Advertisement

Nandini Ragi Ambali: ಮಾರುಕಟ್ಟೆಗೆ ಬಂತು ನಂದಿನಿ ರಾಗಿ ಅಂಬಲಿ: ಬೆಲೆ 10 ರೂ.!

01:17 PM Apr 22, 2024 | Team Udayavani |

ಬೆಂಗಳೂರು: ಸದಾ ಹೊಸ ಪ್ರಯೋಗಗಳನ್ನು ಮಾಡಿಕೊಂಡು ಬರುತ್ತಿರುವ ಕರ್ನಾಟಕ ಹಾಲು ಮಹಾ ಒಕ್ಕೂಟ (ಕೆಎಂಎಫ್), ಇದೀಗ ಮಧುಮೇಹಿಗಳು ಸೇರಿದಂತೆ ಎಲ್ಲರ ಆರೋಗ್ಯ ಹಿತದೃಷ್ಟಿಯಿಂದ ಅತಿಹೆಚ್ಚು ನಾರಿನಾಂಶದಿಂದ ಕೂಡಿರುವ ಕ್ಯಾಲ್ಸಿಯಂಯುಕ್ತ “ರಾಗಿ ಅಂಬಲಿ’ಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

Advertisement

ಕೆಎಂಎಫ್ ನ ಭಾಗವಾಗಿರುವ ಮೈಸೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತವು(ಮೈಮುಲ್‌) ಕಳೆದ 15 ದಿನಗಳ ಹಿಂದೆಯಷ್ಟೇ 200 ಎಂಎಲ್‌ ಹೊಂದಿರುವ ರಾಗಿ ಅಂಬಲಿ ಪ್ಯಾಕ್‌ಗಳನ್ನು ಪ್ರಾಯೋಗಿಕವಾಗಿ ಮೈಸೂರು ಭಾಗದ ಮಾರುಕಟ್ಟೆಗೆ ಪರಿಚಯಿಸಿದ್ದು, ಜನರಿಂದ ಉತ್ತಮ ಸ್ಪಂದನೆಯೂ ದೊರೆತಿದೆ. ಇದೀಗ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ವಿಸ್ತರಿಸಲು ಆಸಕ್ತಿ ವಹಿಸಿದೆ.

ಸಾಮಾನ್ಯವಾಗಿ ರಾಗಿ ಅಂಬಲಿ ಎಲ್ಲರಿಗೂ ಚಿರಪರಿಚಿತ. ಆರೋಗ್ಯ ದೃಷ್ಟಿಯಿಂದ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಸೇವಿಸಬಹುದಾದ ಪದಾರ್ಥ ಇದಾಗಿದೆ. ಇತ್ತೀಚಿನ ದಿನಗಳಲ್ಲಿ ಮಧುಮೇಹಿಗಳು ರಾಗಿ ಪದಾರ್ಥಗಳಾದ ಮುದ್ದೆ, ರೊಟ್ಟಿ ಹಾಗೂ ರಾಗಿ ಗಂಜಿಯನ್ನು ಹೆಚ್ಚಾಗಿ ಬಳಸುತ್ತಾರೆ. ಉಳಿದಂತೆ ಮಕ್ಕಳಿಗೆ ರಾಗಿಯನ್ನು ಮಾಲ್ಟ್ ರೂಪದಲ್ಲಿ ತಿನ್ನಿಸಲಾಗುತ್ತದೆ. ಈ ಬಾರಿಯ ವಿಪರೀತ ಬಿಸಿಲಿಗೆ ಜನರು ಬೇಸತ್ತಿದ್ದರು. ದೇಹ ತಂಪೆನಿಸುವ ಹಾಗೂ ಉತ್ತಮ ಆರೋಗ್ಯಕ್ಕಾಗಿ ಫೈಬರ್‌ ಹಾಗೂ ಕ್ಯಾಲ್ಸಿಯಂ ಅಂಶ ಹೊಂದಿರುವ ರಾಗಿ ಅಂಬಲಿಯನ್ನು ಮಾರುಕಟ್ಟೆಗೆ ತರಲಾಗಿದೆ ಎಂದು ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್‌.ವಿಜಯ್‌ಕುಮಾರ್‌ ತಿಳಿಸುತ್ತಾರೆ.

