ಮಂಗಳೂರು: ಕರಾವಳಿಯಲ್ಲಿ ಕೋವಿಡ್ ಆತಂಕದ ನಡುವೆಯೂ ಭತ್ತದ ಕೃಷಿಯಲ್ಲಿ ವಿಶೇಷ ಸಾಧನೆ ದಾಖಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರಿ ಮೀರಿ ಸಾಧನೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಗುರಿಯ ಶೇ. 99ರಷ್ಟು ಪ್ರಗತಿ ಸಾಧಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ ವಾರ್ಷಿಕ ಒಟ್ಟು ಗುರಿ 10,260 ಹೆಕ್ಟೇರ್. ಆದರೆ ಇದನ್ನು ಮೀರಿ 11,228.6 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಆಗಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು ಗುರಿಯ 36,000 ಹೆಕ್ಟೇರ್‌ನಲ್ಲಿ 35,756 ಹೆಕ್ಟೇರ್‌ನಲ್ಲಿ ಭತ್ತದ ಕೃಷಿ ಆಗಿದೆ.
ಕಳೆದ ಮುಂಗಾರು ಹಂಗಾಮಿನ ಈ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 10,411 ಹೆಕ್ಟೇರ್ ಪ್ರದೇಶದಲ್ಲಿ ಹಾಗೂ ಉಡುಪಿ ಜಿಲ್ಲೆಯಲ್ಲಿ 34,730 ಹೆ. ಪ್ರದೇಶದಲ್ಲಿ ಭತ್ತ ಬೆಳೆಯಾಗಿತ್ತು. ಉತ್ತಮ ಮಳೆ, ಸಕಾಲದಲ್ಲಿ ಮುಂಗಾರು ಆಗಮನ ಹಾಗೂ ಭತ್ತದ ಕೃಷಿಯತ್ತ ಹೆಚ್ಚಿನ ಒಲವು ವ್ಯಕ್ತವಾಗಿರುವುದು ಭತ್ತದ ನಾಟಿಯಲ್ಲಿಯಲ್ಲಿ ಈ ಬಾರಿ ವಿಶೇಷ ಪ್ರಗತಿ ದಾಖಲಿಸಲು ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅತಿವೃಷ್ಠಿ ಸೃಷ್ಟಿಸಿದ ಆತಂಕ
ಈ ಬಾರಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಗಳಲ್ಲಿ ಭತ್ತದ ನಾಟಿ ಉತ್ತಮವಾಗಿದ್ದರೂ ಸೆಪ್ಟಂಬರ್‌ನಲ್ಲಿ ವಾಡಿಕೆಗಿಂತ ಅತ್ಯಧಿಕ ಮಳೆ ಸುರಿದಿದ್ದು ಹೊಳೆ ಹಾಗೂ ತಗ್ಗು ಪ್ರದೇಶಗಳಲ್ಲಿ ಗದ್ದೆಗಳಿಗೆ ನೀರು ನುಗ್ಗಿ ಕೃಷಿ ನೀರಿನಲ್ಲಿ ಮುಳುಗಿತ್ತು. ಇದರಿಂದ ಭತ್ತದ ಬೆಳೆಗೆ ಹಾನಿ ಸಂಭವಿದ್ದು ನಷ್ಟವನ್ನು ಅಂದಾಜಿಸಲಾಗುತ್ತಿದೆ.ಇದು ಈ ಬಾರಿ ಫಸಲಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತದ ನಾಟಿಯಲ್ಲಿ ಗುರಿ ಮೀರಿದ ಸಾಧನೆ ಆಗಿದೆ. ಸಕಾಲದಲ್ಲಿ ಮಳೆ ಪ್ರಾರಂಭವಾಗಿರುವುದು ಒಂದೆಡೆಯಾದರೆ ಭತ್ತದ ಕೃಷಿಗೆ ಹೆಚ್ಚಿನ ಉತ್ಸಾಹ, ಹಡೀಲು ಬಿದ್ದಿರುವ ಗದ್ದೆಗಳ ಭತ್ತದ ಕೃಷಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು.
– ಡಾ| ಸೀತಾ, ಕೃಷಿ ಜಂಟಿ ನಿರ್ದೆಶಕರು, ದ.ಕ. ಜಿಲ್ಲೆ
ಉಡುಪಿ ಜಿಲ್ಲೆಯಲ್ಲಿ ಕಳೆದ ಮುಂಗಾರು ಹಂಗಾಮಿಗೆ ಹೋಲಿಸಿದರೆ ಈ ಬಾರಿ ಮುಂಗಾರಿನಲ್ಲಿ ನಿಗದಿತ ಗುರಿಯಲ್ಲಿ ಶೇ. 99 ಸಾಧನೆಯಾಗಿದೆ. ಬೆಳೆಯು ಉತ್ತಮವಾಗಿತ್ತು. ಆದರೆ ಕಳೆದ ಕೆಲವು ದಿನಗಳಲ್ಲಿ ಸುರಿದಿರುವ ಮಳೆಯಿಂದ ಕೆಲವು ಕಡೆ ಗದ್ದೆಗಳಿಗೆ ನುಗ್ಗಿದ್ದು ಇದರಿಂದ ಆಗಿರುವ ಹಾನಿಯನ್ನು ಅಂದಾಜಿಸಬೇಕಾಗಿದೆ.
– ಡಾ| ಎಚ್. ಕೆಂಪೇಗೌಡ, ಜಂಟಿ ಕೃಷಿ ನಿರ್ದೇಶಕರು, ಉಡುಪಿ ಜಿಲ್ಲೆ