Advertisement

ಭತ್ತದ ಸಸಿ ಮಡಿಗೆ ಟ್ಯಾಂಕರ್‌ ನೀರು

12:39 PM Aug 06, 2018 | Team Udayavani |

ಸಿಂಧನೂರು: ತುಂಗಭದ್ರಾ ಜಲಾಶಯ ನೀರು ತುಂಬಿ ಬೋರ್ಗರೆಯುತ್ತಿದ್ದರೂ ಭತ್ತದ ಸಸಿಗಳಿಗೆ ಟ್ರ್ಯಾಕ್ಟರ್‌ ಮೂಲಕ ನೀರು ಹರಿಸುತ್ತಿರುವುದು ರೈತರ ಬವಣೆ ಬಯಲು ಮಾಡಿದೆ.

Advertisement

ಮಳೆ ಬಂದಿದ್ದರೂ ಎಡದಂಡೆ ನಾಲೆ ಹಾಗೂ ಹಳ್ಳಗಳಿಗೆ ನೀರು ಬಾರದೇ ರೈತರು ಹಾಕಿದ ಸಸಿ ಮಡಿಗೆ ಅಪಾರ
ಹಣ ವೆಚ್ಚ ಮಾಡಿ ಟ್ಯಾಂಕರ್‌ನಿಂದ ನೀರು ಹಾಕಿಸುತ್ತಿದ್ದಾರೆ. ಬಾಡಿ ಹೋಗುತ್ತಿರುವ ಸಸಿಗಳ ಉಸಿರು ಉಳಿಸಲು ಸಾಲ ಮಾಡಿ ಟ್ಯಾಂಕರ್‌ ಮೂಲಕ ನೀರು ಬಿಡುತ್ತಿದ್ದಾರೆ.

ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವಾಗ ಹಳ್ಳಗಳಿಗೆ ಸಮರ್ಪಕ ಸಮಯದಲ್ಲಿ
ನೀರು ಹರಿಸಬೇಕೆನ್ನುವ ಸಾಮಾನ್ಯ ಜ್ಞಾನ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಇಲ್ಲದೇ ಹೋಗಿದ್ದು ವಿಪರ್ಯಾಸ ಎಂದು ರೈತರು ದೂರಿದ್ದಾರೆ.

ಜಲಾಶಯದಲ್ಲಿ 97 ಟಿಎಂಸಿ ಅಡಿ ನೀರಿದೆ. ಒಳಹರಿವು 20 ಸಾವಿರ ಕ್ಯೂಸೆಕ್ಸ್‌ ಇದೆ. ಹೊರ ಹರಿವು 10 ಸಾವಿರೂ
ಕ್ಯೂಸೆಕ್ಸ್‌ ಹರಿಯುತ್ತಿದೆ. ಹಳ್ಳಗಳಿಗೆ ನೀರು ಬಿಡಿ ಎಂದು ರೈತ ಸಂಕುಲ ಈಗಾಗಲೇ ಒತ್ತಾಯಿಸಿದ್ದಾರೆ. ಐಸಿಸಿ ಸಭೆ
ಅಧ್ಯಕ್ಷರು ಹಾಗೂ ಸಚಿವ ವೆಂಕಟರಾವ್‌ ನಾಡಗೌಡರು ರೈತರ ಮೊರೆ ಆಲಿಸಿ ನೀರು ಹರಿಸುವ ಅವಶ್ಯಕತೆ ಇದೆ. ನೀರು ಸಿಗದೇ ಬಾಡಿ ಹೋದ ಸಸಿಗಳಿಂದ ಉತ್ತಮ ಫಸಲು ಪಡೆಯಲು ಸಾಧ್ಯವಿಲ್ಲ ಎನ್ನುವುದು ರೈತರ ಅಳಲು. ಸಸಿ ಹಾಕುವ ಸಮಯದಲ್ಲಿ ಕೆಲವು ದಿನಗಳ ಕಾಲ ನೀರುಣಿಸುವ ಸಾಧ್ಯವಾಗುತ್ತದೆ ಎನ್ನುವ ಭರವಸೆಯೊಂದಿಗೆ ಭೂಮಿಗೆ ಭತ್ತದ ಬೀಜ ಚೆಲ್ಲಿದೆವು. ಎರಡು ತಿಂಗಳು ಗತಿಸಿದರೂ ಮಳೆ ಬಾರದ ಕಾರಣ ಸಸಿಗಳು ಕಮರತೊಡಗಿವೆ. ಕಾರಣ
ಅನಿವಾರ್ಯವಾಗಿ ಅವುಗಳನ್ನು ರಕ್ಷಿಸುವ ಉದ್ದೇಶದಿಂದ ಟ್ರ್ಯಾಕ್ಟರ್‌ನಿಂದ ನೀರು ತಂದು ಹಾಕುತ್ತಿದ್ದೇವೆ ಎಂದು ನಗರದ ಪಿಡಬ್ಲೂಡಿ ಕ್ಯಾಂಪ್‌ ರೈತ ಮಹೆಬೂಬ್‌ ಸಾಬ್‌ ಡೋಂಗ್ರಿ ನೊಂದು ಹೇಳುತ್ತಾರೆ.

