ಧಾರವಾಡ: “ತಂತಿಯೊಳಗ ಕರೆಂಟ್ ಐತಿ. ಅದನ್ನ ಮುಟ್ಟಿದ್ರ ಶಾಕ್ ಹೊಡಿತೇತಿ. ಲೈಟ್‌ನೊಳಗೂ ಕರೆಂಟ್ ಐತಿ. ಅದನ್ನ ಮುಟ್ಟಿದ್ರ ಶಾಕ್ ಹೊಡಿಯೋ ದಿಲ್ಲ. ಹಂಗಾದ್ರ ಅದು ಕರೆಂಟ್ ಅಲ್ಲೇನೋ? ಹಂಗಾದ್ರ ತಂತಿಯೊಳಗೆ ಬೆಳಕು ಬರೋದಿಲ್ಲ. ಬಲ್ಬಿನೊಳಗ ಬೆಳಕು ಬರತದಲ್ಲಾ? ತಂತಿಯೊಳಗ ಕರೆಂಟ್ ಐತಿ ಕಾಣೋದಿಲ್ಲ. ಬಲ್ಬನೊಳಗ ಕರೆಂಟ್ ಕಾಣತೈತಿ. ದೇವರು ಇಲ್ಲ ಅಂತೀರಲ್ಲ. ತಂತಿಯೊಳಗ ಕರೆಂಟ್ ಇದ್ದಂಗ ದೇವರು ಅದಾನು. ಆದರ ನೋಡುವುದಕ್ಕ ನಮ್ಮ ಮನಸ್ಸಿನೊಳಗಿನ ಆಧ್ಯಾತ್ಮದ ಬಲುº ಹೊತ್ತಬೇಕು.’
-ಇಂತಹ ಸಾವಿರಾರು ತರ್ಕಗಳಿಗೆ ವೇದಿಕೆಯ ಮೇಲಿಂದಲೇ ಉತ್ತರಗಳನ್ನು ನೀಡುತ್ತ, ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಜನಪ್ರಿಯರಾದವರು ಭಾವೈಕ್ಯತೆಯ ಹರಿಕಾರ ಮತ್ತು ಹಿರಿಕಾರ ಇಬ್ರಾಹಿಂ ಸುತಾರ್ ಅವರು.
ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಅವರು “ಉದಯವಾಣಿ’ಯೊಂದಿಗೆ ಮಾತನಾಡಿ ತಮ್ಮ ಹರ್ಷ ಹಂಚಿಕೊಂಡರು. ನಾನು ಯಾವುದೋ ಒಂದು ಮೂಲೆಯಲ್ಲಿದ್ದವನು. ಆದರೆ ಇಂದು ದೇಶದ ಸರ್ಕಾರವೇ ನನ್ನನ್ನು ಗುರುತಿಸಿದ್ದು ಹೆಮ್ಮೆ ಎನಿಸುತ್ತದೆ. ಒಂದು ವೇಳೆ ನಾನು ಉತ್ತರ ಕರ್ನಾಟಕದಲ್ಲಿ ಹುಟ್ಟದೇ ಈ ದೇಶದ ಬೇರೆ ಯಾವ ಭಾಗದಲ್ಲಿ ಹುಟ್ಟಿದ್ದರೂ ಬಹುಶಃ ನನಗೆ ಇಂತಹ ಭಾಗ್ಯ ಸಿಕ್ಕುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಕಾರಣ ಉತ್ತರ ಕರ್ನಾಟಕದಲ್ಲಿ ಶತ ಶತಮಾನಗಳಿಂದಲೂ ಶರಣರು, ಸೂಫಿ ಸಂತರು ಒಟ್ಟಿಗೆ ಬದುಕಿಕೊಂಡು ಬಂದಿದ್ದಾರೆ. ಇದೇ ನನ್ನನ್ನು ಭಾವೈಕ್ಯತೆ ಆಂದೋಲನ ಆರಂಭಿಸಲು ಪ್ರೇರಣೆ ನೀಡಿತು.
