ರಿಲೀಸ್‌ಗೂ ಮೊದಲು ರಾಷ್ಟ್ರೀಯ ಗೌರವ ಪಡೆದುಕೊಂಡ ಹಾಗೂ ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್‌ಗೆ ಆಯ್ಕೆಯಾದ ಅಭಯಸಿಂಹ ನಿರ್ದೇಶನದ “ಪಡ್ಡಾಯಿ’ ಚಿತ್ರ ಕುಡ್ಲದಲ್ಲೂ ಹೊಸ ಭರವಸೆ ಮೂಡಿಸಿದೆ.
ಇತ್ತೀಚೆಗೆ ನಗರದ ಬಿಗ್ ಸಿನೆಮಾಸ್‌ನಲ್ಲಿ ಪ್ರೀಮಿಯರ್ ಶೋ ನಡೆಸುವ ಮೂಲಕ ಪಡ್ಡಾಯಿಯನ್ನು ಕರಾವಳಿಗೆ ಪರಿಚಯಿಸುವ ಕೆಲಸ ನಡೆಸಲಾಗಿದೆ. ಹೆಚ್ಚು ಕಡಿಮೆ ಮುಂದಿನ ತಿಂಗಳಿನಲ್ಲಿ ಸಿನೆಮಾ ಕರಾವಳಿಯಲ್ಲಿ ತೆರೆ ಕಾಣುವ ನಿರೀಕ್ಷೆ ಇದೆ.
ಮುಖಂಡರೊಬ್ಬರ ಮನೆಯಲ್ಲಿ ಕೆಲಸಕ್ಕಿದ್ದ ಆಳು, ದನಿಯ ಹಾಗೂ ತನ್ನ ಪತ್ನಿಯ ಮೂಲಕ ಹೇಗೆ ಬದಲಾಗುತ್ತಾನೆ ಹಾಗೂ ಸಮಾಜ ಈ ಬೆಳವಣಿಗೆಯನ್ನು ಹೇಗೆ ಸ್ವೀಕರಿಸುತ್ತದೆ ಎಂಬ ನೆಲೆಯಿಂದ “ಅತಿ ಆಸೆ ಗತಿ ಕೇಡು’ ಎಂಬ ಜಾಣ್ಮೆಯ ಉತ್ತರವನ್ನು ಸಿನೆಮಾದ ಮೂಲಕ ನೀಡಲಾಗಿದೆ.
ಕಡಲ ಮಧ್ಯದ ಅಪರೂಪದ ದೃಶ್ಯಗಳು, ಯಕ್ಷಗಾನ, ಭೂತಾರಾಧನೆ ಪಡ್ಡಾಯಿಗೆ ಜೀವಕಲೆ ನೀಡಿದೆ. ಮೋಹನ್ ಶೇಣಿ, ಬಿಂದು ರಕ್ಷಿದಿ, ಗೋಪಿನಾಥ್ ಭಟ್, ಚಂದ್ರಹಾಸ್ ಉಳ್ಳಾಲ್ ಸಹಿ ತ ಎಲ್ಲರ ಅಭಿನಯವೂ ಪ್ರಬುದ್ಧವಾಗಿ ಮೂಡಿಬಂದಿದೆ.
“ಏರೆಗಾವುಯೇ ಕಿರಿಕಿರಿ’ ಡೈಲಾಗನ್ನು ಕೆಲವು ಬಾರಿ ಕೆಲವು ಜನರಿಂದ ಕೇಳಿರಬಹುದು. ಸತೀಶ್ ಬಂದಳೆ ಅವರ ಈ ಡೈಲಾಗ್ ಅಷ್ಟರ ಮಟ್ಟಿಗೆ ಫೇಮಸ್ ಆಗಿತ್ತು. ವಿಶೇಷವೆಂದರೆ ಇದೇ ಡೈಲಾಗ್‌ನಡಿಯಲ್ಲಿ ಈಗ ಸಿನೆಮಾ ಮಾಡಲು ಚಿತ್ರತಂಡ ನಿರ್ಧರಿಸಿ, ಮುಹೂರ್ತ ಕೂಡ ಮುಗಿಸಿದೆ. ವಿವಿಧ ಭಾಷೆಗಳ 700ಕ್ಕೂ ಅಧಿಕ ಸಿನೆಮಾಗಳಿಗೆ ಸಾಹಸ ನಿರ್ದೇಶನ ಮಾಡಿರುವ, ತುಳು, ಹಿಂದಿ ಸಿನೆಮಾ ನಿರ್ದೇಶಿಸಿರುವ ಸಾಹಸ ನಿರ್ದೇಶಕ ರಾಮ್ ಶೆಟ್ಟಿ ಅವರೇ, ಏರೆಗಾವುಯೆ ಕಿರಿ ಕಿರಿ ಹೇಳುತ್ತಿದ್ದಾರೆ. ವೇಗಾಸ್ ಫಿಲಂ ಪ್ರೊಡಕ್ಷನ್ ಮುಂಬಯಿ ನಿರ್ಮಾಣದ “ಏರೆಗಾವುಯೆ ಕಿರಿಕಿರಿ’ ಚಿತ್ರದ ಮುಹೂರ್ತ ಇತ್ತೀಚೆಗೆ ಬ್ರಹ್ಮಾವರದಲ್ಲಿ ನಡೆದಿತ್ತು.
ವಿ. ಮನೋಹರ ಸಂಗೀತ, ಮಾಸ್ ಮಾದ ಸಾಹಸ, ಮದನ್ ಹರಿಣಿ ನೃತ್ಯ ಸಿನೆಮಾಕ್ಕಿದ್ದು, ಹಿಂದಿ ಚಿತ್ರರಂಗದ ಹಲವು ತಂತ್ರಜ್ಞರು ಇದರಲ್ಲಿ ಕೆಲಸ ಮಾಡಲಿದ್ದಾರೆ. ಕೆಲವೇ ತಿಂಗಳಿನಲ್ಲಿ ಇದರ ಶೂಟಿಂಗ್ ಆರಂಭಿಸಲು ನಿರ್ಧರಿಸಲಾಗಿದೆ.