Advertisement

40 ಸಾವಿರ ಹೋಟೆಲ್ ಗಳ ಒಡೆಯ: ಅತೀ ಕಿರಿಯ ವಯಸ್ಸಿನ ಓಯೋ ಸಂಸ್ಥಾಪಕನ ಯಶೋಗಾಥೆ!

05:38 PM Dec 11, 2022 | Team Udayavani |

ಅಂದು ವಿಶ್ವದ ಕುಬೇರರನ್ನು ಗುರುತಿಸುವ ‘ಹುರುನ್‌ ಗ್ಲೋಬಲ್‌ ಲಿಸ್ಟ್‌-2020’ ಪ್ರಕಟವಾಗಿತ್ತು, ಹುರುನ್‌ ಪಟ್ಟಿಯ 2020ರ ವರದಿಯ ಪ್ರಕಾರ, ಭಾರತದಲ್ಲಿ 137 ಶತಕೋಟ್ಯಧಿಪತಿಗಳು ಇದ್ದಾರೆ. ಭಾರತದ ಅತಿ ಕಿರಿಯ ಶತಕೋಟ್ಯಧಿಪತಿ, ಯುವ ಬಿಲಿಯನೇರ್‌ ಓಯೊ ಸಂಸ್ಥಾಪಕ ರಿತೇಶ್‌ ಅಗರ್ವಾಲ್ ಅವರ ಹೆಸರು ಕೇಳಿ ಬಂದಿತ್ತು.

Advertisement

ರಿತೇಶ್‌ ಅವರ ಸಂಪತ್ತು 2020-21ರಲ್ಲಿ ಅಂದರೆ ಸುಮಾರು ಒಂದು ವರ್ಷದಲ್ಲಿ 300 ಕೋಟಿ ರೂ. ಏರಿಕೆಯಾಗಿತ್ತು.ಅವರ ಒಟ್ಟು ಸಂಪತ್ತು 7,800 ಕೋಟಿ ರೂ. ಆಗಿತ್ತು. ತನ್ನ ಸ್ವಂತ ಆಲೋಚನೆ ಮತ್ತು ಕ್ರಿಯಾಶೀಲತೆಯಿಂದ ಶತಕೋಟ್ಯಧಿಪತಿಯಾಗಿ ರೂಪುಗೊಂಡ ರಿತೇಶ್‌ರನ್ನು  ಅಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಶಂಸಿಸುವ ಮಟ್ಟಿಗೆ ಬೆಳೆದಿತ್ತು ಅಗರ್ವಾಲ್‌ನ ಅಗಾಧ ಜ್ಞಾನ ಸಂಪತ್ತು ಮತ್ತು ಧನ ಸಂಪತ್ತು.

ಭಾರತ ಪ್ರವಾಸ ಕೈಗೊಂಡಿದ್ದ ಟ್ರಂಪ್‌ ‘ಬ್ರಿಲಿಯೆಂಟ್‌ ಬಿಸಿನೆಸ್‌ಮನ್‌’ ಎಂದು ಹಾಡಿ ಹೊಗಳಿದ್ದು ಮಾತ್ರವಲ್ಲದೆ, ಎಷ್ಟು ಹೋಟೆಲ್‌ಗಳಿವೆ ಎಂದು ಪ್ರಶ್ನಿಸಿದ್ದ ಟ್ರಂಪ್ ನಿಮ್ಮ ಕಂಪನಿ ನನಗೆ ಗೊತ್ತು. ಒಳ್ಳೆ ಕೆಲಸ ಮಾಡುತ್ತಿದ್ದೀರಿ ಎಂದು ಶಹಭಾಶ್ ಎಂದಿದ್ದರು ಇದೇ ನವ ಯುವಕ ರಿತೇಶ್ ಅವರಿಗೆ. ‘ವಿಶ್ವದೆಲ್ಲೆಡೆ 40,000 ಹೋಟೆಲ್‌ಗಳಿವೆ’ ಎಂದು ಅಗರವಾಲ್‌ ಅಂದು ಪ್ರತಿಕ್ರಿಯಿಸಿದ್ದರು.