ಒಂದು ತಿಂಗಳನಿಂದ ಟ್ರ್ಯಾಕ್ಟರ್‌ ಮೂಲಕ ನೀರು ಹಾಕುತ್ತಿದ್ದರೂ ಭತ್ತದ ಸಸಿಗೆ ಸಾಕಾಗುತ್ತಿಲ್ಲ. ಈಗಾಗಲೇ
ತುಂಗಭದ್ರಾ ಎಡದಂಡೆ ನಾಲೆಗೆ ನೀರು ಬಿಟ್ಟು 15 ದಿನಗಳ ಕಳೆದಿವೆ. ಆದಾಗ್ಯೂ ಇನ್ನು ಸಿಂಧನೂರು ಹಳ್ಳಕ್ಕೆ ನೀರು ಬಿಟ್ಟಿಲ್ಲ. ಇದರಿಂದ ದನಕರುಗಳಿಗೂ ಕುಡಿಯಲು ನೀರಿಲ್ಲದಂತಾಗಿದೆ. ಭತ್ತದ ಸಸಿ ಹಾಕಿದವರ ಪಾಡಂತೂ ಹೇಳತೀರದಾಗಿದೆ.

Advertisement

ಕಾರಣ ನೀರಾವರಿ ಇಲಾಖೆ ಪ್ರಭಾರ ಕಾರ್ಯಪಾಲಕ ಇಂಜನಿಯರ್‌ ಈರಣ್ಣ ಮತ್ತು ಸಚಿವ ವೆಂಕಟರಾವ್‌ ನಾಡಗೌಡ ತಕ್ಷಣ ಸಿಂಧನೂರು ಹಳ್ಳಕ್ಕೆ ನೀರು ಬಿಡುವ ಮೂಲಕ ಸಾವಿರಾರು ಎಕರೆ ಭೂಮಿಗೆ ನೀರುಣಿಸಲು ಅನುಕೂಲ ಮಾಡಿಕೊಡಬೇಕು. 

ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಸಿಂಧನೂರು ಹಳ್ಳದ ಅಚ್ಚುಕಟ್ಟು ಪ್ರದೇಶದಲ್ಲಿರುವ ರೈತರು ಒತ್ತಾಯಿಸಿದ್ದಾರೆ. ಇತ್ತ ಮಳೆಯೂ ಇಲ್ಲ, ಹಳ್ಳಕ್ಕೆ ನೀರೂ ಇಲ್ಲದಿರುವುದರಿಂದ ಹೊಲಗಳೆಲ್ಲ ಬರಿದಾಗಿವೆ.

ತಕ್ಷಣ ನೀರಾವರಿ ಇಲಾಖೆ ಅಧಿಕಾರಿಗಳ ಹಳ್ಳಕ್ಕೆ ನೀರು ಹರಿಸಬೇಕು ಎಂದು ನಗರದ ಹಿರೇಹಳ್ಳದ ಅಚ್ಚುಕಟ್ಟು ಪ್ರದೇಶದ ರೈತರಾದ ಈರಪ್ಪ ಗೊರೇಬಾಳ, ಶಿವಪ್ಪ, ಇಬ್ರಾಹಿಂಸಾಬ್‌, ಕನಕಪ್ಪ, ಮನ್ಸೂರ್‌, ಜಾಕೀರ್‌ಸಾಬ್‌, ಸುರೇಶ, ಖಾಜಾ, ರಂಜಾನ್‌ಸಾಬ್‌, ಬಸವರಾಜ ಕುಲಕರ್ಣಿ, ತಿಪ್ಪಣ್ಣ, ಅಶೋಕ ಶೇಠ್…, ಮಹ್ಮದ್‌ಸಾಬ್‌ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next