ಹೊಸ ಪ್ರತಿಭೆ ಶ್ರೇಯಸ್ ಅಭಿನಯದ “ಪಡ್ಡೆಹುಲಿ’ ಚಿತ್ರಕ್ಕೆ ಎಲ್ಲೆಡೆಯಿಂದಲೂ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಸಹಜವಾಗಿಯೇ ಚಿತ್ರತಂಡಕ್ಕೂ ಇದು ಖುಷಿಯನ್ನು ಹೆಚ್ಚಿಸಿದೆ. ಆದರೆ, ಮಾಲ್‌ಗಳಲ್ಲಿರುವ ಮಲ್ಟಿಪ್ಲೆಕ್ಸ್‌ನಲ್ಲಿ ಮಾತ್ರ ಸರಿಯಾದ ವೇಳೆಗೆ ಪ್ರದರ್ಶನ ಮಾಡದಿರುವುದರಿಂದ ಗಳಿಕೆ ಕಡಿಮೆಯಾಗುತ್ತಿದೆ ಎಂಬ ಬೇಸರ ನಿರ್ಮಾಪಕ ಕೆ.ಮಂಜು ಅವರದು.
ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿರುವ ಕುರಿತು ಸಂತಸ ಹಂಚಿಕೊಳ್ಳಲು ಚಿತ್ರತಂಡ ಮಾಧ್ಯಮ ಎದುರು ಬಂದಿದ್ದ ವೇಳೆ, ಕೆ.ಮಂಜು, ಪತ್ರಿಕೆಗಳ ವಿಮರ್ಶೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಬುಕ್ ಮೈ ಶೋ ವಿರುದ್ಧ ಕಿಡಿಕಾರಿದರು. ಇಲ್ಲಿಯವರೆಗೂ ಬುಕ್ ಮೈ ಶೋನವರು ವಿಮರ್ಶೆ ಮಾಡಿಲ್ಲ. ಅದಕ್ಕೆ ಕಾರಣ ಏನೆಂಬುದು ಗೊತ್ತಿಲ್ಲ.
ಸಿನಿಮಾ ಚೆನ್ನಾಗಿ ಪ್ರದರ್ಶನ ಕಂಡರೆ, ಅದನ್ನು ಮುಂದುವರೆಸಬೇಕಾಗುತ್ತದೆ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದರು ಕೆ.ಮಂಜು. ಕೆಲ ಚಿತ್ರಮಂದಿರಗಳು ಸೇರಿದಂತೆ ಮಲ್ಟಿಪ್ಲೆಕ್ಸ್‌ನಲ್ಲಿ ಇದೊಂದು ದಂಧೆಯಂತೆ ನಡೆಯುತ್ತಿದೆ. ನಿರ್ಮಾಪಕರಿಗೆ ಹೇಳದೆ, ಕೇಳದೆ ಚಿತ್ರವನ್ನು ತೆಗೆಯಲಾಗುತ್ತಿದೆ.
ಅವರೆಲ್ಲಾ ದುಡ್ಡು ಮಾಡಲು ಹೊರಟಿದ್ದಾರೆ. ನಿರ್ಮಾಪಕರ ಕಷ್ಟದ ಬಗ್ಗೆ ಯೋಚಿಸಿಲ್ಲ. ಉತ್ತಮ ಚಿತ್ರಕ್ಕೆ ಈ ರೀತಿ ಅನ್ಯಾಯವಾಗುತ್ತಿದ್ದರೂ ಸಂಬಂಧಿಸಿದವರು ಏನೂ ಮಾತಾಡುತ್ತಿಲ್ಲ. ಸರ್ಕಾರ ಕೂಡ ಮಲ್ಟಿಪ್ಲೆಕ್ಸ್ ನಡೆ ಬಗ್ಗೆ ಗಂಭೀರವಾಗಿ ಯೋಚಿಸಬೇಕು’ ಎಂಬುದು ಮಂಜು ಮಾತು. ನಿರ್ದೇಶಕ ಗುರುದೇಶಪಾಂಡೆ ಅವರಿಗೆ “ಪಡ್ಡೆಹುಲಿ’ ಕುರಿತು ಕೇಳಿಬಂದ ಪ್ರತಿಕ್ರಿಯೆ ಖುಷಿಕೊಟ್ಟಿದೆ.
ಆದರೆ, ಸಿನಿಮಾಗಳ ಪ್ರದರ್ಶನಕ್ಕೆ ತೊಂದರೆಯಾದರೆ, ಸಂಬಂಧಿಸಿದ ಮಂಡಳಿ ಅಂತಹ ಚಿತ್ರಗಳ ನಿರ್ಮಾಪಕರ ಪರವಾಗಿರಬೇಕು. ಅವರಿಗೆ ಅನುಕೂಲವಾಗುವಂತಹ ಕೆಲಸ ಮಾಡಬೇಕು. ಇದು ಹೊಸ ಹುಡುಗನ ಸಿನಿಮಾ. ನಾಯಕ ಶ್ರೇಯಸ್ ನಟನೆ ಬಗ್ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ಹೊಸಬರ ಚಿತ್ರ ಆಗಿರುವುದರಿಂದ ಸಿನಿಮಾ ನಿಧಾನವಾಗಿ ಜನರನ್ನು ಆಕರ್ಷಿಸುತ್ತದೆ. ಅದಕ್ಕೆ ಸಮಯವೂ ಬೇಕು. ಹಿಂದೆ ಕೂಡ ಹಲವು ಚಿತ್ರಗಳು ಹೀಗೆ ಆಗಿದ್ದವು. ಅವುಗಳಿಗೆ ಸಮಯ ಸಿಕ್ಕಿದ್ದರಿಂದ ಅವು ಸೂಪರ್‌ಹಿಟ್ ಚಿತ್ರಗಳೆನಿಸಿಕೊಂಡಿವೆ. ಬುಕ್ ಮೈ ಶೋ ಒಂದು ಖಾಸಗಿ ಕಂಪೆನಿ. ಆ ಬಗ್ಗೆ ಅನೇಕ ದೂರು ಬಂದರೂ ಯಾರೂ ಗಮನಿಸಿಲ್ಲ.
ವಾಣಿಜ್ಯ ಮಂಡಳಿ ಕೂಡ ಒಂದು ಆ್ಯಪ್ ಶುರು ಮಾಡುವುದಾಗಿ ಹೇಳಿತ್ತು. ಆ ಬಗ್ಗೆ ಇದುವರೆಗೂ ವಿಷಯ ಗೊತ್ತಾಗಿಲ್ಲ ಅದೇನೆ ಇರಲಿ, “ಪಡ್ಡೆಹುಲಿ’ ಚಿತ್ರವನ್ನು ಎಲ್ಲರೂ ಬೆಂಬಲಿಸಬೇಕು, ಹೊಸಬರನ್ನು ಪ್ರೋತ್ಸಾಹಿಸಬೇಕು ಎಂದರು ಗುರುದೇಶಪಾಂಡೆ. ಈ ವೇಳೆ ನಿರ್ಮಾಪಕ ರಮೇಶ್‌ರೆಡ್ಡಿ, ನಾಯಕ ಶ್ರೇಯಸ್, ನಾಯಕಿ ನಿಶ್ವಿಕಾನಾಯ್ಡು “ಪಡ್ಡೆಹುಲಿ’ ಸಂತಸ ಹಂಚಿಕೊಂಡರು.