Advertisement

ಪಿ.ಎಂ. ಆವಾಸ್‌ ಮನೆ ನಿರ್ಮಾಣ ಮತ್ತಷ್ಟು ವಿಳಂಬ!

09:49 PM Dec 11, 2020 | mahesh |

ಕಾರ್ಕಳ: ಪ್ರಧಾನ ಮಂತ್ರಿ ಅವಾಸ್‌ ಯೋಜನೆಯಡಿ 2020-21ನೇ ಸಾಲಿನಲ್ಲಿ ಪ್ರತಿ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ 20 ಮನೆಗಳ ನಿರ್ಮಾಣ ಯೋಜನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ. ಈ ವರೆಗೆ ಫ‌ಲಾನುಭವಿಗಳ ಆಯ್ಕೆಯಲ್ಲಿ ವಿಳಂಬವಾಗಿದ್ದರೆ, ಸದ್ಯ ಗ್ರಾ.ಪಂ. ಚುನಾವಣೆ ಕಾರಣ ಯೋಜನೆ ಜಾರಿಗೆ ವಿಳಂಬ ವಾಗಲಿದೆ. ಸದ್ಯ 34 ಗ್ರಾ.ಪಂಗಳಲ್ಲಿ ವಸತಿ ನಿರೀಕ್ಷೆ ಯಲ್ಲಿರುವ ಕುಟುಂಬಗಳು ಗ್ರಾ.ಪಂ.ಗಳಲ್ಲಿ ಹೊಸ ಆಡಳಿತ ಬರುವಲ್ಲಿವರೆಗೆ ಕಾಯಬೇಕಾದ್ದು ಅನಿವಾರ್ಯವಾಗಿದೆ.

Advertisement

ಎರಡು ವರ್ಷಗಳಿಂದ ವಸತಿ ಸಹಾಯಧನ, ಮನೆ ಮಂಜೂರಾತಿ ರಾಜ್ಯದಲ್ಲಿ ಸ್ಥಗಿತವಾಗಿತ್ತು. ಅನಂತರದಲ್ಲಿ ಕಳೆದ ನವೆಂಬರ್‌ನಲ್ಲಿ ಪ್ರಧಾನ ಮಂತ್ರಿ ಆವಾಸ್‌ (ಗ್ರಾಮೀಣ) ಯೋಜನೆಯಡಿ 20120-21ನೇ ಸಾಲಿನಲ್ಲಿ ಪ್ರತಿ ಪಂಚಾಯತ್‌ಗಳಿಗೆ 20 ಮನೆಗಳನ್ನು ಹಂಚುವ ಯೋಜನೆಗೆ ಮರುಜೀವ ನೀಡಲಾಗಿತ್ತು.

ಫ‌ಲಾನುಭವಿಗಳ ಆಯ್ಕೆಯಲ್ಲೂ ನಿಧಾನ
ಫ‌ಲಾನುಭವಿಗಳ ಆಯ್ಕೆ ಆಯಾ ಗ್ರಾ.ಪಂ. ಗಳಲ್ಲಿ ನಡೆಯುತ್ತದೆ. ಅದರಂತೆ ಆಯ್ಕೆಯಾದ ಪಟ್ಟಿ ಸಿದ್ಧಗೊಂಡು ತಾ.ಪಂಗೆ ಸಲ್ಲಿಕೆ ಯಾಗಿ ಅಲ್ಲಿ ಶಾಸಕರ ಅಧ್ಯಕ್ಷತೆಯ ಯೋಜನಾ ಆಯೋಗದ ಸಮಿತಿಯಲ್ಲಿ ಅನುಮೋದನೆ ಪಡೆದುಕೊಳ್ಳುವ ಹಂತದಲ್ಲಿತ್ತು. ಸರಕಾರ ಶಾಸಕರಿಗೆ ಸೆಪ್ಟಂಬರ್‌ನಲ್ಲಿ ಪತ್ರ ಬರೆದು ಫ‌ಲಾನುಭವಿ ಪಟ್ಟಿ ನೀಡುವಂತೆಯೂ ತಿಳಿಸಿತ್ತು. ಆದರೆ ಈಗ ಫ‌ಲಾನುಭವಿಗಳ ಆಯ್ಕೆಯನ್ನು ಪಂಚಾಯತ್‌ಗಳೇ ಮಾಡಬೇಕೆಂಬ ಸುತ್ತೋಲೆ ಹೊರಡಿಸಲಾಗಿದೆ. ಗ್ರಾ.ಪಂ ಗಳಲ್ಲಿ ಜನಪ್ರತಿನಿಧಿ ಗಳ ಸಮಿತಿ ಇಲ್ಲದೆ ಆಡಳಿತಾ ಧಿಕಾರಿಗಳು ಇದ್ದಿದ್ದರಿಂದ ಫ‌ಲಾನುಭವಿಗಳ ಪಟ್ಟಿ ಈಗ ಮತ್ತೆ ಶಾಸಕರ ಕಡೆಗೆ ಬಂದಿದೆ.