ಹಳ್ಳಿಯ ಜನರಿಗೆ ಅವರದೇ ಭಾಷೆಯಲ್ಲಿ ಆಧ್ಯಾತ್ಮಿಕ ವಿಚಾರಗಳನ್ನು ತುಂಬಬೇಕು ಎನ್ನುವ ಬಯಕೆ ಹೆಚ್ಚಿತು. ಹೀಗಾಗಿ ಸ್ಥಳೀಯ ವಿಶೇಷ ಸಂವಹನ ಕಲೆ ರೂಢಿಸಿಕೊಂಡೆ. 1970ರ ದಶಕದಲ್ಲಿಯೇ ಭಾವೈಕ್ಯ ಸಂಗೀತ ಮೇಳ ರಚಿಸಿಕೊಂಡು ಶರಣರ ತತ್ವಗಳನ್ನು ಆಧರಿಸಿ ಅಧ್ಯಾತ್ಮ, ಸಾಮಾಜಿಕ ಸಮಾನತೆ, ಹಿಂದೂ -ಮುಸ್ಲಿಂ ಭಾವೈಕ್ಯತೆ ಹೀಗೆ ಅನೇಕ ವಿಚಾರಗಳನ್ನು ಹಳ್ಳಿಗಳಲ್ಲಿ ನಡೆಯುವ ಜಾತ್ರೆ, ಪ್ರವಚನ ಮತ್ತು ಉರುಸ್‌ಗಳ ಸಂದರ್ಭದಲ್ಲಿ ನೀಡಲು ಆರಂಭಿಸಿದೆ. ಆರಂಭದಲ್ಲಿ ದೊಡ್ಡ ವಿರೋಧ ಬಂದರೂ ನಂತರ ಎಲ್ಲರೂ ನನ್ನ ಪ್ರವಚನಕ್ಕೆ ಬೆಂಬಲವಾಗಿ ನಿಂತು ಪೋಷಿಸಿದರು ಎನ್ನುತ್ತಾರೆ ಇಬ್ರಾಹಿಂ ಸುತಾರ್ ಸಾಹೇಬ್ರು.
ಬಸವಾನಂದರ ಕೃಪೆ: ಇಬ್ರಾಹಿಂ ಸುತಾರ್ ಅವರು ಹುಟ್ಟಿದ್ದು 1940ರಲ್ಲಿ ಬಾಗಲಕೋಟೆ ಜಿಲ್ಲೆ ಮುಸ್ಲಿಂ ಬಡ ಕುಟುಂಬದಲ್ಲಿ ಹುಟ್ಟಿ ಕಷ್ಟಗಳನ್ನು ಅನುಭವಿಸುತ್ತಲೇ ದೊಡ್ಡವರಾದ ಅವರಿಗೆ ಸಮಾಜದಲ್ಲಿ ಹಿಂದೂ-ಮುಸ್ಲಿಂರ ಮಧ್ಯೆ ಇರುವ ಕಂದಕ ನೋಡಿ ಬೇಸರವಾಗುತ್ತದೆ. ಈ ಎರಡೂ ಸಮುದಾಯಗಳನ್ನು ಒಗ್ಗಟ್ಟಿನಿಂದ ನಡೆಯುವಂತೆ ಮಾಡುವುದು ಹೇಗೆ ಎನ್ನುವ ಪ್ರಶ್ನೆ ಕಾಡಿತು. ಆಗ ಅವರಿಗೆ ಹೊಳೆದಿದ್ದೆ ಆಧ್ಯಾತ್ಮಗಳ ತರ್ಕ ಮತ್ತು ಭಾವೈಕ್ಯತೆ.