ಯುವ ಬಿಲಿಯನೇರ್‌ ಪಟ್ಟ ಧರಿಸಿರುವ ಅಗರವಾಲ್‌ಗೆ ಈಗ ಬರೀ 29 ವರ್ಷ. ಅಗರವಾಲ್‌ ಅವರು ಕಳೆದ ವರ್ಷವೂ ಯುವ ಬಿಲಿಯನೇರ್‌ಗಳ ಪಟ್ಟಿಯಲ್ಲಿದ್ದರು. 2019 ರಲ್ಲಿ ಅವರ ಸಂಪತ್ತು 7,500 ಕೋಟಿ ರೂ. ಆಗಿತ್ತು ಮತ್ತೆ ಒಂದೇ ವರ್ಷದಲ್ಲಿ ಆ ಸಂಪತ್ತು 2020ರ ವೇಳೆಗೆ 7800 ಆಗಿತ್ತು ಈಗ 7253 ಕೋಟಿ ರೂಪಾಯಿಗಳಾಗಿವೆ.

 ಕಾಲೇಜ್‌ ಅನ್ನು ಅರ್ಧದಲ್ಲೇ ಬಿಟ್ಟಿದ್ದ ಅಗರವಾಲ್‌, 2013ರಲ್ಲಿ ಹೋಟೆಲ್‌ ಸೇವಾ ಉದ್ಯಮವನ್ನು ಆರಂಭಿಸಿದ್ದರು. ಅವರ ಈ ಉದ್ಯಮಕ್ಕೆ ಸಾಫ್ಟ್‌ ಬ್ಯಾಂಕ್‌ ಸಾಥ್‌ ನೀಡಿತ್ತು. ಇದು ದೇಶದ ಹೋಟೆಲ್‌ ಸಮೂಹದಲ್ಲಿ ಬೃಹತ್‌ ಆಗಿ ಗುರುತಿಸಿಕೊಂಡಿರುವ ಒಂದು ಸಂಸ್ಥೆ. ಈಗ ಈ ಉದ್ಯಮ ಒಯೋ ಎಂಬ ಹೆಸರಿನಲ್ಲಿ ಚೀನಾ, ಅಮೆರಿಕ ಮತ್ತು ಯುರೋಪ್‌ನಲ್ಲೂ ಇದೆ.

ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಒಡಿಶಾ ಮೂಲದ ರಿತೇಶ್ ಅಗರ್ವಾಲ್ ಭಾರತದಲ್ಲಿ 40 ವರ್ಷ ವಯಸ್ಸಿನೊಳಗೆ ಸೆಲ್ಫ್‌ ಮೇಡ್ ಬಿಲಿಯನೇರ್ ಆದವರಲ್ಲಿ ಅತಿದೊಡ್ಡ ಶ್ರೀಮಂತರಾಗಿದ್ದಾರೆ. ಜೆರೋಧಾ ಸಂಸ್ಥಾಪಕ ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ ಕೂಡ 30ನೇ ವಯಸ್ಸಿನೊಳಗೆ ಸ್ವಯಂ ಬಿಜಿನೆಸ್ ಆರಂಭಿಸಿ ಬಿಲಿಯನೇರ್ ಆದವರು.

ಓಯೋ (OYO) ಎಂಬ ವಿಶಿಷ್ಟ ಪರಿಕಲ್ಪನೆ:

