Advertisement
ಬುಧವಾರ ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ತಜ್ಞರು, ಪ್ರಾಚಾರ್ಯರ ಸಂಘ, ಉಪನ್ಯಾಸಕರ ಸಂಘದ ಪ್ರತಿನಿಧಿಗಳ ಸಮತಿ ಸಭೆ ಕರೆದು ಚರ್ಚಿಸಬೇಕು. ಈ ಆತುರದ ನಿರ್ಧಾರದ ವಿರುದ್ಧ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
Related Articles
Advertisement
ಪಠ್ಯ ಕ್ರಮದ ಬೋಧನೆ ಮುಗಿದಿಲ್ಲ, ಪ್ರಶ್ನೆ ಪತ್ರಿಕೆ ಸಿದ್ಧತೆ, ಮೌಲ್ಯಮಾಪನ, ಪೂರ್ವ ಸಿದ್ಧತೆ ಇಲ್ಲ, ಉಪನ್ಯಾಸಕರು, ತಜ್ಞರೊಂದಿಗೆ ಚರ್ಚಿಸದೇ ಮಧ್ಯಂತರ ಪರೀಕ್ಷೆ ಘೋಷಣೆ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಪ.ಪೂ.ಶಿಕ್ಷಣ ಇಲಾಖೆ ಅಧಿಕಾರಿಗಳ ವರ್ತನೆ, ನಡವಳಿಕೆಗಳು ಸರ್ವಾಧಿಕಾರಿ ಧೋರಣೆಯಿಂದ ಕೂಡಿವೆ. ಈ ಇಲಾಖೆ ಕರ್ನಾಟಕ ಸರ್ಕಾರದ ಅಧೀನ ಇಲಾಖೆಯೋ ಅಥವಾ ಸ್ವಾಯತ್ತ ಸಂಸ್ಥೆಯೋ ಎಂಬುದನ್ನು ಸರ್ಕಾರ, ಮುಖ್ಯಮಂತ್ರಿಗಳು, ಶಿಕ್ಷಣ ಇಲಾಖೆ ಸಚಿವರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ಮಂಗಳೂರು, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತಡವಾಗಿ ಕಾಲೇಜುಗಳು ಆರಂಭಗೊಂಡಿವೆ. ಕೊರತೆ ಇರುವ ಉಪನ್ಯಾಸಕರ ನೇಮಕವಾಗಿಲ್ಲ, ಅತಿಥಿ ಉಪನ್ಯಾಸಕರ ನಿಯೋಜನೆಯೂ ಆಗಿಲ್ಲ. ಹೀಗೆ ಸಾಲು ಸಾಲು ಸಮಸ್ಯೆಗಳನ್ನು ಇರಿಸಿಕೊಂಡು ಪದವಿ ಪೂರ್ವ ಶಿಕ್ಷಣ ಇಲಾಖೆ ಮಧ್ಯಂತರ ಪರೀಕ್ಷೆ ನಡೆಸುವ ನಿರ್ಧಾರ ಮಕ್ಕಳ ಭವಿಷ್ಯದೊಂದಿಗೆ ಚಲ್ಲಾಟ ಆಡಲು ಮುಂದಾದುದಕ್ಕೆ ಸಾಕ್ಷಿ ಎಂದು ಕಿಡಿ ಕಾರಿದರು.
ಪದವಿ ಪೂರ್ವ ದ್ವಿತೀಯ ವರ್ಷದ ಶಿಕ್ಷಣ ಮಕ್ಕಳ ಶೈಕ್ಷಣಿಕ ಜೀವನ ಮಹತ್ವದ ಘಟ್ಟ. ಇಂಥ ವಿಷಯದಲ್ಲಿ ಇಲಾಖೆಯ ಅಧಿಕಾರಿಗಳು ಸರ್ವಾಧಿಕಾರಿ ವರ್ತನೆ ಮೂಲಕ ಏಕಪಕ್ಷೀಯ ಸುತ್ತೋಲೆ ಹೊರಡಿಸಿದ್ದಾರೆ ಎಂದು ಹರಿಹಾಯ್ದರು.
ಕಳೆದ 10 ವರ್ಷಗಳಲ್ಲಿ ಪದವಿ ಪೂರ್ವ ಇಲಾಖೆಯಲ್ಲಿ 18 ನಿರ್ದೇಶಕರು ಬದಲಾಗಿದ್ದಾರೆ. ಇದು ಸದರಿ ಇಲಾಖೆ ಎಷ್ಟು ಅಧೋಗತಿಗೆ ತಲುಪಿದೆ ಎಂಬುದಕ್ಕೆ ಹಿಡಿದ ಕನ್ನಡಿ ಎಂದು ವಾಗ್ದಾಳಿ ನಡೆಸಿದರು.
ಕೂಡಲೇ ಸರ್ಕಾರ, ಮುಖ್ಯಮಂತ್ರಿ, ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆ ಸಚಿವರು ಪಿಯುಸಿ ಮಧ್ಯಂತರ ಪರೀಕ್ಷೆ ನಡೆಸುವ ನಿರ್ಧಾರ ತಡರದು, ಅಧಿಕಾರಿಗಳ ಅವೈಜ್ಞಾನಿಕ ನಡೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಪ.ಪೂ. ಕಾಲೇಜು ನೌಕರರ ಸಂಘದ ಅಧ್ಯಕ್ಷ ಎಸ್.ಎಸ್. ಗೌರಿ,ಪ.ಪೂ. ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಪ್ರೊ.ಎಂ.ಬಿ.ಹೆಬ್ಬಿ ಇತರರು ಉಪಸ್ಥಿತರಿದ್ದರು.