Advertisement

ರೈತರ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದ ಕೇಂದ್ರದ ಬಿಜೆಪಿ ಸರಕಾರ: ಶಾಸಕ ಪಿ.ರಾಜೀವ್

03:49 PM Jul 29, 2021 | Team Udayavani |

ಬೆಂಗಳೂರು: ರೈತರ ಕಲ್ಯಾಣವು ನರೇಂದ್ರ ಮೋದಿ ಸರಕಾರದ ಪ್ರಥಮ ಆದ್ಯತೆಯಾಗಿದೆ. 2022ರ ಹೊತ್ತಿಗೆ ರೈತರ ಆದಾಯ ದ್ವಿಗುಣಗೊಳ್ಳಬೇಕು ಎಂಬ ಘೋಷಣೆ ನಮ್ಮ ಪ್ರಧಾನಿಯವರದು. ಈ ಆಶಯ ಈಡೇರಿಸಲು ಎರಡು ಕೃಷಿ ಕಾಯ್ದೆ ಜಾರಿ ಮತ್ತು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮೂಲಕ ರೈತರಿಗೆ ಸ್ವಾಭಿಮಾನವನ್ನು ಕೊಟ್ಟಿದೆ. ಕೇವಲ ದಲ್ಲಾಳಿಗಳ ಏಕಸ್ವಾಮ್ಯಕ್ಕೆ ಒಳಪಟ್ಟಿದ್ದ ಕೃಷಿ ಮಾರುಕಟ್ಟೆಗಳ ಸಂಕೋಲೆ ಬಿಡುಗಡೆಯಾಗಿದೆ. ದೇಶದ ಯಾವುದೇ ಮೂಲೆ, ಹೆಚ್ಚು ಬೆಲೆ ಕೊಡುವ ವ್ಯಾಪಾರಿಗೆ ಉತ್ಪನ್ನ ಮಾರಾಟ ಮಾಡುವ ಸ್ವಾತಂತ್ರ್ಯ ಇದರಿಂದ ರೈತರಿಗೆ ಸಿಕ್ಕಿದೆ ಎಂದು ಶಾಸಕ ಪಿ.ರಾಜೀವ್ ಅಭಿಪ್ರಾಯಪಟ್ಟರು.

Advertisement

ಮಲ್ಲೇಶ್ವರದ ಪಕ್ಷದ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪಕ್ಷದ ರಾಜ್ಯ ಮಟ್ಟದ ಇ ಚಿಂತನ ವರ್ಗದಲ್ಲಿ “ಬಡವರ ಕಲ್ಯಾಣಕ್ಕಾಗಿ ಸಂಕಲ್ಪ ಮತ್ತು ಆ ದಿಸೆಯಲ್ಲಿ ನಮ್ಮ ಪ್ರಯತ್ನಗಳು” ಕುರಿತು ಅವರು ಮಾತನಾಡಿದರು. ಬಿಜೆಪಿ ರಾಜ್ಯಾಧ್ಯಕ್ಷರಾದ = ನಳಿನ್ ಕುಮಾರ್ ಕಟೀಲ್ ಅವರು ರಾಜ್ಯ ಪ್ರಶಿಕ್ಷಣ ವಿಭಾಗ ಆಯೋಜಿಸಿದ್ದ ರಾಜ್ಯ ಇ-ಚಿಂತನ ವರ್ಗ ಕಾರ್ಯಕ್ರಮದಲ್ಲಿ ವೆಬೆಕ್ಸ್ ಮೂಲಕ ಭಾಗವಹಿಸಿದ್ದರು.

ಫಸಲ್ ಬಿಮಾ ಯೋಜನೆ ಮೂಲಕ 9.42 ಕೋಟಿಗೂ ಹೆಚ್ಚು ರೈತರಿಗೆ ಸೌಲಭ್ಯ ಲಭಿಸುತ್ತಿದೆ. ರಾಷ್ಟ್ರೀಯ ಕೃಷಿ ಮಾರುಕಟ್ಟೆ ಯೋಜನೆ “ಇ ನಾಮ್”ಅಡಿಯಲ್ಲಿ ಇಲ್ಲಿನವರೆಗೆ 1.70 ಕೋಟಿಗೂ ಹೆಚ್ಚು ರೈತರು ನೋಂದಾವಣೆಗೊಂಡಿದ್ದಾರೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 66 ಲಕ್ಷ ಹೆಕ್ಟೇರ್ ಭೂಮಿಗೆ ಹನಿ ನೀರಾವರಿ ಸೌಲಭ್ಯ ನೀಡಲಾಗಿದೆ ಎಂದು ಶಾಸಕ ಪಿ. ರಾಜೀವ್ ವಿವರಿಸಿದರು.

