Advertisement

ಭತ್ತದ ಬೆಳೆಗೆ ಕಳೆ ಬಾಧೆ​​​​​​​

12:30 AM Mar 16, 2019 | |

ಕುಂದಾಪುರ: ಭತ್ತ ಬಿತ್ತಿ ರಾಗಿ ತೆಗೆದರು ಎಂಬುದು ಇಲ್ಲಿನ ಹೊಸ ಗಾದೆಯಾಗುತ್ತಿದೆ!. ಕಾರಣ, ತಾಲೂಕಿನ ವಿವಿಧೆಡೆ ಸುಗ್ಗಿ ಭತ್ತದ ಬೆಳೆ ಗದ್ದೆಯಲ್ಲಿ ಕಟಾವಿನ ವೇಳೆ ರಾಗಿ ಚೆಂಡಿನಂತಹ ಕೋಳಿ ಆಹಾರದ ಮಾದರಿಯ ವಿಚಿತ್ರ ಕಳೆಗಿಡ ಕಾಣಿಸಿಕೊಂಡಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂದು ರೈತರು ಪರಿತಪಿಸುತ್ತಿದ್ದಾರೆ. ನೂರಾರು ಎಕರೆ ಗದ್ದೆಯಲ್ಲಿ ಒಂದೇ ನಮೂನೆಯ ಕಳೆಗಿಡ ಇದ್ದು ಯಾವುದೇ ಇಲಾಖೆಗಳಿಂದ ಇದಕ್ಕೆ ಇನ್ನೂ ಪರಿಹಾರ ದೊರೆತಿಲ್ಲ. ಭತ್ತದ ಗದ್ದೆಯೋ ರಾಗಿ ಗದ್ದೆಯೋ ಎಂದು ಅನುಮಾನ ಬರುವಂತೆ ಕಳೆಗಿಡ ತುಂಬಿದ ದೃಶ್ಯ ಕಾಣುವಾಗ ರೈತನ ಶ್ರಮದ ದುಡಿಮೆ ವ್ಯರ್ಥವಾದುದಕ್ಕಾಗಿ ಕರುಳು ಚುರುಕ್‌ ಎನ್ನುತ್ತದೆ. 

Advertisement

ಎರಡು ವರ್ಷಗಳಿಂದ… 
ಎರಡು ವರ್ಷಗಳ ಹಿಂದೆ ಈ ಭಾಗದಲ್ಲೆಲ್ಲಾ ಆಫ್ರಿಕಾದ ಬಸವನಹುಳದ ಬಾಧೆ ಕಾಣಿಸಿತ್ತು. ಅದನ್ನು  ಹೇಗೋ ಏನೋ ಎಂದು ಸುಧಾರಿಸಿ ಏಗುವಷ್ಟರಲ್ಲಿ ಕಳೆ ಸಮಸ್ಯೆ ಕಾಣಿಸಿದೆ. ಕಳೆ ಗಿಡ ರಾಗಿ ಗಿಡದ ಮಾದರಿಯಲ್ಲಿ ತೆನೆಹೊತ್ತಂತೆ ಇದೆ. ಕಳೆದ ವರ್ಷವೂ ಸಮಸ್ಯೆಯಾಗಿತ್ತು, ಪರಿಹಾರ ದೊರೆತಿರಲಿಲ್ಲ. ಈ ವರ್ಷ ಪ್ರಮಾಣ ಹೆಚ್ಚಾಗಿದೆ. ಭತ್ತದ ಗದ್ದೆಯಲ್ಲಿ ಭತ್ತಕ್ಕಿಂತ ಹೆಚ್ಚು ಈ ಕಳೆಯ ದರ್ಬಾರೇ ಆಗಿದೆ. ಇದರಿಂದಾಗಿ ಸುಗ್ಗಿ ಬೆಳೆಯ ಮೇಲೆ ಪರಿಣಾಮ ಆಗಿದ್ದು ಕಟಾವಿಗೂ ಸಮಸ್ಯೆಯಾಗಿದೆ. ಖಾತಿ ಬೆಳೆಗೂ ತೊಂದರೆ ಮುಂದುವರಿಯಲಿದೆ.

ಕ್ಷೀಣ
ಸ್ಥಳೀಯವಾಗಿ ಹೆಚ್ಚು ಬಳಸುವ ಎಂಒ4 ಬಿತ್ತನೆ ಬೀಜದ ಸ್ವಲ್ಪ ಪ್ರಮಾಣದ ಕೊರತೆಯ ಹೊರತಾಗಿ ಇಲಾಖೆಯ ಎಲ್ಲ ಪ್ರೋತ್ಸಾಹಗಳ ಮಧ್ಯೆಯೂ ಭತ್ತ ಬೆಳೆಯುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಈ ಮಧ್ಯೆಯೂ ಬೆಳೆಸಿದ್ದು ಪಾಲಿಗೆ ದೊರೆಯದಂತಹ ವಾತಾವರಣ ನಿರ್ಮಾಣವಾದರೆ ಕಷ್ಟ ಎಂದು ರೈತರು ಬೇಸರಿಂದ ನುಡಿಯುತ್ತಿದ್ದಾರೆ. 

