Advertisement

ಭತ್ತ, ಕಬ್ಬು ಬೆಳೆಯುವಂತಿಲ್ಲ

11:06 AM Aug 15, 2017 | Team Udayavani |

ಬೆಂಗಳೂರು: ಕಾವೇರಿ ಕೊಳ್ಳದಲ್ಲಿ ನೀರಿನ ಸಂಗ್ರಹ ಕಡಿಮೆ ಇರುವ ಹಿನ್ನೆಲೆಯಲ್ಲಿ ಕಾವೇರಿ ಜಲಾನಯನ ಪ್ರದೇಶದ ರೈತರು ಹೊಸದಾಗಿ ಭತ್ತ ಹಾಗೂ ಕಬ್ಬು ಬೆಳೆಯದಂತೆ ಸೂಚನೆ ನೀಡಿ, ಈಗಾಗಲೇ ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಹರಿಸಲು ಸೋಮವಾರ ನಡೆದ ಸರ್ವಪಕ್ಷದ ನಾಯಕರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

Advertisement

ಕಾವೇರಿ ಕೊಳ್ಳದ ಜನಪ್ರತಿನಿಧಿಗಳು, ಪ್ರತಿಪಕ್ಷದ ನಾಯಕರ ಜತೆ ಸಮಾಲೋಚನೆ ನಡೆಸಿ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ. ಸಭೆ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಳೆದ 46 ವರ್ಷಗಳಲ್ಲಿಯೇ ಅತಿ ಕಡಿಮೆ ಮಳೆಯಾಗಿದೆ. ಕಾವೇರಿ ಕೊಳ್ಳದ ನಾಲ್ಕೂ ಜಲಾಶಯಗಳಲ್ಲಿ ಆಗಸ್ಟ್‌ ಹೊತ್ತಿಗೆ 114 ಟಿಎಂಸಿ ನೀರು ಸಂಗ್ರಹವಾಗಬೇಕಿತ್ತು. ಆದರೆ, 43 ಟಿಎಂಸಿ ನೀರು ಸಂಗ್ರಹವಾಗಿದೆ. ಅದರಲ್ಲಿ
2018 ರ ಜೂನ್‌ ವರೆಗೂ 30 ಟಿಎಂಸಿ ನೀರು ಕುಡಿಯಲು ಬೇಕು. ಹೀಗಾಗಿ ರೈತರು ಹೊಸದಾಗಿ ಭತ್ತ ಮತ್ತು ಕಬ್ಬು ನಾಟಿ ಮಾಡದಂತೆ ಮನವಿ ಮಾಡಿದ್ದೇವೆ. ಈಗಿರುವ ಬೆಳೆಗೆ ಸ್ವಲ್ಪ ನೀರು ಬಿಡುವಂತೆ ಸೂಚಿಸಿದ್ದೇವೆ ಎಂದು ತಿಳಿಸಿದರು.

ಈಗ ನಾಲ್ಕೂ ಜಲಾಶಯಗಳಿಂದ ಕೆರೆಗಳಿಗೆ ಕುಡಿಯಲು ಮಾತ್ರ ನೀರು ಬಿಡುವಂತೆ ಸೂಚಿಸಿದ್ದೇವೆ. ರೈತರು ಮಳೆ ಆಧಾರಿತ ಬೆಳೆಗಳನ್ನು ಮಾತ್ರ ಬೆಳೆಯಬೇಕು. ಹೊಸ ಬೆಳೆಗಳಿಗೆ ನೀರು ಬಿಡುವುದು ಕಷ್ಟವಾಗುತ್ತದೆ. ಈ ಬಗ್ಗೆ ನೀರಾವರಿ ಸಲಹಾ ಸಮಿತಿ ಸಭೆ ಕರೆದು ರೈತರಿಗೆ ಮನವರಿಕೆ ಮಾಡಿಕೊಂಡುವಂತೆ ಸೂಚನೆ ನೀಡಿದ್ದೇನೆ ಎಂದರು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ರಾಜ್ಯ ಸರ್ಕಾರ ಆ.9ರಂದು ನೀಡಿದ ಆದೇಶವನ್ನು ಅಧಿಕಾರಿಗಳು ಸರಿಯಾಗಿ ಪಾಲಿಸಿಲ್ಲ. ಆ.9 ರ ಕಾವೇರಿ ಕಣಿವೆ ಭಾಗದ ಜನ ಪ್ರತಿನಿಧಿಗಳ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಕೆರೆಗಳಿಗೆ ನೀರು ಬಿಡುವುದಾಗಿ ಹೇಳಿದ್ದರು. ಇನ್ನೂ ನೀರು ಬಿಡುತ್ತಿಲ್ಲ. ಶೀಘ್ರವೇ ಸರ್ಕಾರ ಕುಡಿಯಲು ಕೆರೆಗಳಿಗೆ ನೀರು ಹರಿಸುವಂತೆ ಮನವಿ ಮಾಡಿದರು.

