Advertisement

ಭತ್ತ ಕೃಷಿ ; ಬತ್ತದ ಉತ್ಸಾಹಕ್ಕೆ ಬೇಕು ಪ್ರೋತ್ಸಾಹ

03:45 AM Jul 10, 2017 | |

ಸಾಂಪ್ರದಾಯಿಕ ಆಹಾರ ಕೃಷಿಯೊಂದಿಗೆ ಬೆಳೆದು ಬಂದ ಮಲೆನಾಡು ಜನರ ಬದುಕು ಇಂದು ವಿವಿಧ ಕಾರಣಗಳಿಂದಾಗಿ ಆಹಾರದ ಬಟ್ಟಲಿನಿಂದ ವಾಣಿಜ್ಯ ಬಾಣಲೆಗೆ ಬಿದ್ದಿದೆ. ಆರ್ಥಿಕ ಮೂಲದ ಉದ್ದೇಶದಿಂದ ವಾಣಿಜ್ಯ ಬೆಳೆಯ ಮೇಲಿನ ಆಸಕ್ತಿ ಅನಿವಾರ್ಯವಾದರೂ ಆಹಾರ ವಸ್ತುಗಳ ಬೆಲೆ ಏರಿಕೆಯಿಂದ ಆ ಕೃಷಿಯನ್ನು ಉಳಿಸಿಕೊಳ್ಳುವುದೂ ಅನಿವಾರ್ಯವಾಗಿದೆ.

Advertisement

ಅಲ್ಲಲ್ಲಿ ಉಳಿದುಕೊಂಡಿರುವ ಸಾಂಪ್ರದಾಯಿಕ ಭತ್ತ ಕೃಷಿಯ ಜತೆಗೆ, ವಾಣಿಜ್ಯ ಬೆಳೆ ಅಡಿಕೆ ಇಲ್ಲಿನ ಜನರ ಜೀವನಕ್ಕೆ ಆಧಾರ. ಇದರ ಜತೆಗೆ ತೆಂಗು, ಕೋಕೋ, ಕಾಳುಮೆಣಸು ಈ ಭಾಗದ ಜನರ ಉಪಬೆಳೆ. ರಬ್ಬರ್‌ ದ್ವಿತೀಯ ಪ್ರಮುಖ ವಾಣಿಜ್ಯ ಬೆಲೆ. ಶೇ. 60ರಷ್ಟು ಕೃಷಿಕರು ಅಡಿಕೆಯನ್ನೇ ಮುಖ್ಯ ವಾಣಿಜ್ಯ ಬೆಳೆಯನ್ನಾಗಿಸಿಕೊಂಡಿದ್ದಾರೆ.

ಯಾವುದು, ಎಷ್ಟು ?
ಪುತ್ತೂರು ಹಾಗೂ ಸುಳ್ಯ ಉಭಯ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 20,000 ಹೆಕ್ಟೇರ್‌ ಪ್ರದೇಶಗಳಲ್ಲಿ ಮುಖ್ಯ ವಾಣಿಜ್ಯ ಬೆಳೆಯಾದ ಅಡಿಕೆಯನ್ನು ಬೆಳೆಯಲಾಗುತ್ತಿದೆ. ಸುಮಾರು 11,000 ಹೆಕ್ಟೇರ್‌ ಪ್ರದೇಶದಲ್ಲಿ ರಬ್ಬರ್‌ ಬೆಳೆಯಿದೆ. ಸುಮಾರು 6,000 ಹೆಕ್ಟೇರ್‌ ಪ್ರದೇಶಗಳಲ್ಲಿ ತೆಂಗು, ಸುಮಾರು 500 ಹೆಕ್ಟೇರ್‌ ಪ್ರದೇಶಗಳಲ್ಲಿ ಕರಿಮೆಣಸು, ಸುಮಾರು 1,000 ಹೆಕ್ಟೇರ್‌ ಪ್ರದೇಶಗಳಲ್ಲಿ ಕೊಕ್ಕೋ ಬೆಳೆಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ.