ಕೈಗೆಟಕುವ ದರದಲ್ಲಿ ನಂದಿನಿ ರಾಗಿ ಅಂಬಲಿ: ಮೈಸೂರು ಹಾಲು ಉತ್ಪಾದಕರ ಒಕ್ಕೂಟವು ಸದ್ಯ ಸ್ಥಳೀಯವಾಗಿ ಬೆಳೆದ ರಾಗಿಯನ್ನು ಖರೀದಿಸಿ, ಹುರಿದು, ರಾಗಿ ಹಿಟ್ಟನ್ನು ತಯಾರಿಸಲಾಗುತ್ತಿದೆ. ಹುರಿದ ರಾಗಿ ಹಿಟ್ಟಿಗೆ ಮಜ್ಜಿಗೆ ಹಾಗೂ ಜೀರಿಗೆಯನ್ನು ಸೇರಿಸಿ ದಿನಕ್ಕೆ 10 ಸಾವಿರ ಲೀಟರ್‌ನಷ್ಟು ರಾಗಿ ಅಂಬಲಿಯನ್ನು ತಯಾರಿಸಲಾಗುತ್ತಿದೆ. 200 ಎಂಎಲ್‌ನ ಒಂದು ಪ್ಯಾಕೇಟ್‌ಗೆ 10 ರೂ. ನಂತೆ ದರ ನಿಗದಿ ಮಾಡಲಾಗಿದೆ. ಈ ರಾಗಿ ಅಂಬಲಿಯನ್ನು ರೆಫ್ರಿಜರೇಟರ್‌ನಲ್ಲಿ ಮೂರರಿಂದ ನಾಲ್ಕು ದಿನಗಳವರೆಗೆ ಶೇಖರಿಸಿ ಇಡಬಹುದು. ಮೈಸೂರು ಭಾಗದ ಎಲ್ಲಾ ನಂದಿನಿ ಮಳಿಗೆಗಳಲ್ಲಿ ಲಭ್ಯ ಇದೆ ಎಂದು ಮಾಹಿತಿ ತಿಳಿಸಿದರು.

ಇಷ್ಟೇ ಅಲ್ಲದೇ, ಮತ್ತೂಂದು ನೂತನ ಉತ್ಪನ್ನವಾಗಿರುವ ಪ್ರೊಬಯಾಟಿಕ್‌ ಮಜ್ಜಿಗೆಯನ್ನು ಕೆಎಂಎಫ್ ಮಾರುಕಟ್ಟೆಗೆ ಪರಿಚಯಿಸಿದೆ. ಈ ಪ್ರೊಬಯಾಟಿಕ್‌ ಮಜ್ಜಿಗೆಯು ಔಷಧೀಯ ಗುಣ ಹೊಂದಿರುವ ಕೆಲ ಉತ್ಪನ್ನಗಳು ಮತ್ತು ಮಜ್ಜಿಗೆ ಬಳಸಿ ತಯಾರಿಸಲಾಗಿದೆ. ಜೀರ್ಣಕ್ರಿಯೆಗೆ ಸಹಕಾರಿ ಜತೆಗೆ ಕರುಳಿನ ಆರೋಗ್ಯವನ್ನು ಹೆಚ್ಚಿಸಿ, ಸೋಂಕನ್ನು ತಡೆಗಟ್ಟುತ್ತದೆ. ಇದರ ಬೆಲೆಯೂ 200 ಎಂಎಲ್‌ನ ಪ್ಯಾಕೇಟ್‌ ಅನ್ನು 10 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಮೈಸೂರಿನಲ್ಲಿ ಯಶಸ್ವಿ ಪ್ರಯೋಗ ಆಗಿದ್ದು, ಅದನ್ನು ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳಿಗೆ ವಿಸ್ತರಿಸುವ ಚಿಂತನೆ ನಡೆದಿದೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.

Advertisement

ಏಪ್ರಿಲ್‌ ಮೊದಲ ವಾರದಲ್ಲಿ ರಾಗಿ ಅಂಬಲಿಯನ್ನು ಪ್ರಾಯೋಗಿಕವಾಗಿ ಮಾರು ಕಟ್ಟೆಗೆ ಪರಿಚಯಿಸಲಾಗಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ದಿನಕ್ಕೆ 10 ಸಾವಿರ ಲೀಟರ್‌ನಷ್ಟು ರಾಗಿ ಅಂಬಲಿಯನ್ನು ತಯಾರಿಸಲಾಗುತ್ತಿದ್ದು, ಮೈಸೂರು ಭಾಗದಲ್ಲಿ ನಿತ್ಯ 5 ಸಾವಿರ ಪ್ಯಾಕೇಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಇನ್ನೂ ಹೆಚ್ಚಿನ ಬೇಡಿಕೆ ಬಂದರೆ, ಉತ್ಪಾದಿಸಲು ನಾವು ಸಿದ್ಧರಿದ್ದೇವೆ. –ಬಿ.ಎನ್‌.ವಿಜಯ್‌ಕುಮಾರ್‌, ವ್ಯವಸ್ಥಾಪಕ ನಿರ್ದೇಶಕ, ಮೈಸೂರು ಜಿಲ್ಲಾ ಹಾಲು ಒಕ್ಕೂಟ

– ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next