ಫ‌ಲಾನುಭವಿಗಳ ಆಯ್ಕೆಯಲ್ಲಿ ವಸತಿಯನ್ನು ಮಹಿಳೆಯರ ಹೆಸರಲ್ಲಿ ಮಾತ್ರ ನೀಡಲಾಗುತ್ತಿದೆ. ಮಾಜಿ ಸೈನಿಕರು, ವಿಧುರರು, ಹಿರಿಯ ನಾಗರಿಕರನ್ನು ಹೊರತುಪಡಿಸಿ, ಇತರ ವರ್ಗದರನ್ನು ಆಯ್ಕೆ ಮಾಡಲಾಗುತ್ತದೆ. 20 ಮನೆಗಳ ಪೈಕಿ ಶೇ.65 ಅನ್ನು ಪರಿಶಿಷ್ಟ ಜಾತಿ-ಪಂಗಡಕ್ಕೆ ಶೇ. 25 ಅನ್ನು ಅಲ್ಪಸಂಖ್ಯಾಕರಿಗೆಂದು ಮೀಸಲಿಡ ಲಾಗಿದೆ. ಸರಕಾರದಿಂದ ಅಂಗೀಕೃತಗೊಂಡ ಫ‌ಲಾನುಭವಿಗಳಿಗೆ ವಸತಿ ನಿರ್ಮಾಣಕ್ಕೆ ಎಸ್‌ಸಿ-ಎಸ್‌ಟಿ ಫ‌ಲಾನುಭವಿಗಳಿಗೆ ತಲಾ 1.50 ಲಕ್ಷ ರೂ. ಮತ್ತು ಇತರರಿಗೆ 1.20 ಲಕ್ಷ ರೂ. ದೊರಕುತ್ತದೆ.

ಪರಿಶಿಷ್ಟ ಜಾತಿ-ಪಂಗಡಕ್ಕೆ ಬೇಡಿಕೆ ಕಡಿಮೆಯಾಗಿದ್ದು, ಉಳಿದ ಮನೆಗಳನ್ನು ಇತರ ವರ್ಗಕ್ಕೆ ಹಂಚಬೇಕಾದಲ್ಲಿ ಮರು ಹೊಂದಾಣಿಕೆ ಮಾಡಬೇಕಾದ ಅನಿವಾರ್ಯ ಎದುರಾದ ಸಂದರ್ಭ ಆಯಾ ಕ್ಷೇತ್ರದ ಶಾಸಕರು ಮನೆ ಆಯ್ಕೆ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

