Advertisement

ಕಿರಿದಾಗುತ್ತಿದೆ ಓಜೋನ್‌ ರಂಧ್ರ! ಜಗತ್ತಿಗೆ ಸಿಹಿಸುದ್ದಿ ನೀಡಿದ ವಿಜ್ಞಾನಿಗಳು

11:25 AM Oct 29, 2022 | Team Udayavani |

ವಾಷಿಂಗ್ಟನ್‌: ಕಳೆದ ಕೆಲವು ವರ್ಷಗಳಿಂದೀಚೆಗೆ ಹವಾಮಾನ ವೈಪರೀತ್ಯದ ಘೋರ ದುಷ್ಪರಿಣಾಮಗಳನ್ನಷ್ಟೇ ಕೇಳುತ್ತಿದ್ದ, ನೋಡುತ್ತಿದ್ದ ಮನುಕುಲಕ್ಕೆ ವಿಜ್ಞಾನಿಗಳು ಸ್ವಲ್ಪಮಟ್ಟಿಗಿನ ಸಮಾಧಾನದ ಸುದ್ದಿಯೊಂದನ್ನು ನೀಡಿದ್ದಾರೆ.

Advertisement

ವರ್ಷ ಕಳೆದಂತೆ ಓಜೋನ್‌ ರಂಧ್ರವು ಕಿರಿದಾಗುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದು, ಇದು ಜಗತ್ತಿಗೆ ಹೊಸ ಭರವಸೆಯನ್ನು ಮೂಡಿಸಿದೆ.

ದಕ್ಷಿಣ ಧ್ರುವದಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಿದಾಗ, ಓಜೋನ್‌ ರಂಧ್ರದ ಕಿರಿದಾಗುವಿಕೆಯ ಟ್ರೆಂಡ್‌ ಮುಂದುವರಿದಿರುವುದು ದೃಢಪಟ್ಟಿದೆ.

ಪ್ರಸಕ್ತ ವರ್ಷದ ಸೆ.7 ಮತ್ತು ಅ.13ರ ನಡುವೆ ಅಂಟಾಕ್ಟಿಕ್‌ ಓಜೋನ್‌ ರಂಧ್ರವು ಸರಾಸರಿ 23.2 ದಶಲಕ್ಷ ಚದರ ಕಿಲೋಮೀಟರ್‌ ಪ್ರದೇಶದಲ್ಲಿ ವ್ಯಾಪಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ರಂಧ್ರವು ಮತ್ತಷ್ಟು ಕಿರಿದಾಗಿದೆ.

2021ರಲ್ಲಿ ಓಜೋನ್‌ ರಂಧ್ರವು 24.8 ದಶಕ್ಷ ಚದರ ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಹರಡಿತ್ತು. ಒಟ್ಟಾರೆಯಾಗಿ ನೋಡಿದರೆ, ಕಳೆದ 2 ದಶಕಗಳಿಂದ ನಿಧಾನವಾಗಿ ರಂಧ್ರವು ಕಿರಿದಾಗುತ್ತಾ ಬರುತ್ತಿದೆ ಎಂದು ನಾಸಾದ ಗೊಡ್ಡಾರ್ಡ್‌ ಸ್ಪೇಸ್‌ ಫ್ಲೈಟ್‌ ಸೆಂಟರ್‌ನ ಭೂ ವಿಜ್ಞಾನ ವಿಭಾಗದ ಮುಖ್ಯ ವಿಜ್ಞಾನಿ ಪೌಲ್‌ ನ್ಯೂಮನ್‌ ಹೇಳಿದ್ದಾರೆ.

Advertisement

ಕಾರಣವೇನು?
ಔರಾ, ಸುವೋಮಿ ಎನ್‌ಪಿಪಿ ಮತ್ತು ನೋವಾ-20 ಉಪಗ್ರಹಗಳಲ್ಲಿರುವ ಸಾಧನಗಳನ್ನು ಬಳಸಿಕೊಂಡು ಓಜೋನ್‌ ರಂಧ್ರದ ಸದ್ಯದ ಪರಿಸ್ಥಿತಿಗಳನ್ನು ವಿಶ್ಲೇಷಿಸಲಾಗಿದೆ. 90ರ ದಶಕದ ಅಂತ್ಯದಲ್ಲಿದ್ದ ಮತ್ತು 2000ನೇ ಇಸವಿಯ ಆರಂಭದಲ್ಲಿದ್ದ ರಂಧ್ರಗಳಿಗೆ ಹೋಲಿಸಿದರೆ 2022ರಲ್ಲಿ ರಂಧ್ರವು ಕಿರಿದಾಗಿದೆ.

“ಮಾಂಟ್ರಿಯಲ್‌ ಪ್ರೊಟೊಕಾಲ್‌’ ಒಪ್ಪಂದದ ವೇಳೆ ಕ್ಲೋರೋಫ್ಲೂ ರೋಕಾರ್ಬನ್‌ (ಸಿಎಫ್ಸಿಗಳು)ಗಳಂತಹ ಓಜೋನ್‌ ಸವಕಳಿಗೆ ಕಾರಣವಾಗುವ ಅಪಾಯಕಾರಿ ರಾಸಾಯನಿಕಗಳ ಬಿಡುಗಡೆಗೆ ನಿಷೇಧ ಹೇರಲಾಗಿತ್ತು. ಇದರ ಪರಿಣಾಮವಾಗಿಯೇ ಓಜೋನ್‌ಗೆ ಆಗುತ್ತಿರುವ ಹಾನಿಯು ತಪ್ಪಿದ್ದು, ರಂಧ್ರವೂ ಕಿರಿದಾಗಲಾರಂಭಿಸಿದೆ ಎಂದೂ ನ್ಯೂಮನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next