ಮಹಾತ್ಮಗಾಂಧಿಜೀ ಅವರ ಬಗ್ಗೆ ಈಗಾಗಲೇ ಕೆಲವು ಸಿನಿಮಾಗಳು ತೆರೆಗೆ ಬಂದಿದ್ದರೂ, ಗಾಂಧಿಜೀ ಅವರ ಬಾಲ್ಯವನ್ನು ಇಲ್ಲಿಯವರೆಗೆ ಯಾವ ಸಿನಿಮಾದಲ್ಲೂ ತೆರೆಮೇಲೆ ಕಟ್ಟಿಕೊಡುವ ಪ್ರಯತ್ನ ನಡೆದಿಲ್ಲ. ಈಗ ಗಾಂಧಿಜೀ ಅವರ ಬಾಲ್ಯವನ್ನು “ಮೋಹನದಾಸ’ ಚಿತ್ರದ ಮೂಲಕ ತೆರೆಮೇಲೆ ಹೇಳಲು ಹೊರಟಿದ್ದಾರೆ ಹಿರಿಯ ನಿರ್ದೇಶಕ ಪಿ. ಶೇಷಾದ್ರಿ.
ಹೌದು, 6 ವರ್ಷದಿಂದ 14 ವರ್ಷ ವಯಸ್ಸಿನ ಗಾಂಧಿಜೀ ಅವರ ಬಾಲುದ ಜೀವನದ ಮೇಲೆ “ಮೋಹನದಾಸ’ ಚಿತ್ರದಲ್ಲಿ ಬೆಳಕು ಚೆಲ್ಲಲಾಗಿದೆ. ಲೇಖಕ ಬೊಳುವಾರು ಮಹಮದ್ ಕುಂಞ ಅವರ “ಪಾಪು ಗಾಂಧಿ, ಬಾಪು ಗಾಂಧಿ ಆದಾ ಕಥೆ’ ಮತ್ತು ಮಹಾತ್ಮ ಗಾಂಧಿಯವರ ಆತ್ಮಚರಿತ್ರೆ “ಸತ್ಯದೊಂದಿಗೆ ನನ್ನ ಪ್ರಯೋಗಗಳು’ ಕೃತಿಗಳನ್ನು ಆಧರಿಸಿ, ಈ ಚಿತ್ರ ತಯಾರಾಗಿದೆ.
“ಮೋಹನದಾಸ’ ಚಿತ್ರದ ಬಗ್ಗೆ ಮಾತನಾಡುವ ಪಿ. ಶೇಷಾದ್ರಿ, “ಗಾಂಧಿ ಎಲ್ಲರಂತೆಯೇ ಹುಟ್ಟಿ, ಎಲ್ಲರಂತೆಯೇ ಬೆಳೆದ, ಒಬ್ಬ ಸಾಮಾನ್ಯ ಹುಡುಗ. ಅವರ ಬಾಲ್ಯ ಕೂಡ ಎಲ್ಲ ಮಕ್ಕಳ ಬಾಲ್ಯದಂತೆಯೇ ಇತ್ತು. ಅವರೂ ತಂಟೆ ಮಾಡುತ್ತಿದ್ದರು, ಹಠವಾದಿಯಾಗಿದ್ದರು, ಸುಳ್ಳು ಹೇಳುತ್ತಿದ್ದರು. ಓದಿನಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿದ್ದರು. ಜೊತೆಗೆ ಒಮ್ಮೆ ಸ್ನೇಹಿತರ ಒತ್ತಾಯದಿಂದ ಕುತೂಹಲಕ್ಕೆ ಮಣಿದು ಧೂಮಪಾನ ಮಾಡಿದ್ದರು, ಒಮ್ಮೆ ಮಾಂಸ ಸೇವಿಸಿದ್ದರು! ಇದೆಲ್ಲದರ ಜೊತೆಗೆ ಶ್ರವಣ ಮತ್ತು ಹರಿಶ್ಚಂದ್ರ ಮುಂತಾದ ಕಥೆಗಳಿಂದ ಪ್ರಭಾವಿತರಾಗಿ ತಮ್ಮ ಬದುಕನ್ನೇ ಬದಲಿಸಿಕೊಂಡರು. ಅದೆಲ್ಲವನ್ನೂ ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಸಾಮಾನ್ಯ ಮಗುವೊಂದು ಪರಿಪೂರ್ಣ ಮನುಷ್ಯನಾಗಿ ಬೆಳೆಯಲು, ಮಹಾತ್ಮನೆಂದು ಕರೆಸಿಕೊಳ್ಳಲು ಹೇಗೆ ಬದುಕಬೇಕು ಎಂಬುದನ್ನು “ಮೋಹನದಾಸ’ ಚಿತ್ರದಲ್ಲಿ ತೋರಿಸಿದ್ದೇವೆ’ ಎನ್ನುತ್ತಾರೆ.
ಇದನ್ನೂ ಓದಿ:‘ಪೊಗರು’ ನಿರ್ಮಾಪಕರ ತೆಕ್ಕೆಗೆ ‘ಕೋಟಿಗೊಬ್ಬ -3’
ಸುಮಾರು ಎರಡೂವರೆ ವರ್ಷಗಳ ಹಿಂದೆಯೇ ಈ ಚಿತ್ರದ ಚಿತ್ರೀಕರಣ ಆರಂಭಿಸಿದ್ದ ಪಿ. ಶೇಷಾದ್ರಿ, ಚಿತ್ರದ ಬಹುಭಾಗ ಚಿತ್ರೀಕರಣವನ್ನು ಗುಜರಾತಿನ ಪೋರಬಂದರ್, ರಾಜ್‌ಕೋಟ್ ಸೇರಿದಂತೆ ಗಾಂಧಿಜೀ ತನ್ನ ಬಾಲ್ಯವನ್ನು ಕಳೆದ ಸ್ಥಳಗಳಲ್ಲಿಯೇ ಚಿತ್ರೀಕರಿಸಿದ್ದಾರೆ.
ಆರು ವರ್ಷದ ಬಾಲಕನ ಪಾತ್ರವನ್ನು ಪರಮ್ ಸ್ವಾಮಿ ಮತ್ತು ಹದಿನಾಲ್ಕು ವರ್ಷದ ಬಾಲಕನ ಪಾತ್ರವನ್ನು ಸಮರ್ಥ ಅಭಿನಯಿಸಿದ್ದಾರೆ, ಉಳಿದಂತೆ ಶೃತಿ, ಅನಂತ್ ಮಹದೇವನ್, ದತ್ತಣ್ಣ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಕನ್ನಡದ ಜೊತೆಗೆ ಹಿಂದಿ ಮತ್ತು ಇಂಗ್ಲೀಷ್‌ನಲ್ಲೂ ತಯಾರಾಗಿರುವ “ಮೋಹನದಾಸ’ ಚಿತ್ರವನ್ನು ಇದೇ ಅಕ್ಟೋಬರ್ 2ರಂದು ಗಾಂಧಿ ಜಯಂತಿ ದಿನ ತೆರೆಗೆ ತರಲು ಪಿ. ಶೇಷಾದ್ರಿ ಮತ್ತು ಚಿತ್ರತಂಡ ನಿರ್ಧರಿಸಿದೆ.