ಮಣ್ಣು ಪರೀಕ್ಷೆಗೆ ಹೆಚ್ಚಿನ ಆದ್ಯತೆ ನೀಡಿದ ಮೊದಲ ಕೇಂದ್ರ ಸರಕಾರ ನಮ್ಮದು. 11.94 ಕೋಟಿ ರೈತರಿಗೆ ಸಾಯಿಲ್ ಹೆಲ್ತ್ ಕಾರ್ಡ್ ವಿತರಿಸಲಾಗಿದೆ. ಸಣ್ಣ ಹಿಡುವಳಿದಾರ ಸಾಲದ ಸುಳಿಯಲ್ಲಿ ಸಿಲುಕಿರಬಾರದು ಎಂಬ ದೃಷ್ಟಿಯಿಂದ ಕೃಷಿ ಸಮ್ಮಾನ್ ಯೋಜನೆ ಜಾರಿಗೊಳಿಸಿದ್ದು ವಾರ್ಷಿಕ ಒಟ್ಟು 6 ಸಾವಿರ ರೂಪಾಯಿ ನೀಡಲಾಗುತ್ತಿದೆ. ಇದಕ್ಕೆ ಪೂರಕವಾಗಿ 4 ಸಾವಿರ ರೂಪಾಯಿಗಳನ್ನು ರಾಜ್ಯ ಸರಕಾರ ನೀಡುತ್ತಿದ್ದು, ಒಟ್ಟು 10 ಸಾವಿರ ರೈತರಿಗೆ ಸಿಗುತ್ತಿದೆ. ಬಿಜೆಪಿ ಸರಕಾರಗಳು ಬಡವರ, ಶೋಷಿತರ, ರೈತರ ಪರವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರು.

ದೇಶದ ಕಟ್ಟಕಡೆಯ ವ್ಯಕ್ತಿಯೂ ಸೇರಬಹುದಾದ ಅಟಲ್ ಪಿಂಚಣಿ ಯೋಜನೆ, ಪ್ರಧಾನಮಂತ್ರಿ ಜೀವನ್ ಜ್ಯೋತಿ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ ಮೊದಲಾದವುಗಳನ್ನು ಜಾರಿಗೊಳಿಸಿದ್ದು, ವಾರ್ಷಿಕವಾಗಿ 21 ರೂಪಾಯಿಯಿಂದ ಪ್ರೀಮಿಯಂ ಆರಂಭವಾಗುತ್ತಿವೆ. ವಾರ್ಷಿಕವಾಗಿ 2 ಲಕ್ಷದಿಂದ 5 ಲಕ್ಷದವರೆಗೆ ಪ್ರಯೋಜನ ಲಭಿಸುತ್ತಿದೆ ಎಂದು ವಿವರಿಸಿದರು.

Advertisement

1970ರ ದಶಕದಲ್ಲಿ ಇಂದಿರಾ ಗಾಂಧಿ ಅವರು ಗರೀಬಿ ಹಠಾವೋ ಘೋಷಣೆ ಮಾಡಿದರು. ಆ ಘೋಷಣೆ ಮೂಲಕ ಹಲವು ಚುನಾವಣೆಗಳನ್ನು ಕಾಂಗ್ರೆಸ್ ಪಕ್ಷವು ಗೆದ್ದಿತು. ಆದರೆ, ಬಡವರ ಅಭಿವೃದ್ಧಿ ಆಗಲೇ ಇಲ್ಲ. ಬಡವರು ಮತ್ತಷ್ಟು ಹೀನಾಯ ಸ್ಥಿತಿಗೆ ಹೋದರು. ಬಡವರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರ ಬಿಡುಗಡೆಗೊಳಿಸಿದ 100 ರೂಪಾಯಿ ಹಣ ಬಡವರ ಕೈಸೇರುವಾಗ ಕೇವಲ 20 ರೂಪಾಯಿ ಆಗಿರುತ್ತದೆ ಎಂಬ ವಿಚಾರವನ್ನು ಸ್ವತಃ ಕಾಂಗ್ರೆಸ್ ಪ್ರಧಾನಿ ರಾಜೀವ್ ಗಾಂಧಿ ಅವರೇ ಒಪ್ಪಿಕೊಂಡಿದ್ದರು ಎಂದು ತಿಳಿಸಿದರು.

