Advertisement

ಪಡೀಲ್‌: 6 ಕೋ. ವೆಚ್ಚದಲ್ಲಿ ರೈಲೇ ಅಂಡರ್‌ ಪಾಸ್‌

09:59 AM May 02, 2018 | |

ಮಹಾನಗರ: ರಾ.ಹೆ. 73ರ ಪಡೀಲ್‌ನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹೊಸ ರೈಲ್ವೇ ಕೆಳ ಸೇತುವೆ ಪಕ್ಕದಲ್ಲೇ ಇರುವ ಹಳೆಯ ಕೆಳ ಸೇತುವೆ ಪುನರ್‌ ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿದ್ದು, ಇನ್ನು ಒಂದು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

Advertisement

ಈ ಹಿಂದೆ ಪಡೀಲ್‌ನಲ್ಲಿ 16.50 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 62 ಮೀ. ಉದ್ದದ ಹೊಸ ಕೆಳ ಸೇತುವೆ ಕಳೆದ ವರ್ಷದ ನ. 15ರಂದು ಉದ್ಘಾಟನೆಗೊಂಡಿತ್ತು. ಹಳೆಯ ರೈಲ್ವೇ ಕೆಳಸೇತುವೆ ತಗ್ಗು ಪ್ರದೇಶದಲ್ಲಿರುವುದರಿಂದ ಮಳೆಗಾಲದಲ್ಲಿ ಸುತ್ತಮುತ್ತಲ ನೀರು ಹೆದ್ದಾರಿಗೆ ಬಂದು ಕೃತಕ ನೆರೆ ಸೃಷ್ಟಿಯಾಗುತ್ತಿತ್ತು. ಈ ಕಾರಣ ರಸ್ತೆಯಲ್ಲಿ ಗುಂಡಿಗಳು ಉಂಟಾಗಿ ಸಂಚಾರ ಕಷ್ಟವಾಗಿತ್ತು. ಪರಿಣಾಮ ಪಡೀಲ್‌ನಲ್ಲಿ ನಿತ್ಯ ತಾಸುಗಟ್ಟಲೆ ಸಂಚಾರ ದಟ್ಟಣೆ ಆಗುತ್ತಿತ್ತು. ಈ ಸಮಸ್ಯೆಗಳಿಗೆ ಮುಕ್ತಿ ನೀಡಲೆಂದು ಈ ಭಾಗದ ಹೆದ್ದಾರಿಯನ್ನೇ 1.5 ಮೀ.ನಿಂದ 1.8 ಮೀ.ಗೆ ಏರಿಕೆ ಮಾಡಲಾಗುತ್ತಿದೆ.

ಹೊಸ ಸೇತುವೆಯಷ್ಟೇ ಎತ್ತರ
ಪಡೀಲಿನಲ್ಲಿ ನಿರ್ಮಾಣವಾಗಿರುವ ಹೊಸ ಸೇತುವೆಯ ಎತ್ತರದ ಕುರಿತು ಹಲವು ಆರೋಪಗಳು ಈ ಮೊದಲು ಕೇಳಿ ಬಂದಿದ್ದರೂ, ಪ್ರಸ್ತುತ ಎಲ್ಲ ವಾಹನಗಳೂ ಸರಾಗವಾಗಿ ಸಾಗುತ್ತಿವೆ. ಇಂಡಿಯನ್‌ ರೋಡ್ಸ್‌ ಕಾಂಗ್ರೆಸ್‌ (ಐಆರ್‌ಸಿ) ನಿಯಮದಂತೆ 5.50 ಮೀ. ಎತ್ತರದಲ್ಲಿ ಹಾಗೂ 12.50 ಮೀ. ಅಗಲದಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗಿತ್ತು.

ಪ್ರಸ್ತುತ ರೈಲ್ವೇ ಇಲಾಖೆಯು ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಿರುವ ಈ ಸೇತುವೆಯೂ ಕೂಡ ಇಷ್ಟೇ ಎತ್ತರವನ್ನು ಹೊಂದಲಿದೆ. ಆರ್‌ಟಿಒ ನಿಯಮದಂತೆ ಕಂಟೈನರ್‌ ಸಹಿತ ಒಂದು ವಾಹನವು ಗರಿಷ್ಠ 4.8 ಮೀ. ಎತ್ತರವನ್ನು ಮಾತ್ರ ಹೊಂದಿರಬಹುದು.

