ಕೆ.ನಿಂಗಜ್ಜ
ಗಂಗಾವತಿ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆರಂಭವಾಗಿದ್ದು, ರೈತರು ಭತ್ತ ನಾಟಿ ಮಾಡಲು ಸಸಿ ಮಾಡಿ ಹಾಕುವ ಕಾರ್ಯವನ್ನು ಕೊರೊನಾ ಸಂಕಷ್ಟದಲ್ಲೂ ಆರಂಭಿಸಿದ್ದಾರೆ.
ಪಂಪ್ ಸೆಟ್ ಆಧಾರಿತ ನೀರಾವರಿ ಪ್ರದೇಶದಲ್ಲಿ ಜೂನ್ ಅಂತ್ಯದಲ್ಲಿ ಕಾಲುವೆ ನೀರು ಆಧಾರಿತ ಪ್ರದೇಶದಲ್ಲಿ ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಭತ್ತ ನಾಟಿ ಕಾರ್ಯ ಆರಂಭವಾಗಲಿದೆ. ಪ್ರತಿ ಹಂಗಾಮಿನಲ್ಲೂ ಕೆಲ ರೈತರು ನಕಲಿ ಬೀಜ ಅಥವಾ ಸ್ಥಳೀಯ ಬೀಜ ಖರೀದಿಸಿ ಭತ್ತದ ಇಳುವರಿ ಸರಿಯಾಗಿ ಬರದೇ ಕಷ್ಟ ಅನುಭವಿಸುತ್ತಿದ್ದಾರೆ. ಈಗಾಗಲೇ ಕೃಷಿ ಇಲಾಖೆ ಕೃಷಿ ವಿವಿ ಕೃಷಿ ಸಂಶೋಧನಾ ಮತ್ತು ವಿಜ್ಞಾನ ಕೇಂದ್ರದ ಕೃಷಿ ಅಧಿಕಾರಿಗಳು ವಿಜ್ಞಾನಿಗಳು ರೈತರಿಗೆ ಭತ್ತದ ಬೀಜ ಖರೀದಿ ಸೇರಿ ಅಗತ್ಯ ಮಾಹಿತಿಯನ್ನು ಗ್ರಾಮೀಣ ಭಾಗಕ್ಕೆ ಭೇಟಿ ನೀಡಿ ಕೊಡುತ್ತಿದ್ದಾರೆ. ಆದರೂ ರೈತರು ಸ್ಥಳೀಯವಾಗಿ ತಯಾರಿಸಿದ ಅವೈಜ್ಞಾನಿಕ ಭತ್ತದ ಬೀಜ ಹಾಕಿ ನಾಟಿ ಮಾಡುವುದರಿಂದ ಸರಿಯಾದ ಇಳುವರಿ ಮತ್ತು ದರ ಸಿಗದೇ ಕೃಷಿಯಲ್ಲಿ ನಷ್ಟ ಹೊಂದುತ್ತಿದ್ದಾರೆ.
ಭತ್ತದ ಬೀಜ ತಯಾರಿಸಲು ಕೃಷಿ ಇಲಾಖೆ ಪರವಾನಗಿ ನೀಡುತ್ತದೆ. ಇಲಾಖೆಯ ಮೇಲುಸ್ತುವಾರಿಯಲ್ಲಿ ಬೀಜ ತಯಾರಿಸಿ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ ಮಾರಾಟ ಮಾಡಬೇಕಾಗುತ್ತದೆ. ಆದರೆ ತಾಲೂಕಿನ ವಿವಿಧ ಗ್ರಾಮಗಳು ಮತ್ತು ಕ್ಯಾಂಪ್‌ಗ್ಳಲ್ಲಿ ಕೆಲ ದೊಡ್ಡ ರೈತರು ಕೃಷಿ ಇಲಾಖೆಯ ಪರವಾನಗಿ ಇಲ್ಲದೇ ಮತ್ತು ಅವೈಜ್ಞಾನಿಕವಾಗಿ ಭತ್ತದ ಬೀಜ ತಯಾರಿಸಿ ಮಾರಾಟ ಮಡುವ ದಂಧೆ ತಾಲೂಕಿನಲ್ಲಿ ವ್ಯಾಪಕವಾಗಿದೆ. ಕಳೆದ ವರ್ಷ ಆನೆಗೊಂದಿ ಮತ್ತು ಢಣಾಪುರ ಭಾಗದದಲ್ಲಿ ನಕಲಿ ಭತ್ತದ ಬೀಜದಿಂದಾಗಿ ಸಸಿ ಮಡಿ ಸರಿಯಾಗಿ ಬೆಳೆದಿರಲಿಲ್ಲ. ಸಸಿ ಮಡಿ ಹಾಕಲು ರೈತರು 10-15 ಸಾವಿರ ರೂ.ಗಳನ್ನು ಖರ್ಚು ಮಾಡಿರುತ್ತಾರೆ. ನಕಲಿ ಬೀಜ ತಯಾರಿಕಾ ಘಟಕದವರು ಹಣದ ಆಸೆಗಾಗಿ ನಕಲಿ ಬೀಜ ತಯಾರಿಸಿ ರೈತರ ಜೀವನ ಜತೆ ಚೆಲ್ಲಾಟ ವಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿವೆ.
ಅಧಿ ಕೃತ ಸಂಸ್ಥೆಯ ಬೀಜ ಖರೀದಿ ಸೂಕ್ತ: ಕೃಷಿ ಇಲಾಖೆ ಮತ್ತು ಕೃಷಿ ಸಂಶೋಧನಾ, ವಿಜ್ಞಾನ ಕೇಂದ್ರದಲ್ಲಿ ಆರ್‌ಎನ್‌ಆರ್ 15048, ಬಿಪಿಟಿ 5204, ಜಿಜಿಆರ್ 05, ಜಿಎನ್‌ವಿ 1109 ಹೀಗೆ ಹತ್ತು ಹಲವು ಉತ್ತಮ ಇಳುವರಿ ಬರುವ ಭತ್ತದ ತಳಿಗಳ ಬೀಜ ಸಂಗ್ರಹವಿದ್ದು, ರೈತರು ಖಾಸಗಿ ಅಂಗಡಿಗಳಲ್ಲಿ ಬೀಜ ಖರೀದಿ ಮಾಡದೇ ಸರಕಾರಿ ಸಂಸ್ಥೆಗಳಲ್ಲಿ ಬೀಜ ಖರೀದಿ ಮಾಡಿದರೆ ಉತ್ತಮ ಇಳುವರಿ ಸಾಧ್ಯ ಎಂದು ಕೃಷಿ ತಜ್ಞರು ಸಲಹೆ ನೀಡಿದ್ದಾರೆ.