Advertisement

ಭತ್ತ ಕೃಷಿ ಎಂದಿಗೂ ಬಿಡದ ನಂಟು

06:15 AM Sep 11, 2017 | |

ಭತ್ತದ ಕೃಷಿಯೊಂದಿಗೆ ಸಾಂಪ್ರಾದಾಯಿಕ ಜೀವನ ನಡೆಸುತ್ತಿರುವ ಈ ಕುಟುಂಬ ಅದರಲ್ಲೇ ನೆಮ್ಮದಿಯನ್ನು ಕಂಡುಕೊಂಡಿದೆ. ಭತ್ತ ಕೃಷಿಯಿಂದ ವಿಮುಖರಾಗುವ ಒಲವಿಲ್ಲ, ಅತ್ತಕಡೆ ಹೊರಳುವ ಅಗತ್ಯವಿಲ್ಲ ಎನ್ನುವವರು ಸುಳ್ಯ ನಗರದಿಂದ 10 ಕಿ.ಮೀ. ದೂರದ ಉಬರಡ್ಕ ಗ್ರಾಮದ ಮದಕ ಶುಭಕರ ಪ್ರಭು ಅವರ ಮನೆಗೊಮ್ಮೆ ಭೇಟಿ ನೀಡಲೇಬೇಕು.

Advertisement

ಶುಭಕರ ಪ್ರಭು ಚಂದ್ರಕಲಾ ದಂಪತಿ ಮಕ್ಕಳಾದ ಚೇತನ್‌, ಚೈತನ್ಯ, ಚಂದ್ರಕಲಾ ಅವರ ಸಹೋದರಿ ಶಶಿಕಲಾ ಹಾಗೂ ಪತಿ ರಮೇಶ್‌ ಸಹಿತ 6 ಮಂದಿಯ ಕುಟುಂಬ ಮುಖ್ಯವೃತ್ತಿಯಾಗಿ ಭತ್ತ ಕೃಷಿಯನ್ನೇ ನೆಚ್ಚಿಕೊಂಡಿದೆ. ಇದರೊಂದಿಗೆ ಅಡಿಕೆ, ತೆಂಗು, ತರಕಾರಿ ಜತೆ ಗಿಡಮೂಲಿಕೆಗಳಿವೆ.

ಸುಮಾರು 5 ಎಕರೆ ಜಮೀನಿನ ಒಂದೆಕರೆಯಲ್ಲಿ ಭತ್ತ ಕೃಷಿಯಿದೆ. ಹಿಂದೆ ವರ್ಷಕ್ಕೆರಡು ಬಾರಿ (ಎಣಲು ಮತ್ತು ಸುಗ್ಗಿ) ಬೇಸಾಯ ಮಾಡುತ್ತಿದ್ದವರು ಈಗ ನೀರಿನ ಅಭಾವದಿಂದಾಗಿ 1 ಬೆಳೆ ಏಣಲು ಮಾತ್ರ ಕೈಗೊಳ್ಳುತ್ತಿದ್ದಾರೆ. ಹಿಂದೆ “ಜಯ’ ತಳಿ ಬಳಸುತ್ತಿದ್ದರೆ ಈಗ ರಾಜಕಯಮೆ ಹಾಗೂ ತೋಟಗಾರಿಕ ಇಲಾಖೆಯಲ್ಲಿ ದೊರೆಯುವ “ಸುಮಾ’ ತಳಿ ಬೇಸಾಯ ಮಾಡುತ್ತಿದ್ದಾರೆ. ಇವೆರಡನ್ನೇ ಈಗ ನಾಟಿ ಮಾಡಿದ್ದು, ಹಸನಾಗಿ ಬೆಳೆದು ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ.
 
