ಮಂಡ್ಯ: ರೈತರಿಗೆ ಸರ್ಕಾರ ಸಬ್ಸಿಡಿ, ಪರಿಹಾರ, ಪ್ಯಾಕೇಜ್ ನೀಡಿದರೆ ರೈತರ ಉದ್ಧಾರ ಸಾಧ್ಯವಿಲ್ಲ. ಅವರ ಜೊತೆ ನಿಂತು ಬದಲಾವಣೆಗೆ ಮುಂದಾಗಬೇಕು. ರೈತರ ಜೊತೆಗಿದ್ದು, ಅವರ ಮನೆ ಬಾಗಿಲಿಗೆ ಸರ್ಕಾರ ಕೊಂಡೊಯ್ಯುವ ಉದ್ದೇಶವಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ನಗರದ ಮಾಜಿ ಸಂಸದ ಜಿ.ಮಾದೇಗೌಡ ಅವರ ಮನೆಗೆ ಭೇಟಿ ನೀಡಿ, ಅವರ ಅಭಿನಂದಿಸಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಒಂದು ದಿನ ರೈತರ ಜೊತೆ ಇದ್ದು, ಚರ್ಚೆ ನಡೆಸಿ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುವುದು. ರೈತರ ಆತ್ಮಹತ್ಯೆಗಳು ನಡೆಯುತ್ತಿವೆ. ಇದರಿಂದ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತದೆ. ನಾವು ನಿರಂತರ ದೈನಂದಿನ ಚಟುವಟಿಕೆಗಳಲ್ಲಿ ಬದಲಾವಣೆ ತರುವಂಥ ಕೆಲಸ ಮಾಡಬೇಕಾಗಿದೆ ಎಂದರು.
ಮಂಡ್ಯ ಜಿಲ್ಲೆ ನೀರಾವರಿ ಪ್ರದೇಶವಿದ್ದು, ಕೃಷಿ ಚಟುವಟಿಕೆಗಳು ನಡೆಯುತ್ತಿದ್ದರೂ ರೈತರ ಸ್ಥಿತಿ ಇನ್ನೂ ಸುಧಾರಿಸಿಲ್ಲ. ಕೋಲಾರ ಜಿಲ್ಲೆಗೆ ಹೋಲಿಸಿದರೆ ಆತ್ಮಹತ್ಯೆ ಹೆಚ್ಚಿದೆ. ಸಮಗ್ರ ಕೃಷಿ ನೀತಿ ಇನ್ನೂ ಅಳವಡಿಸಿಕೊಳ್ಳದಿರುವುದು ರೈತರ ಆರ್ಥಿಕ ಸ್ಥಿತಿ ಹದಗೆಡಲು ಕಾರಣವಾಗಿದೆ. ರೈತರಿಗೆ ಆತ್ಮಸ್ಥೈರ್ಯ ತುಂಬಿ, ಮನಸ್ಥಿತಿ ಗಟ್ಟಿಗೊಳಿಸುವ ಹಾಗೂ ರೈತರ ಜೊತೆ ಸರ್ಕಾರ ಇದೆ ಎಂಬುದನ್ನು ರೈತರಿಗೆ ಮನದಟ್ಟು ಮಾಡಬೇಕಾಗಿದೆ. ಇಡೀ ರಾಜ್ಯಾದ್ಯಂತ ಈ ಕಾರ್ಯಕ್ರಮ ನಡೆಸಲಾಗುವುದು. ಮೊದಲು ಮಂಡ್ಯ ಜಿಲ್ಲೆಯಿಂದಲೇ ಶುರುವಾಗಲಿದೆ ಎಂದು ಹೇಳಿದರು.
ಬಿಜೆಪಿ ಕಚೇರಿಗೆ ಭೇಟಿ: ಬಿಜೆಪಿ ಕಚೇರಿಗೆ ಭೇಟಿ ನೀಡಿದ ಬಿ.ಸಿ.ಪಾಟೀಲ್, ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು. ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಡಾ.ಸಿದ್ದರಾಮಯ್ಯ, ಜಿಲ್ಲಾಧ್ಯಕ್ಷ ಕೆ.ಜೆ.ವಿಜಯಕುಮಾರ್, ಜಿಪಂ ಸದಸ್ಯ ಶಿವಣ್ಣ, ಸದಾನಂದ, ಪ.ನಾ.ಸುರೇಶ್ ಮತ್ತಿತರರಿದ್ದರು.