Advertisement

ಹೊಸ ಆಡಳಿತಕ್ಕೆ ಕಾಯಬೇಕು
ಈಗ ಗ್ರಾ.ಪಂ. ಚುನಾವಣೆಯೂ ಘೋಷಿಸಲ್ಪಟ್ಟು ಆಯ್ಕೆ ಮತ್ತಷ್ಟೂ ವಿಳಂಬವಾಗಲಿದೆ. ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮತ್ತು ಜನಪ್ರತಿನಿಧಿಗಳು ಫ‌ಲಾನುಭವಿಗಳನ್ನು ಆಯ್ಕೆ ಮಾಡಬೇಕಾದ ಕಾರಣಕ್ಕೆ ಹೊಸ ಚುನಾಯಿತ ಆಡಳಿತ ಅಸ್ತಿತ್ವಕ್ಕೆ ಬಂದು ಸಭೆ ನಡೆಯುವಲ್ಲಿ ತನಕ ವಸತಿ ರಹಿತರು ಕಾಯುವುದು ಅನಿವಾರ್ಯವಾಗಿದೆ. ಅನಂತರದಲ್ಲಿ ಸರಕಾರದಿಂದ ಮಂಜೂರಾತಿ ಪಡೆದು ಮನೆ ನಿರ್ಮಾಣಕ್ಕೆ ಅನುಮತಿ ಸಿಗುವ ಹೊತ್ತಿಗೆ ತಡವಾಗಲಿದೆ. ವಸತಿ ಸೌಕರ್ಯದ ಫ‌ಲ ಬಡ ಕುಟುಂಬಗಳ ಪಾಲಿಗೆ ನಿಗದಿತ ಸಮಯದಲ್ಲಿ ಸಿಗುತ್ತಿಲ್ಲ ಎನ್ನುವ ದೂರುಗಳಿವೆ.

ಪರಿಶಿಷ್ಟ ಜಾತಿ-ಪಂಗಡಕ್ಕೆ ಬೇಡಿಕೆ ಕಡಿಮೆಯಾಗಿದ್ದು, ಉಳಿದ ಮನೆಗಳನ್ನು ಇತರೆ ವರ್ಗಕ್ಕೆ ಹಂಚಬೇಕಾದಲ್ಲಿ ಮರು ಹೊಂದಾಣಿಕೆ ಮಾಡಬೇಕಾದ ಅನಿವಾರ್ಯ ಎದುರಾದ ಸಂದರ್ಭ ಆಯಾ ಕ್ಷೇತ್ರದ ಶಾಸಕರು ಮನೆ ಆಯ್ಕೆ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

ಪಾರದರ್ಶಕವಾಗಿ ಅರ್ಹರ ಪಟ್ಟಿ
ಫ‌ಲಾನುಭವಿಗಳನ್ನು ಗುರುತಿಸುವ ವೇಳೆ ಒಂದಷ್ಟು ಸಮಸ್ಯೆಗಳು ಎದುರಾಗುತ್ತವೆ. ಸಾಧ್ಯವಾದಷ್ಟು ಪಾರದರ್ಶವಾಗಿ ಅರ್ಹರ ಪಟ್ಟಿ ಸಿದ್ಧಪಡಿಸಲಾಗಿದೆ. ಲಭ್ಯತೆ ಮತ್ತು ಆದ್ಯತೆ ಮೇರೆಗೆ ವಸತಿ, ನಿವೇಶನ ರಹಿತರಿಗೆ ಮನೆ ಒದಗಿಸುತ್ತ ಬರಲಾಗುತ್ತಿದೆ.
ಮೇ| ಹರ್ಷ ತಾ.ಪಂ ಇಒ. ಕಾರ್ಕಳ

ಕಾರ್ಕಳ, ಹೆಬ್ರಿ ತಾಲೂಕು ವಸತಿ ರಹಿತರು
ಕಾರ್ಕಳ -3112
ಪ.ಜಾತಿ-307, ಪ.ಪಂ-169, ಸಾಮಾನ್ಯ-2,446, ಅಲ್ಪ ಸಂಖ್ಯಾಕರು-190
ಹೆಬ್ರಿ -386
ಪ.ಜಾತಿ-14, ಪ.ಪಂ-9, ಸಾಮಾನ್ಯ-356, ಅಲ್ಪಸಂಖ್ಯಾಕರು-7

ನಿವೇಶನ ರಹಿತರು
ಕಾರ್ಕಳ -5406
ಪ.ಜಾತಿ-519, ಪ.ಪಂ-212, ಸಾಮಾನ್ಯ-4,296, ಅಲ್ಪಸಂಖ್ಯಾಕರು-379
ಹೆಬ್ರಿ -173
ಪ.ಜಾತಿ-6. ಪ.ಪಂ-2. ಸಾಮಾನ್ಯ-163, ಅಲ್ಪಸಂಖ್ಯಾಕರು-2

Advertisement

Udayavani is now on Telegram. Click here to join our channel and stay updated with the latest news.

Next