ಬೆಳೆಯೊಂದಕ್ಕೆ 17 ಕ್ವಿಂಟಾಲ್‌ 
ಒಂದು ಬೆಳೆಗೆ ಸುಮಾರು 30 ಸೇರು ಅಂದರೆ, ಅಂದಾಜು 30 ಕೆ.ಜಿ. ಯಷ್ಟು ಭತ್ತ ಬಿತ್ತನೆ ಮಾಡುತ್ತಿದ್ದು, 17 ಕ್ವಿಂಟಾಲ್‌ ಇಳುವರಿಯಾಗುತ್ತಿದೆ. ಕಳೆದೆರಡು ವರ್ಷಗಳಿಂದ ಇವರಿಗೆ ದೊರೆತ ಇಳುವರಿ ಅಧಿಕ. ಇದರಲ್ಲಿ  ಶೇ. 65ರಷ್ಟು ಅಕ್ಕಿ ದೊರೆಯುತ್ತಿದೆ. ಅಂದರೆ ಸುಮಾರು 9 ಕ್ವಿಂಟಾಲ್‌ ಅಕ್ಕಿ. ಮನೆ ಖರ್ಚಿಗೆ 6 ಕ್ವಿಂಟಾಲ್‌ ಉಪಯೋಗವಾದರೆ, ಉಳಿದ 3 ಕ್ವಿಂಟಾಲ್‌ ಅನ್ನು ಬಂಧುಬಾಂಧವರಿಗೆ ಹಂಚಿಹೋಗುತ್ತಿದೆ ಎನ್ನುತಾರೆ ಚಂದ್ರಕಲಾ.

ರಾಜಕಯಮೆ ತೆನೆ ಹೊರಡುವ ವೇಳೆ ಸೊಗಸಾದ ಪರಿಮಳ ಬೀರುತ್ತಿದೆ. ಇದನ್ನು ಬಿಳಿ ಅಕ್ಕಿಯನ್ನಾಗಿ ಬಳಸಲು ಬೆಳೆಯಲಾಗುತ್ತದೆ. ಉಳಿದಂತೆ ಸುಮಾ ತಳಿ ಕೂಡ ಬೆಳೆಸಿದ್ದು. ಈ ಎರಡೂ ಬಗೆಯ ಅಕ್ಕಿ ರುಚಿಕರವಾಗಿದೆ ಹಾಗೂ ಇದಕ್ಕೆ ರೋಗ ಬಾಧೆಯೂ ಕಡಿಮೆ.

ಕೃಷಿಗೆ ಕಾಡುಪ್ರಾಣಿಗಳ ಹಾವಳಿ ಅಷ್ಟೇನೂ ಇಲ್ಲ. ನಾಟಿ ಬಳಿಕ ಒಂದು ಬಾರಿ ಕೀಟನಾಶಕ ಬಳಸುತ್ತಾರೆ. ಉಳುಮೆಗೆ ಪವರ್‌ಟಿಲ್ಲರ್‌. ಕೊಯ್ಲಿಗೆ ಸುಮಾರು 30 ಮಂದಿ ಆಳುಗಳ ಕೆಲಸವಿದೆ. ಕಾರ್ಮಿಕರ ಕೊರತೆ ಸಂಕಷ್ಟ ಬಿಟ್ಟರೆ ಉಳಿದಂತೆ ಬಹುದೊಡ್ಡ ಕೆಲಸವೇ ಅಲ್ಲ ಎನ್ನುತ್ತಾರೆ ಮನೆಮಂದಿ.