ಸ್ಪಂದನ ಇಲ್ಲ
ಸಮಸ್ಯೆ ಕುರಿತು ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದವರ ಗಮನಕ್ಕೆ  ತಂದರೂ ಯಾವುದೇ ಪರಿಹಾರ ದೊರಕಿಲ್ಲ. ಅವರು ಕನಿಷ್ಠ ಬಂದು ಕೂಡ ನೋಡಿಲ್ಲ ಎನ್ನುತ್ತಾರೆ ಸಂತ್ರಸ್ತ ರೈತರು. ಕೃಷಿ ಇಲಾಖೆಯವರಿಗೆ ಮಾಹಿತಿ ನೀಡಲಾಗಿದ್ದು ಅವರ ಆಗಮನಕ್ಕಾಗಿ ಕಾಯುತ್ತಿದ್ದಾರೆ. 

ಎಲ್ಲೆಲ್ಲಿ
ಹಾಲಾಡಿ, ಶಂಕರ ನಾರಾಯಣ, ವಂಡ್ಸೆ ಪರಿಸರದ ಇಪ್ಪತ್ತಕ್ಕೂ ಅಧಿಕ ಮಂದಿ ರೈತರ ನೂರಾರು ಎಕರೆ ಗದ್ದೆಯಲ್ಲಿ ಈ ಸಮಸ್ಯೆ ಕಾಣಿಸಿ ಕೊಂಡಿದೆ.

Advertisement

ಭತ್ತದ ಇಳುವರಿ
ಕೃಷಿ ಇಲಾಖೆ ಮಾಹಿತಿ ಪ್ರಕಾರ, ಮುಂಗಾರಿನಲ್ಲಿ ಉಡುಪಿಯಲ್ಲಿ 15,412, ಕುಂದಾಪುರದಲ್ಲಿ 13,728, ಕಾರ್ಕಳದಲ್ಲಿ 6,347 ಎಂದು ಒಟ್ಟು 35,487ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿದೆ. 44,000 ಹೆಕ್ಟೇರ್‌ನಲ್ಲಿ ಬೆಳೆಯುವ ಗುರಿ ಹೊಂದಲಾಗಿತ್ತು. ಹಿಂಗಾರಿನಲ್ಲಿ ಉಡುಪಿಯಲ್ಲಿ 663, ಕುಂದಾಪುರದಲ್ಲಿ 1,296, ಕಾರ್ಕಳದಲ್ಲಿ 1,746 ಎಂದು ಒಟ್ಟು 3,705 ಹೆಕ್ಟೇರ್‌ನಲ್ಲಿ ಬೆಳೆಯಲಾಗಿದೆ. 6 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯುವ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿತ್ತು.

ಗಮನಕ್ಕೆ ಬಂದಿದೆ
ಕುಂದಾಪುರ ತಾಲೂಕಿನ ವಿವಿಧೆಡೆ ಭತ್ತದ ಗದ್ದೆಗಳಲ್ಲಿ ರಾಗಿಗಿಡದ ಮಾದರಿಯ ಕಳೆ ಇರುವುದು ಗಮನಕ್ಕೆ ಬಂದಿದೆ. ಇಲ್ಲಿಗೆ ಇಲಾಖೆಯ ಸಹಾಯಕ ನಿರ್ದೇಶಕರನ್ನು ಕಳುಹಿಸಿ ಸಮಸ್ಯೆಯ ಕುರಿತು ವರದಿ ಕಳುಹಿಸಲು ಸೂಚಿಸಿದ್ದೇನೆ. ಒಂದೆರಡು ದಿನಗಳಲ್ಲಿ ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಲಿದ್ದಾರೆ. ಮೊದಲ ಬೆಳೆ ಮುಂಗಾರು ಅನಂತರ ಗದ್ದೆಯಲ್ಲಿ ತೇವಾಂಶ ಇರುವ ಕಾರಣ ಕಳೆ ಗಿಡ ಬರುವುದು ಸಹಜ. ಆದರೆ ಇಲ್ಲಿ ಸುಗ್ಗಿ, ಖಾತಿ ಬೆಳೆಗೆ ತೊಂದರೆಯಾಗುವಷ್ಟು ಹೊಸ ವಿಧದ ಕಳೆ ಬಂದಿದ್ದು ಸಮಸ್ಯೆ ನಿವಾರಣೆಗೆ ಸ್ಪಂದಿಸುತ್ತೇವೆ.
– ಕೆಂಪೇಗೌಡ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಉಡುಪಿ ಜಿಲ್ಲೆ

ಕೆವಿಕೆ ಸ್ಪಂದನೆ ಇಲ್ಲ
ಕಳೆದ ವರ್ಷದಿಂದ ಬ್ರಹ್ಮಾವರದ ಕೆವಿಕೆಗೆ ಹೇಳುತ್ತಿದ್ದೇವೆ. ಯಾವುದೇ ಸ್ಪಂದನೆ ದೊರೆತಿಲ್ಲ. ಗ್ರಾಮಸಭೆಯಲ್ಲೂ ಮಾಹಿತಿ ನೀಡಿಲ್ಲ. ಕೃಷಿ ಇಲಾಖೆ ಸ್ಪಂದಿಸಿದೆ. ಆದರೆ ಸಮಸ್ಯೆ ಪರಿಹಾರವಾಗಿಲ್ಲ. 
– ರಾಘವೇಂದ್ರ ಹಾಲಾಡಿ,
ಪ್ರಗತಿಪರ ಕೃಷಿಕ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next