Advertisement
ತ್ಯಾಜ್ಯ ಜರಿದು ಬಂದ ಭಾಗದ ಒಂದು ಕಡೆಯಲ್ಲಿ ಸೂಕ್ತ ತೋಡಿನ ವ್ಯವಸ್ಥೆ ಮಾಡಿದ್ದರೂ ತ್ಯಾಜ್ಯದ ಮಧ್ಯೆ ರಸ್ತೆಗಾಗಿ ನಿಗದಿಪಡಿಸಿದ ಜಾಗದಲ್ಲಿ ಈಗ ತ್ಯಾಜ್ಯ ನೀರು ನಿಂತು ಭಾರೀ ಅಪಾಯದ ಮುನ್ಸೂಚನೆ ನೀಡುತ್ತಿದೆ. ಒಂದೆಡೆ ತ್ಯಾಜ್ಯ ನೀರು ಹಾಗೂ ಇನ್ನೊಂದೆಡೆ ಜರಿದು ಬಂದ ತ್ಯಾಜ್ಯ ಇದೀಗ ಸ್ಥಳೀಯರಲ್ಲಿ ಮತ್ತೆ ಆತಂಕಕ್ಕೆ ಕಾರಣವಾಗಿದೆ.
ಕಳೆದ ವರ್ಷ ತ್ಯಾಜ್ಯ ರಾಶಿ ಜರಿದಾಗ 5,000ಕ್ಕೂ ಅಧಿಕ ಅಡಿಕೆ-ತೆಂಗಿನ ಮರಗಳು ಅದರಡಿ ಸಿಲುಕಿ ನಾಶವಾಗಿದ್ದವು. ಆ ಬಳಿಕ ತ್ಯಾಜ್ಯ ರಾಶಿಯಿಂದ ನಿರಂತ ಹರಿದು ಬರುವ ಕಲುಷಿತ ನೀರಿನಿಂದಾಗಿ ಸಮೀಪದ ತೋಟಗಳ 400ರಷ್ಟು ಅಡಿಕೆ ಮರಗಳು ಮತ್ತೆ ಜೀವ ಕಳೆದುಕೊಂಡಿವೆ. ಜತೆಗೆ ತ್ಯಾಜ್ಯಮಿಶ್ರಿತ ನೀರು ಪಕ್ಕದ ತೋಡಿನಲ್ಲಿ ಹರಿದು ನದಿಯನ್ನು ಸೇರುತ್ತಿದೆ.
Related Articles
ಮಂದಾರದಲ್ಲಿ ಸಂಪರ್ಕ ರಸ್ತೆಯೊಂದಿತ್ತು. ಆದರೆ ತ್ಯಾಜ್ಯ ರಾಶಿ ಜರಿದಾಗ ಮುಚ್ಚಿಹೋಗಿತ್ತು. ಸ್ಥಳೀಯರಿಗೆ ಪರ್ಯಾಯ ರಸ್ತೆ ಇರಲಿಲ್ಲ. ಖಾಸಗಿ ರಸ್ತೆಯನ್ನು ಆಶ್ರಯಿಸಬಹುದಾದರೂ ಅನುಮತಿ ಪಡೆಯುವ ಬಗ್ಗೆ ಜಿಲ್ಲಾಡಳಿತ/ಪಾಲಿಕೆ ತಲೆಕೆಡಿಸಿಕೊಳ್ಳಲಿಲ್ಲ. ಬಳಿಕ ತ್ಯಾಜ್ಯರಾಶಿಯ ಮೇಲೆಯೇ ಮಣ್ಣು, ಕೊಂಚ ಡಾಮರು ಹಾಕಿ ತಾತ್ಕಾಲಿಕ ರಸ್ತೆ ಮಾಡಲಾಗಿದೆ. ದ್ವಿಚಕ್ರ, ಕಾರು, ಜೀಪು ಹೋಗಲು ಸದ್ಯಕ್ಕೇನು ಸಮಸ್ಯೆ ಇಲ್ಲ. ಆದರೆ ಅಡಿಯಲ್ಲಿ ತ್ಯಾಜ್ಯವಿರುವ ಕಾರಣ ಮತ್ತೆ ಅಪಾಯ ಆಗಬಹುದಾ ಎಂಬ ಭೀತಿ ಇದ್ದೇ ಇದೆ.
Advertisement
2 ಕಿ.ಮೀ. ಉದ್ದ ತ್ಯಾಜ್ಯ ರಾಶಿ!
ಮಂದಾರದಲ್ಲಿರುವುದು 27 ಮನೆಗಳು ಮಾತ್ರ. ಅಕ್ಕಪಕ್ಕದಲ್ಲಿಯೇ ಈ ಮನೆಗಳಿದ್ದು, ಮಧ್ಯದಲ್ಲಿ ಅಡಿಕೆ-ತೆಂಗಿನ ತೋಟಗಳಿತ್ತು. ದೈವಸ್ಥಾನ ಹಾಗೂ ನಾಗಬನವಿತ್ತು. ನಡುವೆ ರಸ್ತೆಯಿತ್ತು. ಆದರೆ ಈಗ ಇಲ್ಲಿ ಕಾಣಿಸುತ್ತಿರುವುದು ತ್ಯಾಜ್ಯರಾಶಿ. ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಿಂದ ಜರಿದು ಬಂದ ತ್ಯಾಜ್ಯ ಕಳೆದ ಆಗಸ್ಟ್ ನಲ್ಲಿ ಮಂದಾರ ಪರಿಸರದ 2 ಕಿ.ಮೀ. ವ್ಯಾಪ್ತಿಯಲ್ಲಿ ಪಸರಿಸಿದೆ. ಅದೂ ಕೂಡ 100 ಮೀಟರ್ ಅಗಲದಲ್ಲಿ. ವಿಶೇಷವೆಂದರೆ, 50 ಮೀ. ಎತ್ತರದಲ್ಲಿ 2 ಕಿ.ಮೀ. ವ್ಯಾಪ್ತಿಯಲ್ಲಿ ತ್ಯಾಜ್ಯ ರಾಶಿಯಿದೆ. ಒಂದು ಮನೆಯನ್ನೂ ಮೀರಿಸುವಷ್ಟು ಎತ್ತರದಲ್ಲಿ ತ್ಯಾಜ್ಯರಾಶಿ ಜಾರಿ ಹೋಗಿತ್ತು. ಮೂರು ಮನೆಗಳು ಈಗಲೂ ಅಪಾಯದ ಭೀತಿಯಲ್ಲಿವೆ.