ಸರ್ವ ಪಕ್ಷದ ಸಭೆಯ ನಂತರ ಮೈಸೂರು, ಚಾಮರಾಜನಗರದ ಕಾವೇರಿ ನೀರಾವರಿ ಸಲಹಾ ಮಂಡಳಿ ಸಭೆ ನಡೆಸಲಾಯಿತು. ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಸಿ.ಮಹದೇವಪ್ಪ, ಮಂಡ್ಯ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ, ಶಾಸಕರಾದ ಅಂಬರೀಶ್‌, ನರೇಂದ್ರಸ್ವಾಮಿ, ಪುಟ್ಟಣ್ಣಯ್ಯ, ಸಾ.ರಾ.ಮಹೇಶ್‌ ಪಾಲ್ಗೊಂಡಿದ್ದರು.

ಮಹದಾಯಿ ಸಭೆಯಲ್ಲಿ ವಾಗ್ವಾದ
ಬೆಂಗಳೂರು: ಮಹದಾಯಿ ನದಿ ನೀರು ವಿವಾದ ಕುರಿತು ಚರ್ಚಿಸಲು ನಡೆದ ಸರ್ವಪಕ್ಷ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌.ಪಾಟೀಲ ಹಾಗೂ ವಿಧಾನ ಪರಿಷತ್‌ ಪ್ರತಿ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ನಡುವೆ ಮಾತಿನ ಚಕಮಕಿ ನಡೆದಿದೆ. ಒಕ್ಕೂಟ ವ್ಯವಸ್ಥೆಯ ಮುಖ್ಯಸ್ಥರಾಗಿರುವ ಪ್ರಧಾನಿ ಮಧ್ಯಸ್ಥಿಕೆ ವಹಿಸಿ ಮಹದಾಯಿ ಜಲ ವಿವಾದವನ್ನು ಪರಿಹರಿಸಬೇಕು ಎಂದು ಎಸ್‌.ಆರ್‌.ಪಾಟೀಲ್‌ ಸಭೆಯಲ್ಲಿ ಹೇಳಿದರು. ಇದನ್ನು ಆಕ್ಷೇಪಿಸಿದ ಈಶ್ವರಪ್ಪ, ಪ್ರತಿಯೊಂದಕ್ಕೂ ಪ್ರಧಾನಿ ಹೆಸರು ಹೇಳ್ತೀರಿ, ಹಿಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಇದ್ದಾಗ ನಾವೂ ನಿಯೋಗ ತೆಗೆದುಕೊಂಡು ಹೋಗಿದ್ದೆವು. ಅವರೇನೂ ಮಾಡಲಿಲ್ಲ. ಈಗ ಕನಿಷ್ಠ ನ್ಯಾಯಮಂಡಳಿಗಾದರೂ ಹೋಗಿದೆ ಎಂದರು. ಇದಕ್ಕೆ ಸಂಸದರಾದ ಪ್ರಹ್ಲಾದ್‌ ಜೋಶಿ, ಪಿ.ಸಿ.ಗದ್ದಿಗೌಡರ ಧ್ವನಿಗೂಡಿಸಿದರು. ಹಿಂದೆ ಆಗಿದ್ದನ್ನು ಬಿಟ್ಟು ಈಗ ಮುಂದೆ ಆಗುವ ಬಗ್ಗೆ ಚರ್ಚೆ ಮಾಡಿ ಎಂದರು ಇದಕ್ಕೆ ಅಷ್ಟೇ ಉದ್ವೇಗದಲ್ಲಿ ಎಸ್‌.ಆರ್‌.ಪಾಟೀಲರು ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ ಇಬ್ಬರು ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು ಎಂದು ತಿಳಿದು ಬಂದಿದೆ.