ಭತ್ತದ ಪ್ರಮಾಣ ಇಳಿಕೆ
2015- 16 ರ ಸಾಲಿನಲ್ಲಿ ಉಭಯ ತಾಲೂಕುಗಳಲ್ಲಿ ಸುಮಾರು 5,000 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಇತ್ತೀಚೆಗೆ ಭತ್ತ ಕೃಷಿಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಪ್ರಸ್ತುತ ಹಿಂಗಾರಿನಲ್ಲಿ ಸುಮಾರು 4,000 ಹೆಕ್ಟೇರ್‌ ಪ್ರದೇಶಕ್ಕೂ ಕಡಿಮೆ ಪ್ರಮಾಣಕ್ಕೆ ಇಳಿದಿದೆ.

ಬೆಲೆ, ಬೆಂಬಲ ಇಲ್ಲ
ಪುತ್ತೂರು ಹಾಗೂ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ವಾಣಿಜ್ಯ ಕೃಷಿಗೆ ಸಂಬಂಧಪಟ್ಟಂತೆ ಹೊಸ ಬೆಳೆಗಳು ಕಾಣಿಸಿಕೊಳ್ಳದಿದ್ದರೂ ಉತ್ಪಾದನೆಯ ಪ್ರಮಾಣದಲ್ಲಿ ಬದಲಾವಣೆಗಳಾಗಿವೆ. ದೈವಗಳಿಗೆ ಬಿಟ್ಟ ಗದ್ದೆಗಳು, ಮನೆಯಲ್ಲಿ ಹೆಚ್ಚು ಸದಸ್ಯರಿರುವ ಕೃಷಿ ಕುಟುಂಬಗಳನ್ನು ಹೊರತಾಗಿ ಈ ತಾಲೂಕಿನಲ್ಲಿ ಯಾರೂ ಭತ್ತದ ಕೃಷಿ ಮಾಡುತ್ತಿಲ್ಲ. ಭತ್ತಕ್ಕೆ ಬೆಲೆಯಿಲ್ಲ ಮತ್ತು ಈ ಕೃಷಿಗೆ ಬೆಂಬಲವಿಲ್ಲ ಎಂಬ ಅರಿವು ಉಂಟಾದಾಗ ತಾಲೂಕಿನಲ್ಲಿ ಕೃಷಿ ಪಲ್ಲಟ ಉಂಟಾಗಿದೆ. ತಾಲೂಕಿನಲ್ಲಿ ರಬ್ಬರ್‌ ಬೆಲೆ, ಅಡಿಕೆ ಬೆಳೆಯ ಪ್ರಮಾಣದಲ್ಲಿ ವಿಸ್ತರಣೆಯಾಗಿದೆ.

Advertisement

ಪ್ರಭಾವ ಕಡಿಮೆ
ನೆರೆಯ ರಾಜ್ಯ ಕೇರಳದ ರಬ್ಬರ್‌ ಕೃಷಿ, ಪುತ್ತೂರು ಹಾಗೂ ಸುಳ್ಯ ತಾಲೂಕಿನ ರೈತರ ಮೇಲೆ ಪ್ರಭಾವ ಬೀರಿ ಇಲ್ಲಿಗೂ ಲಗ್ಗೆಯಿಟ್ಟಿದೆ. ನೇಂದ್ರ ಬಾಳೆ ಕೃಷಿ, ಅನನಾಸು ಸ್ವಲ್ಪ ಮಟ್ಟಿಗೆ ಪ್ರಭಾವ ಬೀರಿದೆಯಾದರೂ ಇದನ್ನು ಮುಂದುವರಿಸಿದವರು ವಿರಳ. ಇನ್ನು ಏಲಕ್ಕಿ, ಶುಂಠಿಯನ್ನು ತೋಟದ ಮಧ್ಯೆ ಮನೆ ಬಳಕೆಯ ಪ್ರಮಾಣಕ್ಕೆ ಮಾತ್ರ ಬೆಳೆಯಲಾಗುತ್ತದೆ.

