Advertisement

ಗದ್ದೆಯಲ್ಲಿ ನಾಟಿ, ಯೋಗ, ಆಟೋಟಗಳೊಂದಿಗೆ ಸಂಭ್ರಮಿಸಿದ ವಿದ್ಯಾರ್ಥಿಗಳು

02:30 AM Jul 18, 2017 | Team Udayavani |

ಪಡುಬಿದ್ರಿ: ಅದಮಾರು ಪೂರ್ಣಪ್ರಜ್ಞ ಪ. ಪೂ. ಕಾಲೇಜು ಎನ್‌ಎಸ್‌ಎಸ್‌ ವಿದ್ಯಾರ್ಥಿಗಳಿಗೆ ಶನಿವಾರ ಖುಷಿಯೋ ಖುಷಿ. ವಸತಿ ಶಾಲೆಗೆ ಸಂಬಂಧಿಸಿದ ವಿದ್ಯಾರ್ಥಿಗಳೂ ಸೇರಿದಂತೆ ಸುಮಾರು 600ರಷ್ಟಿದ್ದ ವಿದ್ಯಾರ್ಥಿಗಳು ಅದಮಾರು ಮೂಡಬೆಟ್ಟು ಬರ್ಪಾಣಿ ಜಗನ್ನಾಥ ಶೆಟ್ಟಿ ಅವರ ಬಾಕಿಮಾರು ಗದ್ದೆಯಲ್ಲಿ ಕುಣಿದು ಕುಪ್ಪಳಿಸಿದ್ದು ನೋಡುಗರಿಗೆ ಮನೋರಂಜನೆಯನ್ನೂ ಒದಗಿಸಿತ್ತು. ಕಿರಿಯರೊಂದಿಗೆ ಹಿರಿಯರೂ ಎಂಬಂತೆ ಅದಮಾರು ಆದರ್ಶ ಮಹಿಳಾ ಮತ್ತು ಯುವತಿ ಮಂಡಲದ ಸದಸ್ಯೆಯರೂ ಜತೆಯಾದರು. ಗದ್ದೆಯಲ್ಲೇ ಅದಮಾರು ಪ. ಪೂ. ಕಾಲೇಜು ಎನ್‌ಎಸ್‌ಎಸ್‌ ವಿಭಾಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಯೋಗ, ಆಟೋಟ ಸ್ಪರ್ಧೆ, ಹಗ್ಗ ಜಗ್ಗಾಟದ ಜತೆ ಜತೆಗೇ ನಾಟಿಯನ್ನೂ ನಡೆಸಿ ರೈತರ ಬೆವರಿನಾಟದ ಅನುಭವವನ್ನೂ ಪಡೆದರು. ಯೋಗ ಶಿಕ್ಷಕಿ ಶ್ಯಾಮಲಾ ಕೃಷಿಯನ್ನು ಉತ್ತಮವಾಗಿ ನಿರ್ವಹಿಸಿದವನಿಗೆ ದುರ್ಭಿಕ್ಷೆ ಇರದು. ಪ್ರಕೃತಿಯೊಂದಿಗೆ ಬೆರೆತರೆ ಮಾತ್ರ ಶಿಕ್ಷಣ ಪೂರ್ಣವಾಗುತ್ತದೆ. ಹಾಗಾಗಿ ಗದ್ದೆಗಿಳಿಯಲು ಬೇಸರ ಬೇಡ ಎಂದರು. ತಾವೇ ಮೊದಲಾಗಿ ಇಳಿದು ಆದರ್ಶ ಮಹಿಳಾ ಮಂಡಲ ಸದಸ್ಯೆಯರು, ವಿದ್ಯಾರ್ಥಿಗಳೊಂದಿಗೆ ಸೇರಿ ಸುಲಭ ಯೋಗಾಸನಗಳನ್ನು ಪ್ರದರ್ಶಿಸಿದರು.

Advertisement

ಅದಮಾರು ಪ. ಪೂ. ಕಾಲೇಜು ಹಳೆ ವಿದ್ಯಾರ್ಥಿ, ಆದರ್ಶ ಯುವಕ ಮಂಡಲದ ಅಧ್ಯಕ್ಷ ಸಂತೋಷ್‌ ಜೆ. ಶೆಟ್ಟಿ ಸಹಯೋಗದಲ್ಲಿ ಅದಮಾರು ಪೂರ್ಣಪ್ರಜ್ಞ ಪ. ಪೂ. ಕಾಲೇಜು ಪ್ರಾಂಶುಪಾಲ ರಾಮಕೃಷ್ಣ ಪೈ ಅಧ್ಯಕ್ಷತೆಯಲ್ಲಿ ನಡೆದಿದ್ದ ಈ ಕೂಟದಲ್ಲಿ ನಿವೃತ್ತ ಪ್ರಾಂಶುಪಾಲ ನಾಗರತ್ನಾ ರಾವ್‌, ಪ್ರಾಧ್ಯಾಪಕ ಡಾ| ಜಯಶಂಕರ ಕಂಗಣ್ಣಾರು, ಬರ್ಪಾಣಿ ಮನೆತನದ ಹಿರಿಯರಾದ ಜಗನ್ನಾಥ ಶೆಟ್ಟಿ, ಯುವತಿ ಮಂಡಲ ಅಧ್ಯಕ್ಷೆ ಪ್ರೇಮಾ ಸಾಲ್ಯಾನ್‌ ಭಾಗವಹಿಸಿದ್ದರು. ಅದಮಾರು ಪೂರ್ಣಪ್ರಜ್ಞ ಪ. ಪೂ. ಕಾಲೇಜು ವಿದ್ಯಾರ್ಥಿಗಳಿಗಾಗಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಈ ‘ಕೆಸರ್ಡ್ ಗೊಬ್ಬು’ (ಕೆಸರಿನ ಆಟ)ವನ್ನು ನಡೆಸಲಾಗುತ್ತಿದೆ. ಈ ಬಾರಿಯಂತೂ ಅದಮಾರು ಶಾಲೆಗೆ ಬಯಲು ಸೀಮೆಯಿಂದ ಬಂದು ವಸತಿ ಶಾಲೆಯಲ್ಲೇ ಉಳಿದಿರುವ ಮಕ್ಕಳು ಸಕತ್ತಾಗಿ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next