ಬಹುತೇಕ ಎಲ್ಲರ ಜೀವನದಲ್ಲೂ “ಪದವಿ ಪೂರ್ವ’ದ ದಿನಗಳು ಮರೆಯಲಾರದಂತಿರುತ್ತವೆ. ಅದರಲ್ಲೂ ನೀವೇನಾದರೂ 90ರ ದಶಕದಲ್ಲಿ “ಪದವಿ ಪೂರ್ವ’ದ ದಿನಗಳನ್ನು ಕಳೆದಿದ್ದೇ ಆಗಿದ್ದರೆ, ನೀವು ಅದೆಷ್ಟೋ ಬದಲಾವಣೆಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿರುತ್ತೀರಿ. ಅತ್ತ ಹಳೆಯದೂ ಅಲ್ಲದ, ಇತ್ತ ಅತ್ಯಾಧುನಿಕವೂ ಅಲ್ಲದ ಪರಿವರ್ತನೆಯ ಕಾಲಘಟ್ಟವದು. ಇಂಥದ್ದೊಂದು ಕಾಲಘಟ್ಟವನ್ನು ಮತ್ತೂಮ್ಮೆ ತೆರೆಮೇಲೆ ನೆನಪಿಸುವಂತಿದೆ ಈ ವಾರ ತೆರೆಗೆ ಬಂದಿರುವ “ಪದವಿ ಪೂರ್ವ’ ಚಿತ್ರ.
ಇನ್ನು “ಪದವಿ ಪೂರ್ವ’ ಸಿನಿಮಾದ ಕಥಾಹಂದರದ ಬಗ್ಗೆ ಹೇಳುವುದಾದರೆ, ಆಗಷ್ಟೇ ಪಿಯುಸಿಗೆ ಪ್ರವೇಶಿಸಿರುವ ಪೀಪಿ ನವೀನನಿಗೆ (ಪೃಥ್ವಿ) ದೋಸ್ತೀನೆ ಆಸ್ತಿ. ತಾನಾಯಿತು, ತನ್ನ ಫ್ರೆಂಡ್ಸ್ ಆಯ್ತು ಅಂತ ಲವಲವಿಕೆಯಿಂದಿರುವ ನವೀನನ “ಪದವಿ ಪೂರ್ವ’ ದಿನಗಳು ಹೇಗಿರುತ್ತದೆ ಎನ್ನುವುದರ ಸುತ್ತ ಇಡೀ ಸಿನಿಮಾ ಸಾಗುತ್ತದೆ. “ಫ್ರೆಂಡ್ಸ್ ಇದ್ರೇನೆ ಜೀವನ..’ ಎನ್ನುವ ಸ್ನೇಹಜೀವಿ ನವೀನ ಸ್ನೇಹಕ್ಕಾಗಿ ಏನೆಲ್ಲ ಮಾಡುತ್ತಾನೆ, ಅದಕ್ಕೆ ದೋಸ್ತಿಗಳ ಸಾಥ್ ಹೇಗಿರುತ್ತದೆ ಎನ್ನುವುದನ್ನು ಒಂದಷ್ಟು ತರಲೆ, ತುಂಟಾಟಗಳ, ಅಳು-ನಗು ಎಲ್ಲದರ ಜೊತೆ ನವನವೀನವಾಗಿ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಹರಿಪ್ರಸಾದ್ ಜಯಣ್ಣ. ನಮ್ಮ ನಡುವೆಯೇ ನಡೆದಿರುವಂಥ ಒಂದು ಕಥೆಯನ್ನು ಮನಮುಟ್ಟುವಂತೆ ಸಿನಿಮಾದ ಮೂಲಕ ಹೇಳುವಲ್ಲಿ “ಪದವಿ ಪೂರ್ವ’ ಚಿತ್ರತಂಡ ಯಶಸ್ವಿಯಾಗಿದೆ.
“ಪದವಿ ಪೂರ್ವ’ ಕಲಾವಿದರ ಬಗ್ಗೆ ಹೇಳುವುದಾದರೆ, ನವ ಪ್ರತಿಭೆ ಪೃಥ್ವಿ ಶಾಮನೂರು ಚೊಚ್ಚಲ ಸಿನಿಮಾದಲ್ಲೇ ಗಮನ ಸೆಳೆಯುತ್ತಾರೆ. ಉಳಿದಂತೆ ಅಂಜಲಿ, ಯಶಾ ಸೇರಿದಂತೆ ಅನೇಕ ಹೊಸ ಪ್ರತಿಭೆಗಳು ಸಿನಿಮಾದ ಉದ್ದಕ್ಕೂ ಕಾಣಿಸಿಕೊಂಡಿದ್ದು, ಬಹುತೇಕರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹೊಸ ಕಲಾವಿದರಿಗೆ ಶರತ್ ಲೋಹಿತಾಶ್ವ, ರಂಗಾಯಣ ರಘು ಅವರಂಥ ಅನುಭವಿಗಳೂ ಸಾಥ್ ನೀಡಿದ್ದು ಪಾತ್ರಗಳ ತೂಕವನ್ನು ಇನ್ನಷ್ಟು ಹೆಚ್ಚಿಸಿದೆ.
“ಪದವಿ ಪೂರ್ವ’ದ ಎರಡು-ಮೂರು ಹಾಡುಗಳು ಥಿಯೇಟರ್ ಹೊರಗೂ ಗುನುಗುವಂತಿದೆ. ಚಿತ್ರದಲ್ಲಿ ಕಾಣುವ ಸುಂದರ ಲೊಕೇಶನ್ಸ್, ಛಾಯಾಗ್ರಹಣ ಮತ್ತು ಸಂಕಲನ ಕಾರ್ಯ ತಾಂತ್ರಿಕವಾಗಿ ತೆರೆಮೇಲೆ ಚಿತ್ರವನ್ನು ಅಂದಗಾಣಿಸುವಂತೆ ಮಾಡಿವೆ. ಒಟ್ಟಾರೆ ಆಡಿಯೋ-ವಿಡಿಯೋ ಕ್ಯಾಸೆಟ್, ಬೈಸಿಕಲ್ ಸುತ್ತಾಟ, ಕ್ಯಾಂಪಸ್ ಕಿರಿಕ್, ಕೆರಿಯರ್ ಕನಸು ಹೀಗೆ 90ರ ದಶಕದ “ಪದವಿ ಪೂರ್ವ’ ಜೀವನವನ್ನು ಒಮ್ಮೆ ರಿವೈಂಡ್ ಮಾಡಿ ನೋಡುವಂತಿರುವ ಸಿನಿಮಾವನ್ನು ವಾರಾಂತ್ಯದಲ್ಲಿ ಒಮ್ಮೆ ನೋಡಿ ಬರಲು ಅಡ್ಡಿಯಿಲ
ರವಿಪ್ರಕಾಶ್ ರೈ