Advertisement

18ಕ್ಕೆ ಮೋಡ ಬಿತ್ತನೆಗೆ ಚಾಲನೆ ಸಿಗುವ  ಸಾಧ್ಯತೆ
ಬೆಂಗಳೂರು: ಬಹುಚರ್ಚಿತ ಮೋಡ ಬಿತ್ತನೆಗೆ ಆಗಸ್ಟ್‌ 18ರಿಂದ ಚಾಲನೆ ಸಿಗುವ ಸಾಧ್ಯತೆಯಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಇದಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಮೋಡ ಬಿತ್ತನೆಗೆ ಬಳಸಿಕೊಳ್ಳುವ ರಡಾರ್‌ಗಳು ಮತ್ತು ವಿಶೇಷ ತಂತ್ರಜ್ಞಾನದ ವಿಮಾನಗಳು ಈಗಾಗಲೇ ಬೆಂಗಳೂರಿಗೆ ತಲುಪಿವೆ. ಅಮೆರಿಕದಿಂದ ತರಿಸಿಕೊಳ್ಳಲಾಗಿರುವ ವಿಶೇಷ ವಿಮಾನವನ್ನು ಸೋಮವಾರ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ ಪಾಟೀಲ್‌, ಜಕ್ಕೂರು ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿ, ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು. ಮಳೆ ಪರಿಸ್ಥಿತಿ ಆಧರಿಸಿ ಆಗಸ್ಟ್‌ ಮೊದಲ ಅಥವಾ ಎರಡನೇ ವಾರದಲ್ಲಿ ಮೋಡ ಬಿತ್ತನೆ ನಡೆಸಲಾಗುವುದು
ಎಂದು ಇಲಾಖೆ ಹೇಳಿತ್ತು. ಅದರಂತೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಬೆಂಗಳೂರಿನ ಕೃಷಿ ವಿವಿ (ಜಿಕೆವಿಕೆ), ಯಾದಗಿರಿ ಜಿಲ್ಲೆಯ ಸುರಪುರ ಹಾಗೂ ಗದಗನಲ್ಲಿ ರಾಡಾರ್‌ಗಳ ಸ್ಥಾಪನೆ ಕಾರ್ಯ ನಡೆದಿದೆ. ಇನ್ನೆರಡು ದಿನಗಳಲ್ಲಿ ಈ ಕೆಲಸ ಮುಗಿಯಲಿದ್ದು, ಆ.18ರಿಂದ ಮೋಡ ಬಿತ್ತನೆ ಕಾರ್ಯ ಆರಂಭವಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. 

ಬರ ಪರಿಸ್ಥಿತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಹೊಂದಾಣಿಕೆಯಿಂದ ನಿಭಾಯಿಸಬೇಕಿದೆ. ಮಳೆ ಸುರಿಸಲು ರಾಜ್ಯ ಸರ್ಕಾರ ಮೋಡ
ಬಿತ್ತನೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಹೇಳಿದೆ. ಮೋಡ ಬಿತ್ತನೆಯ ಬಗ್ಗೆ ನನಗೆ ನಂಬಿಕೆಯಿಲ್ಲ. ಇದರಿಂದ ಹಣದ ದುರ್ಬಳಕೆ ಆಗುತ್ತದೆ ಅಷ್ಟೇ.

ದೇವೇಗೌಡ, ಮಾಜಿ ಪ್ರಧಾನಿ

ರಾಜ್ಯದಲ್ಲಿ ಈ ಬಾರಿಯೂ ಬರ ಪರಿಸ್ಥಿತಿ ಎದುರಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದ್ದು, ಬರ ಪರಿಸ್ಥಿತಿಯನ್ನು ಎದುರಿಸಲು ಈಗಿಂದಲೇ ಸಿದ್ಧತೆ ಮಾಡಲಾಗುತ್ತಿದೆ. ಮೋಡ ಬಿತ್ತನೆ ಮಾಡುವುದಿದ್ದರೆ ಈ ಮಾಸಾಂತ್ಯದೊಳಗೆ ಮಾಡಬೇಕಾಗಿದೆ.
ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next