ನಂಜನಗೂಡು: ಮಾದಯ್ಯನ ಹುಂಡಿಯಲ್ಲಿ ಸೋಮವಾರ ಭತ್ತ ಹಾಗೂ ಕಾಣಿಕೆ ಸಂಗ್ರಹಿಸುವ ಮೂಲಕ ಸುತ್ತೂರು ಪೀಠಾಧ್ಯಕ್ಷ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಈ ಸಾಲಿನ 2020ರ ಶಿವರಾತ್ರಿ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಜಾತ್ರೆಗೆ ಭತ್ತ ಹಾಗೂ ಕಾಣಿಕೆ ಸಂಗ್ರಹಿಸುವ ಧಾರ್ಮಿಕ ಪರಂಪರೆಗೆ ಈ ಬಾರಿ ಛತ್ರ ಹೋಬಳಿಯ ಮಾದಯ್ಯನ ಹುಂಡಿ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.
ಗ್ರಾಮಕ್ಕೆ ಆಗಮಿಸಿದ ಸುತ್ತೂರು ಶ್ರೀಗಳನ್ನು ಮಾದಯ್ಯನಹುಂಡಿ ಗ್ರಾಮಸ್ಥರಲ್ಲದೇ ಸುತ್ತಮುತ್ತಲಿನ ಹಳ್ಳಿಗಳ ಸಹಸ್ರಾರು ಮಂದಿ ಬರಮಾಡಿಕೊಂಡರು. ಗ್ರಾಮದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಅದ್ಧೂರಿ ಮಾದೇಶ್ವರ ಉತ್ಸವನ್ನು ಉದ್ಘಾಟಿಸಿದ ಶ್ರೀಗಳು ಉತ್ಸವದ ಜೊತೆ ಗ್ರಾಮದ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತಾವೂ ಸಹ ಸಾಗಿ ಬಂದರು.
ನಂತರ ಗ್ರಾಮದ ಜಗದೀಶ ಅವರ ಮನೆಯ ಧಾರ್ಮಿಕ (ಭಿಕ್ಷೆ) ಕಾರ್ಯಕ್ರಮದಲ್ಲಿ ಭಾಗಿಯಾದ ದೇಶಿಕೇಂದ್ರ ಸ್ವಾಮೀಜಿಗಳು ಅಲ್ಲಿ ಭತ್ತ ಹಾಗೂ ಕಾಣಿಕೆ ಸ್ವಿಕರಿಸುವುದರ ಮುಖಾಂತರ ಭಕ್ತರಿಂದಲೇ ಸುತ್ತೂರು ಜಾತ್ರೆ ಎಂಬ ಸಂಪ್ರದಾಯಕ್ಕೆ ಮೆರುಗು ನೀಡಿದರು. ಜಾತ್ರೆಗಾಗಿ ಈ ಭಾಗದ ಪ್ರಮುಖ ಬೆಳೆ ಭತ್ತ ಹಾಗೂ ನಗದನ್ನು ಕಾಣಕೆಯಾಗಿ ಸಂಗ್ರಹಿಸುವುದು ಸುತ್ತೂರು ಮಠದ ಐತಿಹಾಸಿಕ ಪರಂಪರೆಯಾಗಿದೆ. ಸುತ್ತೂರು ಮಠವಿರುವ ತಾಲೂಕಿನ ಬಿಳಗೆರೆ ಹಾಗೂ ಛತ್ರ ಹೋಬಳಿಯಲ್ಲಿ ಈ ಕಾಣಿಕೆ ಸಂಗ್ರಹ ಪ್ರತಿ ವರ್ಷ ನಡೆಯುತ್ತಿರುವುದು ವಿಶೇಷವಾಗಿದೆ.