Advertisement

ಕಾಲೇಜ್‌ ಡ್ರಾಪ್‌ಔಟ್‌ನಿಂದ ಬಿಲಿಯನೇರ್‌ ಆಗುವ ವರೆಗಿನ ರಿತೇಶ್ ಅಗರ್ವಾಲ್ ಅವರ ಯಶಸ್ಸಿನ ಪ್ರಯಾಣವು ಸಾಕಷ್ಟು ಸ್ಫೂರ್ತಿದಾಯಕವಾಗಿದೆ. ಭಾರತದ ಅತೀ ಕಿರಿಯ ವರ್ಷದ ಬಿಲಿಯನೇರ್ ರಿತೇಶ್ ಅಗರ್ವಾಲ್ ವಿಶ್ವದ ಅತ್ಯಂತ ಒಳ್ಳೆ ಹೋಟೆಲ್ ಸರಪಳಿಯಾದ OYO ನ ಸ್ಥಾಪಕ ಮತ್ತು CEO ಆಗಿದ್ದಾರೆ. ಪ್ರಪಂಚದಾದ್ಯಂತ ಕೈಗೆಟುಕುವ ದರದಲ್ಲಿ ಹೋಟೆಲ್‌ಗಳನ್ನು ಹುಡುಕುತ್ತಿರುವ ಜನರಿಗೆ ಪರಿಹಾರವನ್ನು ಒದಗಿಸುವ ದೃಷ್ಟಿಯಿಂದ ಅವರು 20 ನೇ ವಯಸ್ಸಿನಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು.

ರಿತೇಶ್ ಚಿಕ್ಕ ವಯಸ್ಸಿನಿಂದಲೂ ಟೆಕ್ ಫ್ರೀಕ್ ಅಂದರೆ ತಂತ್ರಜ್ಞಾನಗಳ ಕಲಿಕೆ, ಅಳವಡಿಕೆ, ಕೋಡಿಂಗ್‌ ಮುಂತಾದವುಗಳಲ್ಲಿ ಉತ್ತಮ ಆಸಕ್ತಿ ಹೊಂದಿದ್ದರು.  ಕೇವಲ 10 ವರ್ಷದವರಾಗಿದ್ದಾಗ ಕೋಡಿಂಗ್ ಬಗ್ಗೆ ಕಲಿಯಲು ಪ್ರಾರಂಭಿಸಿದ್ದರು. ಅವರ ಇನ್ನೊಂದು ಅತೀ ಅಸಕ್ತಿದಾಯಕ ಅಭ್ಯಾಸವೆಂದರೆ ಜಗತ್ತನ್ನು ಸುತ್ತುವುದು. “ದೇಶ ಸುತ್ತು ಕೋಶ ಓದು” ಎಂಬಂತೆ ಈ ಎರಡು ವಿಷಯಗಳ ಮೇಲಿನ ಆಸಕ್ತಿ ಮತ್ತು ಯೋಚನೆಗೆ ತಕ್ಕ ಯೋಜನೆ ಮತ್ತು ಪ್ರಯತ್ನಗಳು ವಯಸ್ಸನ್ನು ಮೀರಿ ಅವರ ಕೈ ಹಿಡಿದವು.

  ಅವರು ಭಾರತದಾದ್ಯಂತ ಪ್ರಯಾಣಿಸುವಾಗ, ಭಾರತದಲ್ಲಿ ಯೋಗ್ಯವಾದ ಸೇವೆಗಳನ್ನು ಒದಗಿಸುವ ಕೈಗೆಟುಕುವ ದರದಲ್ಲಿ ಲಭ್ಯವಾಗುವ ಹೋಟೆಲ್‌ಗಳ ಅವಶ್ಯಕತೆಯಿದೆ ಎಂದು ಅರಿತುಕೊಳ್ಳುತ್ತಾರೆ. ಕೈಗೆಟುಕುವ ಬೆಲೆಯ ಹೋಟೆಲ್‌ಗಳು ಎಸಿ, ವೈ-ಫೈ, ಆರಾಮದಾಯಕ ಹಾಸಿಗೆಗಳು ಮತ್ತು ಉಪಹಾರ ಸೌಲಭ್ಯಗಳಂತಹ ಅಗತ್ಯ ಸೇವೆಗಳನ್ನು ಕಡಿಮೆ ಬೆಲೆಯಲ್ಲಿ ಮತ್ತು ಸುಲಭ ರೀತಿಯಲ್ಲಿ ದೊರೆಯುವಂತಿರಬೇಕು ಎಂಬ ಯೋಚನೆ ಯೋಜನೆಗೆ ಪ್ರೇರಣೆ ನೀಡಿತ್ತು.