ಮಧ್ಯವರ್ತಿಗಳನ್ನು ತಪ್ಪಿಸಬೇಕು. ಸರಕಾರದ ಯೋಜನೆಗಳು ನೇರವಾಗಿ ತಲುಪಬೇಕೆಂಬ ದೃಷ್ಟಿಯಿಂದ ಪ್ರಧಾನಿಗಳಾದ ನರೇಂದ್ರ ಮೋದಿ ಅವರು ಕಾರ್ಯ ನಿರ್ವಹಿಸಿದರು. ಜನ್‍ಧನ್ ಯೋಜನೆ ಅಂಥ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ. ಮಾಹಿತಿ ನೀಡುವಿಕೆ, ಮಧ್ಯವರ್ತಿಗಳ ಹಸ್ತಕ್ಷೇಪ ತಪ್ಪಿಸಬೇಕು ಎಂಬ ಚಿಂತನೆಯೊಂದಿಗೆ ತಂತ್ರಜ್ಞಾನದ ಸಮರ್ಪಕ ಬಳಕೆಗೆ ಕೇಂದ್ರ ಸರಕಾರ ಮುಂದಾಗಿದೆ. ಡಿಜಿಟಲ್ ಇಂಡಿಯಾ ಮೂಲಕ ಜನ್‍ಧನ್ ಯೋಜನೆಯಡಿ 50 ಕೋಟಿ ಬ್ಯಾಂಕ್ ಖಾತೆಗಳನ್ನು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ತೆರೆಯಲಾಗಿದೆ. ಕೇಂದ್ರ ಸರಕಾರದ 52 ಸಚಿವಾಲಯಗಳು ಬಿಡುಗಡೆ ಮಾಡುವ 380 ಯೋಜನೆಗಳು ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಜನರನ್ನು ತಲುಪುತ್ತಿವೆ. ಇಲ್ಲಿನವರೆಗೆ 17 ಲಕ್ಷ ಕೋಟಿ ರೂಪಾಯಿ ಜನಸಾಮಾನ್ಯರ ಖಾತೆಗೆ ಸಂದಾಯವಾಗಿವೆ ಎಂದು ಅವರು ಹೇಳಿದರು.

ಬ್ಯಾಂಕ್ ಖಾತೆ ಬೇಡದ ಬಡವರಿಗೆ ಬ್ಯಾಂಕ್‍ಗಳಲ್ಲಿ ಖಾತೆ ತೆರೆಸುವ ಕಾರ್ಯವನ್ನು ಪ್ರಧಾನಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾದ ರಾಹುಲ್ ಗಾಂಧಿ ಅವರು ಜನ್‍ಧನ್ ಖಾತೆಗಳ ವಿಚಾರವಾಗಿ ಲೇವಡಿ ಮಾಡಿದರು. ಇದಕ್ಕಾಗಿ ರಾಜಕೀಯ ವಿಶ್ಲೇಷಕರು ರಾಹುಲ್ ಗಾಂಧಿ ಅವರನ್ನು “ಪಾಲಿಟಿಕಲ್ ಬಫೂನ್” ಎಂದು ಕರೆಯುತ್ತಾರೆ ಎಂದರು. ಕಾಂಗ್ರೆಸ್ ಆಡಳಿತವೇ ಈಗ ಇರುತ್ತಿದ್ದರೆ 17 ಲಕ್ಷ ಕೋಟಿ ಪೈಕಿ 13.5 ಲಕ್ಷ ಕೋಟಿ ಮಧ್ಯವರ್ತಿಗಳ ಪಾಲಾಗುತ್ತಿತ್ತು. 3.5 ಲಕ್ಷ ಕೋಟಿ ಮಾತ್ರ ಬಡವರಿಗೆ ಸಿಗುತ್ತಿತ್ತು ಎಂದರು,

Advertisement

Udayavani is now on Telegram. Click here to join our channel and stay updated with the latest news.

Next