Advertisement

Mangaluru: ಪೂರ್ವ ಮುಂಗಾರು ನಿರೀಕ್ಷೆಯಲ್ಲಿ ಭತ್ತದ ಕೃಷಿ!

08:57 AM Apr 13, 2024 | Team Udayavani |

ಮಂಗಳೂರು: ಕರಾವಳಿಯಲ್ಲಿ “ಬೇಸಗೆ ಮಳೆ’ ಕ್ರಮದಂತೆ ಸುರಿಯದಿದ್ದರೆ ಈ ಬಾರಿಯೂ ಭತ್ತದ ಬೇಸಾಯಕ್ಕೆ ಹೊಡೆತ ಬೀಳುವ ಎಲ್ಲ ಸಾಧ್ಯತೆಗಳಿವೆ.

Advertisement

ಮಾರ್ಚ್‌ ಆರಂಭದಿಂದಲೇ ಕರಾವಳಿಯಲ್ಲಿ ಬಿಸಿಲ ಝಳ ಹೆಚ್ಚಾಗಿದ್ದು, ಗ್ರಾಮಾಂತರದಲ್ಲೂ ಕಂಗೆಡುವ ಪರಿಸ್ಥಿತಿ ಇದೆ. ಕೆರೆ, ಬಾವಿ, ಬೋರ್‌ವೆಲ್‌ಗ‌ಳಲ್ಲಿ ನೀರು ತಳ ತಲುಪುತ್ತಿದೆ. ಇರುವ ಬೆಳೆಗಳನ್ನು ಉಳಿಸಿಕೊಳ್ಳುವುದು ಹೇಗೆಂಬ ಆತಂಕ ಒಂದೆಡೆಯಾದರೆ, ಮುಂದಿನ ಹಂತದ ಭತ್ತದ ಬೆಳೆಗೆ ತಯಾರಿ ಹೇಗೆಂಬ ಚಿಂತೆ ಇನ್ನೊಂದೆಡೆ.

ಕರಾವಳಿಯಲ್ಲಿ ಸಾಮಾನ್ಯವಾಗಿ ಎಪ್ರಿಲ್‌-ಮೇಯಲ್ಲಿ ಸುರಿಯುವ ಬೇಸಗೆ ಅಥವಾ ಪೂರ್ವ ಮುಂಗಾರು ಮಳೆ ಬೇಸಾಯದ ಪೂರ್ವಭಾವಿ ಚಟುವಟಿಕೆಗೆ ನೆರವಾಗುತ್ತದೆ. ಗೊಬ್ಬರ ಹಾಕಿ ಗದ್ದೆಯನ್ನು ಉತ್ತು ಹದ ಮಾಡುವ ಕಾರ್ಯ ಇದೇ ವೇಳೆ ನಡೆಯುತ್ತದೆ. ಮುಂಗಾರು ಆರಂಭವಾಗು ತ್ತಿದ್ದಂತೆ ಮುಂದಿನ ಕೆಲಸಗಳನ್ನು ಆರಂಭಿಸುತ್ತಾರೆ. ಬೀಜ ಬಿತ್ತಿ ನೇಜಿಯಾಗಲು 20-25 ದಿನಗಳು ಬೇಕಾಗುವುದರಿಂದ ಬೇಸಗೆ/ ಪೂರ್ವಮುಂಗಾರು ಮಳೆ ಉತ್ತಮವಾಗಿದ್ದರೆ ಆಗಲೇ ಬಿತ್ತನೆ ಮಾಡಿ ಮುಂಗಾರು ವೇಳೆಗೆ ನೇಜಿ ಸಿದ್ಧವಾಗಿರುತ್ತದೆ. ಮಳೆಗಾಲ ಆರಂಭವಾದ ಕೂಡಲೇ ಯಂತ್ರದ ಮೂಲಕ ನಾಟಿ ಮಾಡಬಹುದಾಗಿದೆ.

