ದೇವನಹಳ್ಳಿ: ಮಳೆ ಇಲ್ಲದೆ ಬರಗಾಲದ ಪರಿಸ್ಥಿತಿ ಎದುರಿಸುತ್ತಿರುವ ರೈತರು ರಾಗಿ ಬೆಳೆದು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಬೆನ್ನಲ್ಲೇ ಬೋರ್‌ವೆಲ್ ಸೇರಿದಂತೆ ಅಲ್ಪ ಜೌಗು ನೀರಿನಲ್ಲೇ ಈಗ, ರೈತರು ಭತ್ತ ಬೆಳೆಯಲು ಮುಂದಾಗಿದ್ದಾರೆ.
ಜಿಲ್ಲೆಯ ಅನ್ನದಾತರು ಈಗಾಗಲೇ ರಾಗಿ ಬಿತ್ತನೆ ಮಾಡಿದ್ದು ಮಳೆಯಿಲ್ಲದೇ ಸೊರಗಿ ಫಸಲು ಕೈ ಕೊಟ್ಟಿದೆ. ರಾಗಿಯ ಬಳಿಕ, ತೊಗರಿ, ಅವರೆ ಮತ್ತಿತರ ಮಳೆಯಾಶ್ರಿತ ಬೆಳೆಗಳು ಆರ್ಥಿಕ ಪರಿಸ್ಥಿತಿ ಸರಿದೂಗಿಸುತ್ತಿದ್ದವು. ಆದರೆ, ಮಳೆ ಇಲ್ಲದೇ, ಈ ಬೆಳೆಗಳೂ ಕೈ ಕೊಡುವ ಹಂತದಲ್ಲಿವೆ.
ಬೆರಳೆಣಿಕೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಭತ್ತವನ್ನು ಬೆಳೆಯುವ ರೈತರು ಇಲ್ಲ. ಹಲವಾರು ದಶಕಗಳ ಕಾಲ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗೆ ಅಂತರ್ಜಲವನ್ನು ನಂಬಿದ್ದ ರೈತರು, ಜಿಲ್ಲೆಯಲ್ಲಿ ಭತ್ತ ಬೆಳೆಯುವುದನ್ನು ಸಂಪೂರ್ಣವಾಗಿ ಕೈ ಬಿಟ್ಟಿದ್ದರು. ಈಗ, ಬೆರಳೆಣಿಕೆ ಅಷ್ಟೇ ರೈತರು ಭತ್ತ ಬೆಳೆಯುತ್ತಿದ್ದಾರೆ. ಈಗಾಗಲೇ ಕೆಲವು ರೈತರು ಕೆರೆ ಪಕ್ಕದ ಜಮೀನುಗಳಲ್ಲಿ ಮತ್ತು ಜೌಗು ಪ್ರದೇಶ ಇರುವ ನೀರಿನಲ್ಲಿಯೇ ಭತ್ತ ನಾಟಿ ಮಾಡಿ ಬೆಳೆಯುತ್ತಿದ್ದಾರೆ. ವಾಡಿಕೆ ಮಳೆಗಿಂತ ಕಡಿಮೆ ಮಳೆ ಬಿದ್ದಿದೆ. ಭತ್ತಕ್ಕೆ ಹೆಚ್ಚಿನ ಪ್ರಾಮುಖ್ಯತೆ ನಮ್ಮ ಜಿಲ್ಲೆಯಲ್ಲಿ ಸಿಗು ಭತ್ತದ ಹೆಕ್ಟೇರ್ ಗಳು ಕುಸಿತವಾಗುತ್ತಿದೆ ಎಂದು ರೈತರು ತಿಳಿಸಿದ್ದಾರೆ.
2022ರಲ್ಲಿ 139 ಹೆಕ್ಟೇರ್, 2023ರಲ್ಲಿ 79 ಹೆಕ್ಟೇರ್: 2021ರಲ್ಲಿ 117 ಹೆಕ್ಟೇರ್‌ನಲ್ಲಿ ಭತ್ತ ನಾಟಿಮಾಡಲಾಗಿತ್ತು.. 2022ರಲ್ಲಿ 139 ಹೆಕ್ಟೇರ್ ಭತ್ತದ ಪ್ರದೇಶವಿತ್ತು. 2023ರಲ್ಲಿ 79- 68 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿದೆ. ಈ ಬಾರಿ 59 ಹೆಕ್ಟೇರ್ ಭತ್ತ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ತಾಲೂಕುಗಳಲ್ಲಿ ಕಡಿಮೆ ಭತ್ತದ ಬೆಳೆಯುತ್ತಿದ್ದು ನೆಲಮಂಗಲ ಮತ್ತು ಹೊಸಕೋಟೆ ತಾಲೂಕುಗಳಲ್ಲಿ ಭತ್ತವನ್ನು ಹೆಚ್ಚು ಬೆಳೆಯುತ್ತಾರೆ. ದೇವನಹಳ್ಳಿ ತಾಲೂಕಿನ ದಿನ್ನೆ ಸೋಲೂರು, ಕೊಯಿರಾ ಇತರೆ ಕಡೆಗಳಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಈ ಬಾರಿ ಹತ್ತಾರು ರೈತರು ಕೆರೆ ನೀರನ್ನು ಅವಲಂಬಿಸಿ ಜೌಗು ನೀರನ್ನು ಬಳಸಿ ಅಲ್ಪಾವಧಿಯ ವಿವಿಧ ತಳಿಯ ಭತ್ತ ಬೆಳೆಯಲು ಮುಂದಾಗಿದ್ದಾರೆ.