Advertisement

ಅಂಗಡಿಯಿಂದ ಹೆಚ್ಚೇನೂ ಖರೀದಿಸಬೇಕಾಗಿಲ್ಲ. ಕುಟುಂಬ ಸ್ವಾವಾಲಂಬಿಯ ಬದುಕಿನಲ್ಲಿದೆ. 16 ಮಲೆನಾಡ ಗಿಡ್ಡ ತಳಿಯ ಜಾನುವಾರುಗಳಿವೆ. ಹಾಲು, ತುಪ್ಪ, ಮೊಸರು ಮನೆ ಖರ್ಚಿಗೆ ದೊರೆತು ಉಳಿದುದನ್ನು ಅಗತ್ಯವಿದ್ದವರಿಗೆ ಮಾರಾಟ ಮಾಡುತ್ತಾರೆ. ಹಟ್ಟಿ ಗೊಬ್ಬರ ಭತ್ತ, ತರಕಾರಿಗೆ ಬಳಸುತ್ತಿದ್ದಾರೆ. ಉಳಿದವನ್ನು ಅಡಿಕೆ ಮರದ ಬುಡಕ್ಕೆ. ಹೀಗಾಗಿ ಗೊಬ್ಬರದ ಖರೀದಿಗಾಗಿ ವ್ಯಯಿಸಬೇಕಿಲ್ಲ. ಭತ್ತ ಕೃಷಿ ಅನ್ನದ ಕೊರತೆ ನೀಗಿಸಿದರೆ, ಬೈಹುಲ್ಲು ಜಾನುವಾರುಗಳಿಗೆ ಮೇವಾಗುತ್ತಿದೆ. ಇದರೊಂದಿಗೆ ಅಡಿಕೆ, ತೆಂಗು, ತರಕಾರಿ, ಗಿಡಮೂಲಿಕೆ ಹೀಗೆ ಒಂದೊಂದು ಬಗೆಯೂ ಒಂದಕ್ಕೊಂದು ಪೂರಕವಾಗಿದೆ.

ಔಷಧ ಸಸಿಗಳು, ಪೂಜಾ ಸೊತ್ತುಗಳಿವೆ
ಆಹಾರ ಮತ್ತು ವಾಣಿಜ್ಯ ಬೆಳೆಗಳೊಂದಿಗೆ ಗಿಡಮೂಲಿಕೆಗಳಿವೆ. ನಾಟಿ ವೈದ್ಯರಾಗಿದ್ದ ಮನೆಯ ಯಜಮಾನ ನಿಧನರಾದ ಬಳಿಕ ಅವರು ಕಿರಿಯರಿಗೆ ನಾಟಿ ವೈದ್ಯದ ಪರಂಪರೆಯನ್ನು ನೀಡಲಿಲ್ಲ. ಈ ಕಾರಣದಿಂದ ಮನೆಯಲ್ಲಿ ಚಿಕಿತ್ಸೆ  ನೀಡುತ್ತಿಲ್ಲವಾದರೂ ವಿಷಚಿಕಿತ್ಸೆಗೆ ನೀಡುವ ಔಷಧ ಗಿಡ ಸಹಿತ ಈಶ್ವರಬಳ್ಳಿ, ಗರುಡಪಾತಾಳ, ಸೋಮವಾರಬೇರು ಸಾಮಾನ್ಯ ಬಳಕೆಯ ಔಷಧೀಯ ಸಸಿಗಳ ಭಂಡಾರವಿದೆ. ಇದರೊಂದಿಗೆ ಪೂಜಾ ಕಾರ್ಯಕ್ರಮಗಳಿಗೆ ಅಗತ್ಯವಿರುವ ಕದಿರ ಒಂದು ಗಿಡ ಹೊರತುಪಡಿಸಿ ಉಳಿದೆಲ್ಲ ಶಮಿ, ಪಾಲಶ, ಅಶ್ವತ್ಥ, ಬಿಲ್ವಪತ್ರೆ, ಉತ್ತರಣೆ, ದುರ್ವೆ, ದರ್ಬೆ ಸಹಿತ ಎಲ್ಲ ಬಗೆಯ ಸೊತ್ತುಗಳಿವೆ. 

