ಮಂಗಳೂರು: ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಾಣಿಸಿಕೊಂಡಿರುವ ಬೆಂಕಿಯಿಂದ ಉಂಟಾದ ಹೊಗೆ ಮಂಗಳೂರು ನಗರದ ವರೆಗೂ ವ್ಯಾಪಿಸಿದೆ. ಮಂಗಳವಾರ ರಾತ್ರಿ ನಗರದ ವಿವಿಧೆಡೆ ಮಂಜು ಕವಿದಂತೆ ಹೊಗೆ ಆವರಿಸಿತ್ತು. ಜತೆಗೆ ಘಾಟು ವಾಸನೆಯೂ ಇತ್ತು. ಕುಂಟಿಕಾನ, ದೇರೆಬೈಲ್, ಕೊಂಚಾಡಿ, ಕೆಪಿಟಿ ಮೊದಲಾದ ಕಡೆ ಹೊಗೆ ವಾತಾವರಣ, ವಾಸನೆ ಹೆಚ್ಚಿತ್ತು.
ಇದರಿಂದಾಗಿ ಸಾರ್ವಜನಿಕರು ಕೆಲ ಕಾಲ ಆತಂಕಕ್ಕೆ ಒಳಗಾಗಿದ್ದರು. ಅಗ್ನಿ ಶಾಮಕ ಠಾಣೆಗೂ ಕರೆ ಮಾಡಿ ವಿಚಾರಿಸಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಗ್ನಿ ಶಾಮಕ ದಳದ ಅಧಿಕಾರಿಗಳು, ರಾತ್ರಿ ಹೊತ್ತು ಗಾಳಿ ಪಶ್ಚಿಮ ದಿಕ್ಕಿಗೆ ಬೀಸುವುದರಿಂದ ಗಾಳಿಯೊಂದಿಗೆ ಹೊಗೆ ಆವರಿಸಿಕೊಂಡಿದೆ. ಜತೆಗೆ ಗಾಳಿಯ ವೇಗವೂ ಎಂದಿಗಿಂತ ಹೆಚ್ಚಿದೆ. ಪಚ್ಚನಾಡಿಯಲ್ಲಿ ಈಗಲೂ ಹೊಗೆ ಏಳುತ್ತಿದ್ದು, ನಂದಿಸುವ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಹೆಚ್ಚುವರಿ ಜೆಸಿಬಿಗಳನ್ನು ಬಳಸಿ ತ್ಯಾಜ್ಯದ ಮೇಲೆ ಮಣ್ಣು ಹಾಕಿ ಕೆಂಡವನ್ನು ನಂದಿಸುವ ಕೆಲಸವೂ ನಡೆಯುತ್ತಿದೆ.
ಇದನ್ನೂ ಓದಿ: ಬೆಳ್ತಂಗಡಿ: ನದಿಯಲ್ಲಿ ಕುಳಿತ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