Advertisement

ಕಂದು ಜಿಗಿಹುಳ ಬಾಧೆಯಿಂದ ಭತ್ತ ಬೆಳೆಗೆ ಹಾನಿ

09:03 PM Oct 07, 2021 | Team Udayavani |

ಬೆಳ್ತಂಗಡಿ: ತಾಲೂಕಿನ ಕೆಲವು ಕಡೆಗಳಲ್ಲಿ ಭತ್ತದ ಬೆಳೆಗೆ ಕಂದು ಜಿಗಿಹುಳು (ಹಾಪರ್‌ ಬರ್ನ್)ಬಾಧೆ ಕಾಣಿಸಿಕೊಂಡಿದೆ. ಲಾೖಲ ಗ್ರಾಮದ ಪುತ್ರಬೈಲು ನಿವಾಸಿ ರಾಮ ಭೈರ ಅವರ ಗದ್ದೆಯಲ್ಲಂತೂ ಅರ್ಧ ಎಕ್ರೆಗೂ ಅಧಿಕ ಬೆಳೆ ಕರಟಿ ಹೋಗಿದೆ.

Advertisement

ಜಿಗಿಹುಳು ಬಾಧೆ ಹಿಂದಿನಿಂದ ಇದ್ದರೂ ಕಲವು ವರ್ಷಗಳಿಂದ ಸುಧಾರಿತ ನಾಟಿ ಪದ್ಧತಿ ಅನುಸರಿಸುತ್ತಿರುವ ಕಾರಣ ರೋಗಲಕ್ಷಣ ಇರಲಿಲ್ಲ. ಈ ವರ್ಷ ಮತ್ತೆ ಉಲ್ಬಣಗೊಂಡಿದೆ. ಈ ಹುಳಗಳು ಭತ್ತದ ಪೈರಿನ ಕಾಂಡ(ತೆಂಡೆ)ದಿಂದ ಸಾರವನ್ನು ಹೀರುವುದರಿಂದ ಪೈರು ಬೆಂಕಿಯಲ್ಲಿ ಸುಟ್ಟಂತೆ ಕರಟುತ್ತದೆ.

ಆರಂಭದಲ್ಲಿ 0.6 ಇಂಚು ಗಾತ್ರವಿರುವ ಹುಳು 5ರಿಂದ 18 ದಿನಗಳಲ್ಲಿ 4ರಿಂದ 5 ಇಂಚು ಗಾತ್ರ ಹಿಗ್ಗಿಸಿ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಹೆಣ್ಣು ಕೀಟಗಳು 250ರಿಂದ 350 ಮೊಟ್ಟೆ ಇಡುವುದರಿಂದ ವಂಶಾಭಿವೃದ್ಧಿ ಪ್ರಕ್ರಿಯೆ ಚುರುಕಾಗಿರುತ್ತದೆ. ಪೈರಿನ ಕಾಂಡದಿಂದ ರಸ ಹೀರಲು ಆರಂಭಿಸಿದಾಗ ಹಳದಿ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಕ್ರಮೇಣ ಬೆಳವಣಿಗೆ ಕುಂಠಿತವಾಗುತ್ತದೆ. ಒಂದೊಮ್ಮೆ ಸಂಪೂರ್ಣ ಗದ್ದೆಗೆ ಆವರಿಸಿದರೆ ಭತ್ತವಾಗಲಿ ಪೈರಾಗಲಿ ಯಾವುದೇ ಪ್ರಯೋಜನಕ್ಕೂ ಬಾರದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಶೇ. 75ರಷ್ಟು ಭತ್ತಕ್ಕೆ ಹಾನಿ:

ರಾಮ ಭೈರ 40 ಸೆಂಟ್ಸ್‌ ಗದ್ದೆಯಲ್ಲಿ ಪ್ರತೀ ವರ್ಷ ತಾವೇ ಸಿದ್ಧಪಡಿಸಿದ ಭತ್ತ ತಳಿ ಬಿತ್ತುತ್ತಿದ್ದಾರೆ. ಕಳೆದ ವರ್ಷವೂ ಈ ಕೀಟ ಬಾಧೆ ನೀಡಿದ್ದು, ಪ್ರಸಕ್ತ ಶೇ.75ರಷ್ಟು ಭತ್ತಕ್ಕೆ ಬಾಧಿಸಿದ್ದು, ಕಟಾವಿನ ಹಂತದಲ್ಲಿ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿದೆ. ಕೃಷಿ ಇಲಾಖೆಯ ಮಾಹಿತಿಯಂತೆ 10 ವರ್ಷಗಳ ಹಿಂದೆ ದಾವಣಗೆರೆ, ಹರಿಹರ, ಬಳ್ಳಾರಿ, ಗಂಗಾವರಿ, ಸಿಂಧನೂರು, ಮಸ್ಕಿ ಮೊದಲಾದೆಡೆ ಈ ಸಮಸ್ಯೆ ಇತ್ತು. ದಕ್ಷಿಣ ಕನ್ನಡ  ಜಿಲ್ಲೆಯಲ್ಲಿ ಬಹಳ ವಿರಳ.

Advertisement

ನಿಯಂತ್ರಣ ಹೇಗೆ? :

ಜಿಗಿ ಹುಳು ಬಾಧಿತ ಪ್ರದೇಶದಲ್ಲಿ ಸಾಲು ನಾಟಿ ಮಾಡದೆ ಅಂತರ ಕಾಯ್ದುಕೊಂಡಲ್ಲಿ ಗಾಳಿ ಬೆಳಕು ಬುಡದ ಮೇಲೆ ಬಿದ್ದು ಹುಳಗಳ ವೃದ್ಧಿ ಕಡಿಮೆಯಾಗುತ್ತದೆ. ಗದ್ದೆಯಲ್ಲಿ ನೀರು ನಿಲ್ಲಿಸುವುದು ಮತ್ತು ಒಣಗಿಸುವ ಕ್ರಮ ಸಮರ್ಪಕವಾಗಿರಬೇಕು. ಕೀಟವನ್ನು ಆಕರ್ಷಿಸಲು ರಾತ್ರಿ ಹೊತ್ತು ಮೋಹಕ ಬಲೆಯನ್ನು ಉಪಯೋಗಿಸಬೇಕು. ಬೇವಿನ ಎಣ್ಣೆಯ ಸಿಂಪಡಣೆ, ಇಮಿಡಾಕ್ಲೋಪ್ರಿಡ್‌ 200 ಎಸ್‌.ಎಲ್‌. ಅನ್ನು 1 ಲೀ. ನೀರಿಗೆ 0.5 ಎಂ.ಎಲ್‌. ಮಿಶ್ರಣ ಮಾಡಿ ಬುಡಕ್ಕೆ ಸಿಂಪಡಿಸಬೇಕು.

ಕಳೆದ ವರ್ಷವೂ ನಮ್ಮ ಗದ್ದೆ ಹುಳು ಬಾಧೆಗೀಡಾಗಿತ್ತು. ಈ ವರ್ಷ ಕೃಷಿ ಇಲಾಖೆಯ ಸೂಚನೆಯಂತೆ ಮುಂಚಿತವಾಗಿ ದ್ರಾವಣ ಸಿಂಪಡಿಸಿದ್ದೆವು. ಆರಂಭದಲ್ಲಿ ಬಾಧೆ ಇರಲಿಲ್ಲ. ಪೈರು ಕಟಾವಿಗೆ ಬರುತ್ತಿದ್ದಂತೆ ಸಂಪೂರ್ಣ ಆವರಿಸಿಕೊಂಡಿದೆ. – ರಾಮ ಭೈರ, ಕೃಷಿಕ

ಕಂದು ಜಿಗಿಹುಳು ಬಾಧೆಯಿಂದ ರೈತರೊಬ್ಬರು ಸಂಪೂರ್ಣ ನಷ್ಟ ಅನುಭವಿಸಿದ್ದಾರೆ. ಇಲಾಖೆ ಸಿಬಂದಿ ಸ್ಥಳ ಹಾಗೂ ಬೆಳೆ ಪರಿಶೀಲಿಸಿ ನಿಯಂತ್ರಣ ಕ್ರಮ ಸೂಚಿಸಿದ್ದಾರೆ. ಕಟಾವಿನ ಹಂತದಲ್ಲಿರುವುದರಿಂದ ಇತರ ಗದ್ದೆಗಳಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. – ರಂಜಿತ್‌ ಟಿ.ಎನ್‌., ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next