ನಾರಾಯಣಪುರ: ಹುಣಸಗಿ ತಾಲೂಕಿನ ಕೊಡೇಕಲ್ ವಲಯದಲ್ಲಿ ಗುರುವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ನೂರಾರು ಎಕರೆ ಭತ್ತದ ಬೆಳೆ ನೆಲಕಚ್ಚಿದೆ ಎಂದು ಕಂದಾಯ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.
ನಾರಾಯಣಪುರ, ಕೊಟೆಗುಡ್ಡ, ರಾಯನಗೋಳ, ಜೊಗುಂಡಭಾವಿ, ಮೇಲಿನಗಡ್ಡಿ, ಜಂಗಿನಗಡ್ಡಿ, ತಂಗಡಬೈಲು, ಅಮ್ಮಾಪುರ ಎಸ್ಕೆ ಗ್ರಾಮಗಳ ಸಿಮಾಂತರದಲ್ಲಿ ಅಂದಾಜು 250 ಎಕರೆಗೂ ಹೆಚ್ಚು ಕಟಾವಿಗೆ ಬಂದ ಭತ್ತ ಬೆಳೆ ನಾಶವಾಗಿದೆ. ಈಗಾಗಲೇ ಬೆಳೆ ಹಾನಿಗೊಳಗಾದ ಪ್ರದೇಶಗಳ ರೈತರ ಬೆಳೆ ಹಾನಿ ಪ್ರಮಾಣದ ಬಗ್ಗೆ ಸಂಬಂಧಪಟ್ಟ ಗ್ರಾಮ ಲೆಕ್ಕಿಗರು ಮಾಹಿತಿ ಕಲೆ ಹಾಕಿ ವರದಿ ಒಪ್ಪಿಸಲಿದ್ದಾರೆ ಎಂದು ಕೊಡೇಕಲ್ ನಾಡ ಕಾರ್ಯಾಲಯದ ಉಪತಹಶೀಲ್ದಾರ್ ಬಸವರಾಜ ಬಿರಾದಾರ ಪತ್ರಿಕೆಗೆ ತಿಳಿಸಿದ್ದಾರೆ.
ಕೊಯ್ಲಿಗೆ ಬಂದ ಭತ್ತ ಬಿರುಗಾಳಿ ಮಳೆಯ ಹೊಡತಕ್ಕೆ ಬೆಳೆ ನೆಲಕ್ಕುರುಳಿರುವುದು ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಸಿಡಲಿಗೆ ಎರಡು ಆಡು ಸಾವು
ಸಮೀಪದ ಬೈಲಕುಂಠಿ ಗ್ರಾಮದ ಹೊರ ವಲಯದ ಜಮೀನಿನಲ್ಲಿದ್ದ ಬೈಲಕುಂಠಿ ನಿವಾಸಿ ಸಿದ್ದಪ್ಪ ಎಂಬುವರಿಗೆ ಸೇರಿದ್ದ ಎರಡು ಆಡು ಮರಿ(ಹೊತು)ಗಳು ಸಿಡಿಲು ಹೊಡೆತಕ್ಕೆ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ. ಅಕಾಲಿಕ ಸುರಿದ ಮಳೆಗೆ ಬೆಳೆ ಹಾನಿಯಾದವರಿಗೆ, ಸಿಡಿಲಿನಿಂದ ಸಾಕು ಪ್ರಾಣಿಗಳನ್ನು ಕಳೆದುಕೊಂಡವರಿಗೆ ಸರ್ಕಾರ ಕೂಡಲೆ ಸಮೀಕ್ಷೆ ನಡೆಸಿ ಪರಿಹಾರ ಕೊಡಬೇಕು ಎಂದು ಕರವೆ ಕಾರ್ಯಕರ್ತ ಅಮರೇಶ ನೂಲಿ ಒತ್ತಾಯಿಸಿದ್ದಾರೆ.