ಕೆಳ ಸೇತುವೆಯ ಬಳಿಕ ರಸ್ತೆ ಕಾಮಗಾರಿ
ಪ್ರಸ್ತುತ ರೈಲ್ವೇ ಇಲಾಖೆಯಿಂದ ಹಳೆ ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಹೈಡ್ರಾಲಿಕ್‌ ತಂತ್ರಜ್ಞಾನ ಬಳಸಿಕೊಂಡು ಬಾಕ್ಸ್‌ಗಳನ್ನು ಪುಶ್‌ ಮಾಡಿ ಸೇತುವೆ ಕಾಮಗಾರಿ ನಡೆಸಲಾಗುತ್ತಿದೆ. ಮೇ ಅಂತ್ಯಕ್ಕೆ ತಾಂತ್ರಿಕ ಕಾಮಗಾರಿ ಪೂರ್ಣವಾಗಲಿದೆ. ಇದು ಮುಗಿದ ತತ್‌ಕ್ಷಣವೇ ಈ ಸೇತುವೆ ಸಂಪರ್ಕ ರಸ್ತೆಯ ಕಾಮಗಾರಿಯನ್ನು ಎನ್‌ಎಚ್‌ಎಐನವರು ನಿರ್ವಹಿಸಲಿದ್ದಾರೆ. ರೈಲ್ವೇ ಕೆಳಸೇತುವೆ ಎದುರು ಹಾಗೂ ಹಿಂದೆ ರಸ್ತೆಯನ್ನು ಆವಶ್ಯಕತೆಗೆ ಅನುಗುಣವಾಗಿ ಮಣ್ಣು ಹಾಕಿ ಎತ್ತರಗೊಳಿಸುವ ಕಾಮಗಾರಿಯನ್ನು ಎನ್‌ಎಚ್‌ಎಐ ನಡೆಸಲಿದೆ.

Advertisement

ರೈಲ್ವೇ ಕೆಳಸೇತುವೆ ಕಾಮಗಾರಿ ವಿಧಾನ
ವಾಹನ ಸಂಚಾರಕ್ಕೆ ಮುಕ್ತಗೊಂಡ ಪಡೀಲ್‌ನ ಹೊಸ ಅಂಡರ್‌ಪಾಸ್‌ ಕಾಮಗಾರಿಯನ್ನು ಮೇಲ್ಗಡೆ ರೈಲು ಸಂಚರಿಸುತ್ತಿದ್ದಂತೆ ನಿರ್ಮಿಸಲಾಗಿತ್ತು. ಇದು ಹೇಗೆಂದರೆ, ಹೈಡ್ರಾಲಿಕ್‌ ತಂತ್ರಜ್ಞಾನವನ್ನು ಬಳಸಿ ಒಂದರ ಹಿಂದೆ ಒಂದರಂತೆ ಬಾಕ್ಸ್‌ಗಳನ್ನು ಪುಶ್‌ ಮಾಡಿ ಸುರಂಗ ನಿರ್ಮಿಸಲಾಗಿತ್ತು. ಹೊಸತಾಗಿ ನಿರ್ಮಿಸುತ್ತಿರುವ ಅಂಡರ್‌ಪಾಸ್‌ನಲ್ಲಿ ಮಣ್ಣು ಕೊರೆಯುವ ಕೆಲಸ ಬಿಟ್ಟರೆ ಉಳಿದಂತೆ ಹೈಡ್ರಾಲಿಕ್‌ ತಂತ್ರಜ್ಞಾನವನ್ನೇ ಬಳಸಲಾಗಿತ್ತು. ಆದರೆ, ಈಗ ಕೈಗೆತ್ತಿಕೊಳ್ಳಲಾಗಿರುವ ಪಡೀಲ್‌ನ ಹಳೆ ಸೇತುವೆಯ ಕಾಮಗಾರಿಗೆ ಇಷ್ಟು ಪ್ರಯಾಸ ಪಡಬೇಕಿಲ್ಲ. ಈಗಾಗಲೇ ಸುರಂಗ ಇರುವ ಕಾರಣದಿಂದ ಅದರೊಳಗಡೆ ಕಾಂಕ್ರೀಟ್‌ ಹಾಕಿ ಬಾಕ್ಸ್‌ ಮಾದರಿಯಲ್ಲಿ ಸೇತುವೆ ಕಾಮಗಾರಿ ನಡೆಸಲಾಗುತ್ತಿದೆ.

ಮೇ ಅಂತ್ಯಕ್ಕೆ ಮುಕ್ತಾಯ
ಪಡೀಲ್‌ನಲ್ಲಿರುವ ಹಳೆಯ ಕೆಳಸೇತುವೆಯನ್ನು ಸುಸಜ್ಜಿತ ಮಾದರಿಯಲ್ಲಿ ಸಿದ್ಧಗೊಳಿಸುವ ಕಾಮಗಾರಿ ಈಗಾಗಲೇ ಅರ್ಧದಷ್ಟು ಮುಕ್ತಾಯವಾಗಿದ್ದು, ಮೇ ಅಂತ್ಯಕ್ಕೆ ಪೂರ್ಣವಾಗಲಿದೆ. ಮುಂದಿನ ಕಾಮಗಾರಿಯನ್ನು ಎನ್‌ಎಚ್‌ಎಐ ಅವರು ನಿರ್ವಹಿಸಲಿದ್ದಾರೆ.
– ಎಂ. ಪ್ರವೀಣಾ,
ಎಕ್ಸಿಕ್ಯೂಟಿವ್‌ ಎಂಜಿನಿಯರ್‌, ದಕ್ಷಿಣ ರೈಲ್ವೇ 

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next