ಕಳೆದ ವರ್ಷ ಕೈಕೊಟ್ಟಿದ್ದ ಮಳೆ:

ಕಳೆದ ವರ್ಷ ಬೇಸಗೆ ಮಳೆ ಕೈಕೊಟ್ಟಿತ್ತು. ಜೂ. 10ರಂದು ಮುಂಗಾರು ಪ್ರವೇಶ ಮಾಡಿದ್ದರೂ ಆರಂಭದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸುರಿ ಯದ ಕಾರಣ ಕೃಷಿ ಚಟುವಟಿಕೆ ಆರಂಭಿಸು ವಾಗ ಜೂನ್‌ ಅಂತ್ಯ ವಾಗಿತ್ತು. ಬಳಿಕ ಅತಿ ವೃಷ್ಟಿಯಾದ ಕಾರಣ ಕೆಲವು ರೈತರು ನೆಟ್ಟಿದ್ದ ನೇಜಿ ನೀರು ಪಾಲಾಯಿತು. ಮತ್ತೆ ಬಿತ್ತನೆ ಮಾಡಿ ಕೃಷಿ ಮಾಡಿದವರೂ ಇದ್ದಾರೆ. ಆಗಸ್ಟ್‌ 15ರ ವರೆಗೂ ಭತ್ತ ಬೇಸಾಯಕ್ಕೆ ಅವಕಾಶ ಇರುತ್ತದೆಯಾದರೂ ಅನಂತರ ನಾಟಿ ಮಾಡಿದರೆ ಫಸಲು ವಿಳಂಬವಾಗುತ್ತದೆ.

Advertisement

ಕೊಣಾಜೆಯ ಕೃಷಿಕ ಶಿವಾನಂದ “ಉದಯವಾಣಿ’ ಜತೆ ಮಾತನಾಡಿ, ಪ್ರತೀ ವರ್ಷ ಮೇ ಮೂರನೇ ವಾರದಿಂದ ಭತ್ತ ಬೆಳೆಗೆ ಪೂರ್ವಭಾವಿ ಚಟುವಟಿಕೆ ಆರಂಭಿಸುತ್ತೇವೆ. ಆಗ ಮಳೆ ಬಂದರೆ ಗದ್ದೆ ಹದಮಾಡಲು ಅನುಕೂಲವಾಗುತ್ತದೆ. ಆದರೆ ಕಳೆದ ವರ್ಷ ಬೇಸಗೆ ಮಳೆ ಸ್ವಲ್ಪ ಮಟ್ಟಿಗೆ ಸುರಿದಿತ್ತು. ಆದರೆ ಮುಂಗಾರು ತಡವಾದ್ದರಿಂದ ಆರಂಭಿಕ ಸಿದ್ಧತೆ ಮಾಡಿದ್ದರೂ ನಾಟಿ ಮಾಡಿದ್ದು ಜುಲೈಯಲ್ಲಿ ಎಂದರು.

ಮಳೆ ನಿರೀಕ್ಷೆಯಲ್ಲಿ…

ಕಳೆದ ಬಾರಿ ತಡವಾಗಿದ್ದರಿಂದ ಈ ಬಾರಿ ನಿರೀಕ್ಷಿತ ಅವಧಿಯಲ್ಲೇ ಮಳೆ ಆರಂಭವಾಗುವ ಸಾಧ್ಯತೆಯಿದೆ ಎಂಬ ಆಶಾಭಾವವನ್ನು ರೈತರು ಹೊಂದಿದ್ದಾರೆ. ಬೇಗ ಮಳೆ ಸರಿಯ ದಿದ್ದರೆ ಬೇಸಾಯ / ಕಟಾವು ತಡವಾಗುತ್ತದೆ. ಎರಡು ಬೆಳೆ ತೆಗೆಯುವವರಿಗೆ ಇದರಿಂದ ಸಮಸ್ಯೆಯಾಗುತ್ತದೆ. ಕಟಾವಿನ ವೇಳೆಯಲ್ಲಿ ಹಿಂಗಾರು ಮಳೆ ಸುರಿದು ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎನ್ನುವಂತಾಗುತ್ತದೆ.

ಕರಾವಳಿಯಲ್ಲಿ ಈ ಬಾರಿ ಬಿಸಿಲ ಬೇಗೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಮಳೆ ನಿರೀಕ್ಷೆಯೂ ಇದೆ. ಕರಾವಳಿ ಭಾಗದಲ್ಲಿ ಬೇಸಗೆ- ಪೂರ್ವ ಮುಂಗಾರು ಮಳೆ ವಾಡಿಕೆಯಷ್ಟು ಅಥವಾ ವಾಡಿಕೆಗಿಂತ ಕಡಿಮೆ ಸುರಿಯುವ ಸಾಧ್ಯತೆಯಿದೆ. – ಪ್ರಸಾದ್‌ ಎ. ಹವಾಮಾನ ಇಲಾಖೆ ವಿಜ್ಞಾನಿ

ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next