ಬೆಂಗಳೂರು: ತಮಗೆ ಲಭಿಸಿದ ಪದ್ಮಶ್ರೀ ಪ್ರಶಸ್ತಿಯನ್ನು ಕನ್ನಡ ನಾಡಿನ ಜನತೆಗೆ, ತಂದೆ, ತಾಯಿ, ಗುರುಗಳು, ಜೋಗತಿ ಸಂಪ್ರದಾಯಕ್ಕೆ ಸಮರ್ಪಿಸುವುದಾಗಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಕಲಾವಿದೆ ಮಂಜಮ್ಮ ಜೋಗತಿ ಅವರು ಗುರುವಾರ ಇಲ್ಲಿ ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ರಾಜ್ಯ ಬಿಜೆಪಿ ವತಿಯಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ತಂದೆ, ತಾಯಿಯಿಂದ ದೂರವಾಗಿ ಸಂತೆ, ಮಾರುಕಟ್ಟೆ, ದೇವಸ್ಥಾನ, ರೈಲ್ವೆ ನಿಲ್ದಾಣಗಳಲ್ಲಿ ಮಲಗಿ ಬದುಕು ರೂಪಿಸಿಕೊಂಡೆ. ಜನರ ಕಿರುಕುಳದ ನಡುವೆ ಬದುಕು ನನ್ನದಾಗಿಸಿಕೊಂಡೆ. ಹಿಂದೆ ಬಸ್ಸಿನ ಸೀಟಿನಲ್ಲಿ ನನ್ನ ಬಳಿ ಕುಳಿತುಕೊಳ್ಳಲು ಪುರುಷರಾಗಲೀ, ಸ್ತ್ರೀಯರಾಗಲೀ ಮುಂದಾಗುತ್ತಿರಲಿಲ್ಲ. ಈಗ ಆ ಮನೋಭಾವದಲ್ಲಿ ಬದಲಾವಣೆ ಬಂದಿದೆ ಎಂದು ವಿವರಿಸಿದರು.
ಜೋಗತಿ ಕಲಾವಿದೆಯಾದ ನನಗೆ ರಾಷ್ಟ್ರಮಟ್ಟದ ಪ್ರಶಸ್ತಿ ಬರುವುದನ್ನು ಕನಸಿನಲ್ಲೂ ನೆನೆಸಿರಲಿಲ್ಲ. ಹಿಂದೆ ಬಿಜೆಪಿ ಸರಕಾರವಿದ್ದಾಗ ರಾಜ್ಯೋತ್ವವ ಪ್ರಶಸ್ತಿ ಬಂದಿತ್ತು. ಈಗ ರಾಷ್ಟ್ರ ಮಟ್ಟದ ಗೌರವ ಸಿಗುತ್ತಿದೆ ಎಂದು ತಿಳಿಸಿದರು.
ಹಿಂದೆ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆಯಾಗಿ ಆಯ್ಕೆಯಾದ ಸುದ್ದಿ ತಿಳಿದಾಗ ಕೈಕಾಲು ಥರಥರ ನಡುಗಿತ್ತು. ಈ ಸುದ್ದಿಯೂ ನನ್ನನ್ನು ಒಮ್ಮೆ “ತಮಾಷೆ ಇರಬಹುದೇ” ಎಂದು ಚಿಂತಿಸುವಂತೆ ಮಾಡಿತು ಎಂದು ತಿಳಿಸಿದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕಾರದ ಪ್ರಕಟಣೆ ಬಂದಾಗ ರಾತ್ರಿಯಿಡೀ ಮಾತ್ರವಲ್ಲದೆ ಮರುದಿನವಿಡೀ ಅಭಿನಂದನೆಯ ಫೋನ್ ಕರೆ ಬಂದುದನ್ನು ಅವರು ನೆನಪಿಸಿಕೊಂಡರು.
ಇದನ್ನೂ ಓದಿ: 60 ಅಡಿ ಸಮುದ್ರದಾಳದಲ್ಲಿ ತಾಳಿ ಕಟ್ಟಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವ ಜೋಡಿ
ವಿಷ ಕುಡಿದರೂ ಬದುಕಿದೆ. ಬಳಿಕ ರೈಲಿಗೆ ತಲೆ ಕೊಟ್ಟು ಸಾಯುವ ಯೋಚನೆಯೂ ಬಂದಿತ್ತು. ಆದರೆ, ಬದುಕಿ ಸಾಧಿಸಬಾರದೇಕೆ ಎಂಬ ಚಿಂತನೆಯಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ವಿವರಿಸಿದರು.
“ನಾ ಒಂದು ಬಯಸಿದೆ. ವಿಧಿಯೊಂದು ಮಾಡಿದ”, “ಆಡಿ ಬಾ ಮಗನೆ ರಾಮಾ ನೋಡುವೆ ಕಣ್ಣಿನ ತುಂಬಾ” ಎಂಬ ಎರಡು ಹಾಡುಗಳನ್ನೂ ಅವರು ಹಾಡಿದರು.
ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅರುಣ್‍ಕುಮಾರ್ ಅವರು ಮಾತನಾಡಿ, ಕೇಂದ್ರದ ಜನಪ್ರಿಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದ ಆಯ್ಕೆ ಸಮಿತಿಯು ಇಂಥ ಮಂಗಳಮುಖಿಯರ ಕಲೆ, ಪ್ರತಿಭೆ, ಆತ್ಮವಿಶ್ವಾಸವನ್ನು ಗುರುತಿಸುವ ಕಾರ್ಯ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತೃತೀಯ ಲಿಂಗಿಗೆ ಸಂದ ಮೊದಲ ಪ್ರಶಸ್ತಿ ಇದಾಗಿದೆ. ದೇವರು ಕೊಟ್ಟ ಈ ಸ್ಥಿತಿಯನ್ನು ಜೀರ್ಣಿಸಿಕೊಂಡು ಸಾಧನೆ ಮಾಡಿದ ಮಂಜಮ್ಮ ಜೋಗತಿ ಅವರು ಅಭಿನಂದನಾರ್ಹರು ಎಂದು ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು, ರಾಜ್ಯ ನಾಟಕ ಅಕಾಡೆಮಿ ಸದಸ್ಯರಾದ ಪ್ರಭುದೇವ ಕಪ್ಪಗಲ್, ರಾಜ್ಯ ಕಾರ್ಯಾಲಯ ಕಾರ್ಯದರ್ಶಿಗಳಾದ ಲೋಕೇಶ್ ಅಂಬೆಕಲ್ಲು ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಹುದ್ದೆಗೆ ನಾನಾ ಪಟೋಲೆ ರಾಜೀನಾಮೆ