ಬೆಳೆದು ನಿಂತಿದೆ ಪಚ್ಚೆ ಪೈರು
ಜೂನ್‌ 12ರಂದು ಭತ್ತ ಬಿತ್ತನೆ ಕೈಗೊಂಡಿದ್ದು, 20 ದಿನಗಳ ಬಳಿಕ ನಾಟಿಯಾಗಿದೆ. ಸುಮಾ ತಳಿಗೆ ಸರಿಯಾಗಿ 4 ತಿಂಗಳು ಅವಶ್ಯ. ರಾಜಕಯಮೆ ತಳಿ 3 ತಿಂಗಳಲ್ಲಿ ಕಟಾವಿಗೆ ಬರುತ್ತಿದೆ. ಹೀಗಾಗಿ ಮುಂದಿನ ತಿಂಗಳು ಭತ್ತ ಮನೆ ಹೊಸಿಲು ತಲುಪುತ್ತದೆ. ಇದರ ತೆನೆಯ ಹೂವಿನ ಸುವಾಸನೆ ಹೊಲದ ಪರಿಸರದಲ್ಲಿ ಬೀರುತ್ತಿದೆ.

ತರಕಾರಿ ತೋಟ
ದಿನಬಳಕೆಗೆ ಅಗತ್ಯ ತರಕಾರಿಗಳನ್ನು ಮನೆಯ ಹಿತ್ತಿ¤ಲಲ್ಲಿ ಬೆಳೆಯುತ್ತಿದ್ದಾರೆ. ಕೊಟ್ಟಿಗೆ ಗೊಬ್ಬರ ಹೇರಳವಾಗಿರುವು ದರಿಂದ ತರಕಾರಿ ಮಾಡುವುದಕ್ಕೇನೂ ಕೊರತೆಯಿಲ್ಲ. ಹೀಗಾಗಿ ಅವರೆ, ಪಡುವಲ, ಬೆಂಡೆ, ತೊಂಡೆ, ಅಲಸಂಡೆ ಹೀಗೆ ಹತ್ತಾರು ಬಗೆಯ ತರಕಾರಿಗಳು ನಳನಳಿಸುತ್ತಿದೆ.

ಹಳ್ಳಿಯ ವಾತಾವರಣ ಚೆನ್ನ. ಪೇಟೆಯಲ್ಲಿ ಕ್ರೇಜ್‌ ಇದೆ. ತಾನು ಬಾಂಬೆ, ಗುಜರಾತ್‌ಗಳಲ್ಲಿ ಕಂಪೆನಿಯೊಂದರಲ್ಲಿ ಮ್ಯಾನೇಜರ್‌ ಆಗಿದ್ದೆ. ಕೃಷಿಯಲ್ಲಿ ಅಷ್ಟೇನೂ ಲಾಭವಿಲ್ಲದಿದ್ದರೂ ಜೀವನವೇ ಖುಷಿ ಕೊಡುತ್ತಿದೆ. ಇಂದು ಅಗತ್ಯ ಆಹಾರ ಬೆಳೆಯಾಗಿರುವ ಭತ್ತವನ್ನು ಸ್ವಲ್ಪವಾದರೂ ಕೃಷಿ ಮಾಡಬೇಕು. ಆದರೆ ಇದಕ್ಕೆ ಕೆಸರು ಮತ್ತು ಅಲರ್ಜಿ ಎಂಬುದರಿಂದ ಯುವಜನತೆ ದೂರವಾಗುತ್ತಿದ್ದಾರೆ. ಆದರೆ ನಮಗೇನೂ ಆಗುವುದಿಲ್ಲ. ಮುಂದೆ ಸಹೋದರರ ನಡುವೆ ಜಮೀನು ಹಂಚಿಹೋದರೂ ಭತ್ತ ಕೃಷಿ ಬಿಡುವುದಿಲ್ಲ. ದೊರೆತ ಜಮೀನಿನಲ್ಲಿ ಕೃಷಿ ಮುಂದುವರಿಸುವೆ.
– ಶುಭಕರ ಪ್ರಭು

– ಭರತ್‌ ಕನ್ನಡ್ಕ

Advertisement

Udayavani is now on Telegram. Click here to join our channel and stay updated with the latest news.

Next