ಪ್ರತಿ ವರ್ಷ ಹೋಬಳಿಯ ಯಾವುದಾದರೂ ಒಂದು ಗ್ರಾಮವನ್ನು (ಸರದಿಯ ಮೇಲೆ ) ಆಯ್ಕೆ ಮಾಡಿಕೊಂಡು ಶ್ರೀಗಳು ಚಾಲನೆ ನೀಡಿದ ನಂತರ ಮಠದ ಶಿಷ್ಯರು, ಕಿರಿಯ ಶ್ರೀಗಳು ಹಾಗೂ ಭಕ್ತರು ಈ ಎರಡು ಹೋಬಳಿಗಳ ಸುಮಾರು 36 ಗ್ರಾಮಗಳಲ್ಲಿನ 3000ಕ್ಕೂ ಹೆಚ್ಚು ಮನೆಗಳಿಗೆ ತೆರಳಿ ಈ ಭತ್ತ ಹಾಗೂ ನಗದು ಸಂಗ್ರಹಿಸುವರು. ಜಾತ್ರೆ ಭತ್ತ ಸಂಗ್ರಹ ಚಾಲನೆ ಸಂದರ್ಭದಲ್ಲಿ ಜಿಪಂ ಸದಸ್ಯ ಗುರುಸ್ವಾಮಿ, ಹದಿನಾರು ನಂಜಪ್ಪ, ನಂಜುಂಡಸ್ವಾಮಿ ದೇವಯ್ಯ, ಸಿದ್ಧಲಿಂಗಪ್ಪ, ಜಗದೀಶ, ನಾಗಣ್ಣ, ರೇವಣ್ಣ, ಪುಟ್ಟರಾಜು, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿ ವರ್ಷ 500 ಕ್ವಿಂಟಲ್ ಭತ್ತ ಸಂಗ್ರಹ: ಸುತ್ತೂರು ಜಾತ್ರಾ ಮಹೋತ್ಸವಕ್ಕೆ ನೀಡಲೆಂದು ಬಿಳಗೆರೆ ಹಾಗೂ ಛತ್ರ ಹೋಬಳಿಯ ಭಕ್ತರು ತಾವು ಬೆಳೆದ ಭತ್ತವನ್ನು ಶೇಖರಿಸಿ ಇಟ್ಟುಕೊಂಡು ಮಠದ ಶಿಷ್ಯರು ಬಂದಾಗ ಅವರಿಗೆ ಅರ್ಪಿಸುವುದು ಇಲ್ಲಿನ ಸಂಪ್ರದಾಯವಾಗಿದೆ. ರಾಶಿ ಪೂಜೆ ಮಾಡದ ಭತ್ತವನ್ನು ಹೊಲದಿಂದ ಮನೆಗೆ ತಾರದೆ ಗದ್ದೆಯಿಂದಲೇ ಮಾರಾಟ ಮಾಡುವ ರೈತರು ಹಾಗೂ ಭತ್ತ ಬೆಳೆಯದೆ ಇದ್ದವರು ನಗದನ್ನು ಜಾತ್ರಾ ಮಹೋತ್ಸವಕ್ಕೆ ಕಾಣಿಕೆಯಾಗಿ ಅರ್ಪಿಸುವರು. ಈ ರೀತಿ ಸಂಹ್ರಹವಾಗುವ ಭತ್ತವೇ ಸುಮಾರು 500 ರಿಂದ 600 ಕ್ವಿಂಟಲ್ ಆಗಿರುತ್ತದೆ. ನಗದು ಸುಮಾರು 5 ರಿಂದ 6 ಲಕ್ಷ ರೂ. ಸಂಗ್ರಹವಾಗುತ್ತದೆ ಎಂದು ಜಾತ್ರಾ ಸಮತಿ ಮುಖ್ಯಸ್ಥ ಬೊಕ್ಕಳ್ಳಿ ಸುಬ್ಬಪ್ಪ ತಿಳಿಸಿದರು.
ಜ.21ರಿಂದ 6 ದಿನ ಅದ್ಧೂರಿ ಜಾತ್ರೆ: ಜ.21ರಿಂದ ಆರು ದಿನಗಳ ಕಾಲ ಸುತ್ತೂರು ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗುತ್ತದೆ. ಪ್ರತಿದಿನ ಒಂದರಿಂದ ಒಂದೂವರೆ ಲಕ್ಷ ಮಂದಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗುತ್ತದೆ. ಏಳು ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ ಪ್ರದರ್ಶನಗಳು ಅಹೋರಾತ್ರಿ ನಡೆಯುತ್ತವೆ. ವೈಜ್ಞಾನಿಕ, ಕೃಷಿ ವಸ್ತು ಪ್ರದರ್ಶನ ಇರುತ್ತದೆ. ಧಾರ್ಮಿಕ ಕಾರ್ಯಕ್ರಮಗಳು, ರೈತರೊಂದಿಗೆ ಸಂವಾದ, ಸಾಮೂಹಿಕ ವಿವಾಹ ಮಹೋತ್ಸವ, ದನಗಳ ಜಾತ್ರೆ, ಕುಸ್ತಿ ಸೇರಿದಂತೆ ದೇಸಿ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ. ಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಸಚಿವರು, ಶಾಸಕರು ಮತ್ತಿರರ ಗಣ್ಯರು ಭಾಗಿಯಾಗುವರು.