ಮಹಾಲಿಂಗಪುರದ ಬಸವಾನಂದ ಸ್ವಾಮೀಜಿಗಳ ಸಂಘ ಅವರಿಗೆ ವಚನ ಸಾಹಿತ್ಯ ಮತ್ತು ತತ್ವಶಾಸ್ತ್ರಗಳನ್ನು ಸರಿಯಾಗಿ ಅಧ್ಯಯನ ಮಾಡಲು ಕಲಿಸಿ ಕೊಟ್ಟಿತು. ಆ ಮಠಕ್ಕೆ ಬರುವ ಶರಣರೊಂದಿಗೆ ಧಾರ್ಮಿಕ ವಿಚಾರಗಳ ಜಿಜ್ಞಾಸೆ, ಪರಸ್ಪರ ತತ್ವ ವಿಮರ್ಶೆ ಮಾಡುತ್ತಲೇ ಆಧ್ಯಾತ್ಮಿಕವಾಗಿಯೂ ತಮ್ಮ ಜ್ಞಾನವನ್ನು ವಿಸ್ತರಿಸಿಕೊಂಡರು. ಇದೇ ಸಂದರ್ಭದಲ್ಲಿ ಸಮಾಜಕ್ಕೆ ಅಂಟಿಕೊಂಡಿದ್ದ ಕೋಮುವಾದದ ಪಿಡುಗಿಗೆ ಔಷಧಿ ಸಿದಟಛಿಪಡಿಸಿಕೊಂಡ ಇಬ್ರಾಹಿಂ ಸುತಾರರು, ತರ್ಕಶಾಸ್ತ್ರ ಪ್ರವೀಣರೂ ಆದರು.
ಇಬ್ರಾಹಿಂ ಸುತಾರ್ ಅವರು ಸೂಫಿ ಸಂತರ ಪರಂಪರೆಯನ್ನು ಇಂದಿಗೂ ಜೀವಂತವಾಗಿಟ್ಟುಕೊಂಡು ಅದನ್ನು 21ನೇ ಶತಮಾನಕ್ಕೆ ಕೊಂಡೊಯ್ಯಲು ಕೊಂಡಿಯಾದರು. ಬಸವಣ್ಣನವರ ವಚನಗಳಲ್ಲಿನ ಸಾರವನ್ನು ಜಾನಪದೀಯ ಭಾಷೆ ಮತ್ತು ತಾರ್ಕಿಕ ಉದಾಹರಣೆಯ ಮೂಲಕ ತಿಳಿ ಹಾಸ್ಯದಲ್ಲಿ ಹೇಳುವುದರಲ್ಲಿ ಸುತಾರ್ ಅವರು ನಿಸ್ಸೀಮರು.
ಹೀಗಾಗಿ ಅವರು ಉತ್ತರ ಕರ್ನಾಟಕದ ಲಿಂಗಾಯತ ಮಠಗಳ ಜಾತ್ರೆ, ಪ್ರವಚನದಲ್ಲಿ ತಮ್ಮ ವಿದ್ವತ್ತನ್ನು ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.
ದೇವರು ಒಬ್ಬನೇ, ಎಲ್ಲಾ ಧರ್ಮಗಳ ಸಾರವೂ ಒಂದೇ ಎಂದು ನಾನು ಹಳ್ಳಿ ಹಳ್ಳಿಗಳಲ್ಲಿ ನಿಂತು ಮಾತನಾಡಲು ಆರಂಭಿಸಿದಾಗ ಅವರು ಕೂಡ ಪರಿವರ್ತನೆಯಾದರು. ನಾನು ಧೈರ್ಯದಿಂದ ಶರಣರ ತತ್ವಗಳನ್ನು,ಸೂμಗಳ ತತ್ವಗಳನ್ನು ಹಳ್ಳಿಯ ಮುಗ್ಧ ಜನರಲ್ಲಿ ತುಂಬಿದೆ. ಅದು ನನಗೆ ಫಲ ಕೊಟ್ಟಿತು. ಒಡೆದ ಮನಸ್ಸುಗಳು ಮತ್ತೆ ಬೆಸುಗೆಯಾದವು. ಅದೇ ನನ್ನ ಜೀವನದ ಸಾರ್ಥಕ ಕ್ಷಣ ಎನಿಸಿತು.
– ಇಬ್ರಾಹಿಂ ಸುತಾರ್, ಭಾವೈಕ್ಯತೆಯ ಸೂಫಿ ಸಂತ
– ಬಸವರಾಜ್ ಹೊಂಗಲ್