ಮಾಹಿತಿಯ ಕೊರತೆ
ಭತ್ತದ ಬೆಳೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯ ಮೂಲಕ ಸೌಲಭ್ಯವನ್ನು ನೀಡಲಾಗುತ್ತಿದೆ. ಕೃಷಿ ಅಭಿಯಾನದ ಸಂದರ್ಭದಲ್ಲಿ ಭತ್ತ ಬೆಳೆಯುವಂತೆ ಉತ್ತೇಜನ ನೀಡಲಾಗುತ್ತಿದೆ. ಬಿತ್ತನೆಗೆ ವಿವಿಧ ತಳಿಗಳ ಭತ್ತ, ಗದ್ದೆ ಉಳುಮೆ, ಕೊಯಿಲಿನ ಯಂತ್ರಗಳು ಲಭ್ಯವಿವೆ. ಆದರೆ ಇವು ಕೃಷಿಕರನ್ನು ಸೂಕ್ತ ರೀತಿಯಲ್ಲಿ ತಲುಪುತ್ತಿಲ್ಲ. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯ ಪ್ರಯತ್ನ ಅತಿ ಅಗತ್ಯವಾಗಿದೆ.

ಊರು ತುಂಬಾ ಭತ್ತದ ಗದ್ದೆಗಳೇ ಕಾಣುತ್ತಿದ್ದ ಕಾಲವೊಂದಿತ್ತು. ಅನಂತರ ಲಾಭದಾಯಕ ವಾಣಿಜ್ಯ ಕೃಷಿಯತ್ತ ಮನಸ್ಸು ಮಾಡಿದ ರೈತರು ಭತ್ತದ ಕೃಷಿಯಿಂದ ವಿಮುಖರಾದರು. ಭತ್ತವಿದ್ದ ಜಾಗದಲ್ಲಿ ಅಡಕೆ ಗಿಡಗಳು ಮೊಳೆತವು, ರಬ್ಬರ್‌ ತೋಟಗಳು ನೆಲೆಕಂಡುಕೊಂಡವು. ಕೊಕ್ಕೋ, ಕಾಳುಮೆಣಸುಗಳು ಸ್ಥಾನ ಪಡೆದುಕೊಂಡವು. ವಾಣಿಜ್ಯ ಬೆಳೆಗಳತ್ತ ಆಸಕ್ತಿ ಬೆಳೆಸಿಕೊಂಡರು ಪ್ರಸ್ತುತ ಆಹಾರ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಹೀಗಾಗಿ ಇರುವ ಭತ್ತದ ಕೃಷಿಯನ್ನು ಉಳಿಸಿಕೊಳ್ಳುವುದು ರೈತರಿಗೆ ಅನಿವಾರ್ಯವಾಗಿದೆ. 

ಅಸಲು ಅಧಿಕ
ಕೃಷಿಯನ್ನು ಹಿರಿಯರ ಕಾರಣಕ್ಕಾಗಿ ಅಥವಾ ಆಸಕ್ತಿಯಿಂದ ಕೈಗೊಂಡವರು ಕೃಷಿಯಲ್ಲಿ ನಷ್ಟ ಅನುಭವಿಸಲು ಸಿದ್ಧರಿಲ್ಲ. ಮಲೆನಾಡು ಅಡಿಕೆಗೂ ಸೂಕ್ತ ಪ್ರದೇಶ. ಲಾಭದ ಬೆಳೆ ಅಡಿಕೆಯನ್ನು ಬೆಳೆಸಲು ಗದ್ದೆಗಳನ್ನು ಅಡಿಕೆ ತೋಟಗಳನ್ನಾಗಿ ಪರಿವರ್ತಿಸಲಾಗಿದೆ. ಭತ್ತದ ಕೃಷಿಗೆ ಅಸಲೇ ಅಧಿಕವಾಗುತ್ತದೆ.
– ರಘುರಾಮ ಪಾಟಾಳಿ,
 ಕೃಷಿಕ, ಸರವು

– ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next