ.ಎಂ.ಹೆಗ್ಡೆ ಸಮೀಪಕ್ಕೆ ಬಂದು ಪ್ರಶಸ್ತಿ ಕೊಟ್ಟ ರಾಷ್ಟ್ರಪತಿ: ವೈದ್ಯಕೀಯ ಕ್ಷೇತ್ರದಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗೆ ಪಾತ್ರರಾಗಿರುವ ಡಾ|ಬಿ.ಎಂ.ಹೆಗ್ಡೆ ಗಾಲಿ ಕುರ್ಚಿಯಲ್ಲಿ ಕುಳಿತು ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೇ ಡಾ|ಹೆಗ್ಡೆ ಸಮೀಪಕ್ಕೆ ಬಂದು ಪ್ರಶಸ್ತಿ ಪ್ರದಾನ ಮಾಡಿದರು. ಛಾಯಾಗ್ರಾಹಕರು ಫೋಟೋ ತೆಗೆಯುತ್ತಿದ್ದಾಗ, ಕೆಮರಾಗಳತ್ತ ನೋಡು ವಂತೆ ರಾಷ್ಟ್ರಪತಿಯವರೇ ಡಾ|ಹೆಗ್ಡೆ ಅವರಿಗೆ ಸೂಚಿಸಿ ದರು. ಪ್ರಶಸ್ತಿ ಸ್ವೀಕರಿಸುವುದಕ್ಕೆ ಬರುವ ಮೊದಲು ಹೆಗ್ಡೆಯವರು ಪ್ರಧಾನಿ ಮೋದಿ, ಗೃಹ ಸಚಿವ ಶಾ ಅವರಿಗೆ ನಮಸ್ಕರಿಸಿದರು.
1962ರ ಫೆಬ್ರವರಿ 28 ರಂದು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಟ್ಯೂಟರ್ ಆಗಿ ವೃತ್ತಿ ಜೀವನ ಆರಂಭಿಸಿದರು. ಮಂಗಳೂರಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅವರು ವೈದ್ಯರಾಗಿ ಜನಮನ್ನಣೆ ಗಳಿಸಿದರು. ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಡೀಮ್ಡ್ ವಿ.ವಿ.)ನ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಪಾತ್ರರಾದ ಕರ್ನಾಟಕದ ಮೊದಲ ವೈದ್ಯ ಎಂಬ ಹೆಗ್ಗಳಿಕೆಗೆ ಡಾ| ಬಿ.ಎಂ.ಹೆಗ್ಡೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ:ರೈಲ್ವೆ ನಿಲ್ದಾಣದಲ್ಲಿ ಚಹಾ ಸವಿದ ರೈಲ್ವೆ ಸಚಿವ ವೈಷ್ಣವ್
ಮುಂಗಟ್ಟೆಗೆ ನಮಸ್ಕರಿಸಿದ ಜೋಗತಿ: ಕಲಾ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಪದ್ಮಶ್ರೀ ಗೌರವ ಸ್ವೀಕರಿಸುವ ಮುನ್ನ ರಾಷ್ಟ್ರಪತಿ ಕೋವಿಂದ್ ಅವರಿಗೆ ದೃಷ್ಟಿ ತೆಗೆದಿದ್ದಾರೆ. ಎರಡೂ ಕೈಗಳಿಂದ ನಿವಾಳಿಸಿ ತೆಗೆದ ಮಂಜಮ್ಮ ಜೋಗತಿ, ಎರಡೂ ಕೈಗಳನ್ನು ನೆಲಕ್ಕೊತ್ತಿ ನೆಟಿಕೆ ತೆಗೆ ದರು. ಈ ಸಂದರ್ಭದಲ್ಲಿ ಅವರಿಗೆ ಮೆಚ್ಚುಗೆಯ ಪ್ರಚಂಡ ಕರತಾಡನ ವ್ಯಕ್ತವಾಯಿತು. ಅನಂತರ ಅವರು ರಾಷ್ಟ್ರಪತಿಗಳಿಗೆ ನಮಸ್ಕರಿಸಿ, ಪ್ರಶಸ್ತಿ ಸ್ವೀಕರಿಸಿದರು. ಇದಕ್ಕೂ ಮೊದಲು ಅವರು ರಾಷ್ಟ್ರಪತಿ ಕುಳಿತಿದ್ದ ಎತ್ತರದ ಮುಂಗಟ್ಟೆ ಏರುವ ಮುನ್ನ ನೆಲವನ್ನು ಮುಟ್ಟಿ ಮಂಜಮ್ಮ ಜೋಗತಿ ನಮಸ್ಕರಿಸಿದ್ದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ|ಚಂದ್ರಶೇಖರ ಕಂಬಾರ ಅವರು ರಾಷ್ಟ್ರಪತಿಗಳಿಂದ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕಾಗಿನ ಪದ್ಮಭೂಷಣ ಗೌರವವನ್ನು ಪಡೆದುಕೊಂಡರು.