ಬಯಲು ಸೀಮೆ ಪ್ರದೇಶವಾಗಿರುವುದರಿಂದ ಯಾವುದೇ ನದಿ ಮೂಲ, ಯಾವುದೇ ನಾಲೆ ಇಲ್ಲದಿದ್ದರೂ ಮಳೆ ಆಶ್ರಿತವಾಗಿಯೇ ಇರುವ ನೀರಿನಲ್ಲಿಯೇ ಕೃಷಿ ಚಟುವಟಿಕೆ ರೈತರು ಮಾಡುತ್ತಿದ್ದಾರೆ. ಮುಂಗಾರು ಮಳೆಯದಿಂದಾಗಿ ಭತ್ತದ ಇಳುವರಿಯೂ ಕುಸಿತಗೊಳ್ಳುತ್ತಿದೆ. ಕಳೆದ ಬಾರಿ ರೈತರು ಹೆಚ್ಚು ಭತ್ತ ಬೆಳೆದಿದ್ದಾರೆ. ಭತ್ತವನ್ನು ಒಕ್ಕಣೆ ಮಾಡುವ ಯಂತ್ರಗಳು ಜಿಲ್ಲೆಯಲ್ಲಿ ಇಲ್ಲ. ಪಕ್ಕದ ಜಿÇÉೆಯ ಚಿಕ್ಕಬಳ್ಳಾಪುರದಲ್ಲಿ ಭತ್ತವನ್ನು ಮಿಷಿನ್ ನೀಡಿ ಮಾಡಿಸಿಕೊಂಡು ಬರುತ್ತಾರೆ. ದಿನ್ನೆ ಸೋಲೂರು ಗ್ರಾಮದ ಕೆರೆಯ ಪಕ್ಕದ 3 ಎಕರೆ ಜಮೀನಿನಲ್ಲಿ ಕೊಯಿರಾ ಗ್ರಾಮದ ರೈತ ಹರೀಶ್ ಕಳೆದ 4 ವರ್ಷಗಳಿಂದ ಭತ್ತ ಬೆಳೆಯುತ್ತಿದ್ದಾರೆ. ಕಳೆದ ಬಾರಿ 120 ಮೂಟೆ ಭತ್ತ ಬೆಳೆದಿದ್ದರು. ಚಿಕ್ಕಬಳ್ಳಾಪುರದಲ್ಲಿ ಭತ್ತವನ್ನು ಮಿಷಿನ್ ನಲ್ಲಿ ಅಕ್ಕಿ ಮಾಡಿಕೊಂಡು ಬಂದಿದ್ದರು. ಕೃಷಿ ಇಲಾಖೆ ಕೇವಲ ಬಿತ್ತನೆ ಬೀಜ ನೀಡುತ್ತಾರೆ. ಯಾವುದೇ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಮಳೆ ಇಲ್ಲದೆ ಬರಗಾಲದ ಸ್ಥಿತಿ ಅನುಭವಿಸುತ್ತಿದ್ದೇವೆ. ಬೋರ್ ವೆಲ್ ನೀರನ್ನು ಬಳಸಿ ಭತ್ತ ಬೆಳೆದಿದ್ದೇವೆ. ಕಳೆದ ವರ್ಷ ಉತ್ತಮ ಮಳೆಯಾಗಿತ್ತು. ಉತ್ತಮ ಭತ್ತದ ಇಳುವರಿ ಬಂದಿತ್ತು. ಈ ಬಾರಿ ಭತ್ತ ಇಳುವರಿ ಕುಸಿತ ಕಾಣುವ ಸಂಭವವಿದೆ.
● ಕೊಯಿರಾ ಹರೀಶ್, ಭತ್ತ ಬೆಳೆದ ರೈತ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾಗಿ ಪ್ರಮುಖ ಬೆಳೆ. ಕೃಷಿ ಇಲಾಖೆಯಿಂದ ಭತ್ತದ ಬಿತ್ತನೆ ಬೀಜ ನೀಡುತ್ತೇವೆ. ಈ ಭಾಗದಲ್ಲಿ ನೀರು ಇಲ್ಲದಿರುವುದರಿಂದ ಭತ್ತ ಬೆಳೆಯುವವರ ಸಂಖ್ಯೆಯೂ ಕಡಿಮೆ ಇದೆ. ಜಿಲ್ಲೆಯಲ್ಲಿ ಈ ಬಾರಿ 79.68 ಹೆಕ್ಟೇರ್‌ನಲ್ಲಿ ಮಾತ್ರ ಭತ್ತ ಬೆಳೆಯಲಾಗುತ್ತಿದೆ.
● ಡಾ.ಲಲಿತಾರೆಡ್ಡಿ, ಕೃಷಿ ಜಂಟಿ ನಿರ್ದೇಶಕಿ
-ಎಸ್.ಮಹೇಶ್