ರಾಯಚೂರು: ತಾಲೂಕಿನ ಮಂಡಲಗೇರಾ ಗ್ರಾಮದಲ್ಲಿ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೃಷಿ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಕೋರಮಂಡಲ ಸಂಸ್ಥೆಯ ಸಹಯೋಗದಲ್ಲಿ ಭತ್ತದ ಹುಲ್ಲಿನ ನಿರ್ವಹಣೆಯಲ್ಲಿ ಪ್ಯಾಡಿ ಬೇಲರ್‌ನ ಪ್ರಾತ್ಯಕ್ಷಿಕೆ ಹಾಗೂ ಕ್ಷೇತ್ರೋತ್ಸವ ನಡೆಯಿತು.
ಸಂಸ್ಕರಣೆ ಮತ್ತು ಆಹಾರ ತಂತ್ರಜ್ಞಾನದ ವಿಜ್ಞಾನಿ ವೀಣಾ ಟಿ. ಮಾತನಾಡಿ, ಟ್ರ್ಯಾಕ್ಟರ್ ಚಾಲಿತ ಒಣ ಹುಲ್ಲಿನ ಬೇಲರ್‌ನ್ನು ರೈತರಿಗೆಂದು ಅಭಿವೃದ್ಧಿಪಡಿಸಲಾಗಿದೆ. ಭತ್ತ ಕಟಾವು ಮಾಡಿದ ನಂತರ ಹೊಲಗಳಲ್ಲಿ ಉಳಿದ ಒಣ ಹುಲ್ಲನ್ನು ಒಗ್ಗೂಡಿಸಿ ಬಿಗಿಯಾಗಿ ವೃತ್ತ ಮತ್ತು ಚೌಕ ಆಕಾರದ ಪೆಂಡಿಗಳನ್ನಾಗಿ ಮಾಡುವ ಯಂತ್ರವೇ ಪ್ಯಾಡಿ ಬೇಲರ್. ಇದು ಒಂದು ತಾಂತ್ರಿಕತೆಯಲ್ಲಿ ಹೊಸ ಆವಿಷ್ಕಾರವಾಗಿದ್ದು, ರೈತನ ಕೆಲಸವನ್ನು ಕಾರ್ಮಿಕರಿಗೆ ಒದಗಿಸುವ ಖರ್ಚನ್ನು ಮತ್ತು ಸಮಯವನ್ನು ಉಳಿಸಲಿದೆ.
ಮುಖ್ಯವಾಗಿ ಭತ್ತದ ಹುಲ್ಲನ್ನು ಸುರಕ್ಷಿತವಾಗಿ ಮತ್ತು ಬಹುಕಾಲದವರೆಗೂ ಸಂಗ್ರಹಿಸಲು ಬಹು ಉಪಯೋಗವಾಗಿದೆ ಎಂದು ವಿವರಿಸಿದರು. ರೈತರಿಗೆ ಆದಾಯ ದ್ವಿಗುಣಗೊಳಿಸಲು ಸಹಕಾರಿಯಾಗುವ ಯಂತ್ರೋಪಕರಣಗಳ ಬಗ್ಗೆ ಮಾಹಿತಿ ನೀಡಿ, ಅದರ ಸದುಪಯೋಗ ಪಡೆಯಲು ಕರೆ ನೀಡಿದರು.
ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ| ದೇವನಾಂದ ಮಸ್ಕಿ ಮಾತನಾಡಿ, ಪ್ಯಾಡಿ ಬೇಲರ್‌ನ ಉಪಯೋಗಗಳು ಅದರ ನಿರ್ವಹಣೆ, ಅದರ ಸಂಪೂರ್ಣ ಮಾಹಿತಿ ಒದಗಿಸಿ ರೈತರು ತಮ್ಮ ಭತ್ತದ ಹೊಲಗಳಲ್ಲಿ ಇದನ್ನು ಬಳಸಿ ಕಡಿಮೆ ಸಮಯ ಮತ್ತು ಖರ್ಚಿನಲ್ಲಿ ಭತ್ತದ ಹುಲ್ಲಿನ ಬೇಲರ್ ಗಳನ್ನು ತಯಾರು ಮಾಡುವ ಪ್ರಾತ್ಯಕ್ಷಿಕೆ ತೋರಿಸಿದರು.
ಮಂಡಲಗೇರಾ ಗ್ರಾಮದ ಮುಖಂಡ ಮಲ್ಲನಗೌಡ, ಕೋರಮಂಡಲ ಪ್ರೈವೇಟ್ ಲಿಮಿಟೆಡ್‌ನ ಬೇಸಾಯ ಶಾಸ್ತ್ರಜ್ಞ ನವೀನ್ ಮತ್ತು ಗ್ರಾಮದ ಸುಮಾರು 40ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.