ಗುರುದೇಶಪಾಂಡೆ ನಿರ್ದೇಶನದ “ಪಡ್ಡೆಹುಲಿ’ ಚಿತ್ರ ಇಂದು ತೆರೆಕಾಣುತ್ತಿದೆ. ಈ ಚಿತ್ರದ ಮೂಲಕ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಹೀರೋ ಆಗಿ ಎಂಟ್ರಿಕೊಡುತ್ತಿದ್ದಾರೆ. ನಿಶ್ವಿಕಾ ನಾಯ್ಡು ಈ ಚಿತ್ರದ ನಾಯಕಿ. ರಮೇಶ್ ರೆಡ್ಡಿ ಚಿತ್ರದ ನಿರ್ಮಾಪಕರು.
ಈ ಚಿತ್ರ ಹಲವು ಕಾರಣಗಳಿಂದ ಗಮನ ಸೆಳೆದಿದೆ. ಮುಖ್ಯವಾಗಿ ಈ ಚಿತ್ರದಲ್ಲಿ ಬರೋಬ್ಬರಿ 10 ಹಾಡು ಇದೆ. ಈ ಹತ್ತು ಹಾಡುಗಳನ್ನು ವಿಭಿನ್ನವಾಗಿ ಚಿತ್ರೀಕರಿಸಲಾಗಿದೆ. ಹತ್ತು ಹಾಡು ಒಂದಕ್ಕಿಂತ ಒಂದು ಭಿನ್ನವಾಗಿದೆ. ರವಿಚಂದ್ರನ್ ಅವರು “ಪ್ರೇಮಲೋಕ’ದಲ್ಲಿ ಈ ತರಹದ ಪ್ರಯೋಗ ಮಾಡಿದ್ದರು. ನಿರ್ದೇಶಕ ಗುರುದೇಶಪಾಂಡೆಗೂ ಆ ತರಹದ ಒಂದು ಆಸೆ ಇತ್ತಂತೆ. ಅದು ಈಗ ‘ಪಡ್ಡೆಹುಲಿ’ ಚಿತ್ರದ ಮೂಲಕ ಈಡೇರಿದೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕರು, “ನಮ್ಮ ನಿರ್ಮಾಪಕರು ಯಾವುದಕ್ಕೂ ಹಿಂದೇಟು ಹಾಕದೇ, ಅದ್ಧೂರಿ ಸೆಟ್ ಹಾಕಿ, ಕಲರ್ ಫುಲ್ ಆಗಿ ಹಾಡುಗಳನ್ನು ಚಿತ್ರೀಕರಿಸಿದ್ದಾರೆ. ಇವತ್ತು ಸಿನಿಮಾ ಚೆನ್ನಾಗಿ ಮೂಡಿಬಂದಿದೆ ಎಂದರೆ ಅದಕ್ಕೆ ಕಾರಣ ನಿರ್ಮಾಪಕರು. ಬಹುಶಃ ಒಬ್ಬ ಹೊಸ ಹುಡುಗನ ಲಾಂಚ್‌ಗೆ ಇಷ್ಟೊಂದು ದೊಡ್ಡ ಬಜೆಟ್ ಕೊಡೋದು ಕಷ್ಟ. ಆದರೆ, ನಿರ್ಮಾಪಕರು ಇಡೀ ತಂಡದ ಮೇಲೆ ನಂಬಿಕೆ ಇಟ್ಟು ಕೇಳಿದ್ದನ್ನು ನೀಡಿದ್ದಾರೆ’ ಎಂದರು.
ಚಿತ್ರದಲ್ಲಿ ರವಿಚಂದ್ರನ್, ನಾಯಕನ ತಂದೆಯಾಗಿ ನಟಿಸಿದ್ದಾರೆ. ಅವರಿಗೂ ಈ ಸಿನಿಮಾ ಹಾಗೂ ನಾಯಕನ ಮೇಲೆ ಭರವಸೆ ಇದೆ. ನಾಯಕ ಶ್ರೇಯಸ್ ಚಿತ್ರರಂಗದಲ್ಲಿ ನೆಲೆ ನಿಲ್ಲುತ್ತಾನೆ ಎಂದು ಬೆನ್ನು ತಟ್ಟುತ್ತಾರೆ. “ನಾನು ಪೂರ್ತಿ ಸಿನಿಮಾ ನೋಡಿಲ್ಲ. ಕೆಲವು ತುಣುಕುಗಳನ್ನು ನೋಡಿದ್ದೇನೆ. ಚೆನ್ನಾಗಿ ಮೂಡಿಬಂದಿದೆ’ ಎಂದರು. ನಾಯಕ ಶ್ರೇಯಸ್ ತಮ್ಮ ಮೊದಲ ಸಿನಿಮಾವನ್ನೇ ಇಷ್ಟೊಂದು ಅದ್ಧೂರಿಯಾಗಿ ನಿರ್ಮಿಸಿದ ನಿರ್ಮಾಪಕರಿಗೆ ಥ್ಯಾಂಕ್ಸ್ ಹೇಳುತ್ತಲೇ, ಸಿನಿಮಾದ ಅನುಭವ ಹಂಚಿಕೊಂಡರು.
ಇದು ಎಲ್ಲಾ ವರ್ಗಕ್ಕೂ ಸಲ್ಲುವ ಸಿನಿಮಾವಾಗಿದ್ದು, ಪ್ರೇಕ್ಷಕ ಇಷ್ಟಪಡುತ್ತಾನೆಂಬ ವಿಶ್ವಾಸವಿದೆ ಎಂಬುದು ಶ್ರೇಯಸ್ ಮಾತು. ನಾಯಕಿ ನಿಶ್ವಿಕಾ ನಾಯ್ಡು ಕೂಡಾ ಈ ಸಿನಿಮಾ ಬಗ್ಗೆ ಎಗ್ಸೈಟ್ ಆಗಿದ್ದಾರೆ. ಈ ವರ್ಷ ಬಿಡುಗಡೆಯಾಗುತ್ತಿರುವ ಅವರ ಮೊದಲ ಸಿನಿಮಾವಿದು. ಉಳಿದಂತೆ ನಿರ್ಮಾಪಕ ರಮೇಶ್ ಸೇರಿದಂತೆ ಚಿತ್ರತಂಡ ಅನುಭವ ಹಂಚಿಕೊಂಡಿತು.