Advertisement

ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ಗೆ ತಡೆಗೋಡೆ

11:14 PM Apr 28, 2020 | Sriram |

ವಿಶೇಷ ವರದಿಮಂಗಳೂರು: ಕಳೆದ ಮಳೆಗಾಲದಲ್ಲಿ ತ್ಯಾಜ್ಯ ಕುಸಿದು ಅನಾಹುತ ಸಂಭವಿಸಿದ ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ಗೆ ತಡೆಗೋಡೆ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಆದರೆ ಈ ಕಾಮಗಾರಿ ಮಳೆಗಾಲದೊಳಗೆ ಪೂರ್ಣಗೊಳ್ಳುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಳೆದ ಬಾರಿ ಉಂಟಾದ ರೀತಿಯ ಅವಘಡ ಮರುಕಳಿಸುವ ಆತಂಕವೂ ಸ್ಥಳೀಯರಲ್ಲಿದೆ.

Advertisement

ಕಳೆದ ಮಳೆಗಾಲದಲ್ಲಿ ಸುಮಾರು 2 ಕಿ.ಮೀ. ನಷ್ಟು ಉದ್ದಕ್ಕೆ ಭಾರೀ ತ್ಯಾಜ್ಯ ರಾಶಿಯೇ ಜಾರಿ ಬಂದ ಪರಿಣಾಮ ಇಲ್ಲಿನ ಸುಮಾರು 27 ಮನೆಯವರಿಗೆ ತೊಂದರೆಯಾಗಿತ್ತು. 2 ಎರಡು ಮನೆಗಳು, ದೈವಸ್ಥಾನ, ನಾಗಬನ ತ್ಯಾಜ್ಯರಾಶಿಯಿಂದ ಆವರಿಸಿತ್ತು. ತೋಟಗಳು ನಾಶವಾಗಿದ್ದವು. ಅನೇಕ ಮಂದಿ ಬದುಕಿನ ನೆಲೆ ಕಳೆದುಕೊಳ್ಳಬೇಕಾಯಿತು. ಸರಕಾರ ಸಂತ್ರಸ್ತರ ಪುನರ್ವಸತಿಗೆ 8 ಕೋ.ರೂ. ಬಿಡುಗಡೆ ಮಾಡಿತ್ತು. ಅಧಿಕಾರಿಗಳನ್ನೊಳಗೊಂಡ ಹಲವು ತಂಡಗಳು ಸ್ಥಳಕ್ಕಾಮಿಗಿಸಿ ಪರಿಶೀಲನೆ ನಡೆಸಿದ್ದವು. ಕುಸಿದ ತ್ಯಾಜ್ಯವನ್ನು ಮತ್ತೆ ರಾಶಿಗೆ ಹಾಕುವ ಯೋಜನೆಗಳೂ ಸಿದ್ಧವಾಗಿದ್ದವು. ಆದರೆ ಸಮಸ್ಯೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಪರಿಹಾರವಾಗಿಲ್ಲ. ಇದೀಗ ಮತ್ತೆ ಮಳೆಗಾಲ ಸಮೀಪಿಸಿದೆ. ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರಾದರೂ ಮಳೆಗಾಲದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಕಳೆದ ಮಳೆಗಾಲದಲ್ಲಿ ಕುಸಿದ ತ್ಯಾಜ್ಯಕ್ಕಿಂತ ದುಪ್ಪಟ್ಟು ತ್ಯಾಜ್ಯ ರಾಶಿ ಪಚ್ಚನಾಡಿಯಲ್ಲಿದೆ. ಒಂದು ವೇಳೆ ಈ ಬಾರಿ ಕುಸಿತ ಆರಂಭವಾದರೆ ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಅನಾಹುತ ಉಂಟಾಗಬಹುದು ಎಂಬ ಆತಂಕ ಸ್ಥಳೀಯರದ್ದು .

ಕಾರ್ಮಿಕರ ಕೊರತೆ
ತಡೆಗೋಡೆ ನಿರ್ಮಾಣ ಕಾಮಗಾರಿ ಆರಂಭಗೊಂಡ ಅನಂತರ ಲಾಕ್‌ಡೌನ್‌ನಿಂದಾಗಿ ಕಾರ್ಮಿಕರ ಕೊರತೆ ಉಂಟಾಯಿತು. ಇದರಿಂದಾಗಿ ಸ್ವಲ್ಪ ಹಿನ್ನೆಡೆಯಾಗಿದೆ. ಸದ್ಯ ಕಾಮಗಾರಿ ಮುಂದುವರೆದಿದೆ ಎಂದು ಮನಪಾ ಅಧಿಕಾರಿಗಳು ತಿಳಿಸಿದ್ದಾರೆ.

 ಮಳೆಗಾಲದೊಳಗೆ ಕಾಮಗಾರಿ ಪೂರ್ಣ
ಲಾಕ್‌ಡೌನ್‌ನಿಂದಾಗಿ ಸ್ವಲ್ಪ ಹಿನ್ನಡೆಯಾಯಿತು. ಮುಖ್ಯವಾಗಿ ಕಾರ್ಮಿಕರ ಕೊರತೆಯಿಂದ ತೊಡಕಾಯಿತು. ಪಾಲಿಕೆ ಅಧಿಕಾರಿಗಳು ಕೂಡ ಕೋವಿಡ್-19 ನಿಯಂತ್ರಣ, ಜಾಗೃತಿಯಲ್ಲಿ ತೊಡಗಿಸಿಕೊಂಡಿದ್ದರು. ತಡೆಗೋಡೆ ನಿರ್ಮಾಣ ಕಾಮಗಾರಿ ಒಟ್ಟು ಅಂದಾಜು 4 ಕೋ.ರೂ. ವೆಚ್ಚದಲ್ಲಿ ನಡೆಯುತ್ತಿದ್ದು ಮಳೆಗಾಲದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
-ಅಜಿತ್‌ ಕುಮಾರ್‌ ಹೆಗ್ಡೆ ಶಾನಾಡಿ
ಆಯುಕ್ತ, ಮನಪಾ

Advertisement

Udayavani is now on Telegram. Click here to join our channel and stay updated with the latest news.

Next