ಈ ಸಮಸ್ಯೆಯನ್ನು ಪರಿಹರಿಸಲು ಏನನ್ನಾದರೂ ಸಾಧೀಸಲು ಇದು ಅವರಿಗೆ ಒಂದು ಹಂಬಲವನ್ನು ನೀಡಿತ್ತು, ಆದ್ದರಿಂದ ಅವರು ತನ್ನ ಪ್ರಯಾಣದ ಬಗೆಗಿನ  ಪ್ರೀತಿಯನ್ನು ತಂತ್ರಜ್ಞಾನದೊಂದಿಗಿನ  ತನ್ನ ಜ್ಞಾನವನ್ನು ಉಪಯುಕ್ತವಾಗಿ ಬಳಸಲು ಒಂದು ಯೋಚನೆಯನ್ನು ಯೋಜನೆಯಾಗಿ ಕಾರ್ಯರೂಪಕ್ಕೆ ತಂದು ಯಶಸ್ವಿಯಾದರು. ಅವರಿಗೆ ಉದ್ಯಮಶೀಲತೆಯ ಬಗ್ಗೆ ಏನೂ ಹೆಚ್ಚಿನ ಜ್ಞಾನವಿರದ ಕಾರಣ ಅವರಿಗೆ ಆರಂಭದಲ್ಲಿ ಇದು ಕಷ್ಟಕರವಾಗಿತ್ತು ಆದರೆ ಅವರು ತಮ್ಮ ಯೋಜನೆಯನ್ನು ಅಭಿವೃದ್ಧಿಪಡಿಸಲು ಕೆಲವು ಹೂಡಿಕೆದಾರರಿಗೆ ತನ್ನ ಐಡಿಯಾಗಳನ್ನು ಪ್ರಸ್ಥಾಪಿಸಿ, ಅವರ ಮನವೊಲಿಸಿ $ 100,000 ಹಣವನ್ನು ಪಡೆಯುವಲ್ಲಿ ಯಶಸ್ವಿಯಾದರು, ಇದು ಅವರ ಉದ್ಯಮಶೀಲತೆಯ ಪ್ರಯಾಣವನ್ನು ಪ್ರಾರಂಭಿಸಲು ಸಹಾಯ ಮಾಡಿತು.

ಒರಾವೆಲ್ ಸ್ಟೇಗಳನ್ನು ಪ್ರಾರಂಭಿಸುವ ಮೂಲಕ ರಿತೇಶ್ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು, ಇದು ಜನರು ತಮ್ಮ ಸಮೀಪವಿರುವ ಕೈಗೆಟುಕುವ ಹೋಟೆಲ್‌ಗಳನ್ನು ತಿಳಿಯಲು ಮತ್ತು ಬುಕ್ ಮಾಡಲು ಸಹಾಯ ಮಾಡಿತು. ಕೈಗೆಟುಕುವ ಬೆಲೆಯ ಹೋಟೆಲ್‌ಗಳ ಈ ಯೋಜನೆ ಪ್ರಯಾಣಿಕರಿಗೆ ಆರ್ಥಿಕವಾಗಿ ಎಲ್ಲ ಸ್ತರದ ಜನರಿಗೆ ಜನ ಸ್ನೇಹಿ ಹೋಟೆಲ್‌ಗಳನ್ನು ಹುಡುಕಲು ಸಹಾಯ ಮಾಡಿತು ಆದರೆ ರಿತೇಶ್ ಈ ಕಂಪನಿಯನ್ನು ಪ್ರಾರಂಭಿಸಿದ ಉದ್ದೇಶವನ್ನು ಪೂರೈಸಲಿಲ್ಲ ಮತ್ತು ಇದು ಅಪೂರ್ಣ ಎಂದು ರಿತೇಶ್‌ಗೆ ಅನ್ನಿಸತೊಡಗಿತು.

  ಈ ಸಮಸ್ಯೆಯನ್ನು ಪರಿಹರಿಸಲು ಅವರು ಹೋಟೆಲ್‌ಗಳ ಆತಿಥ್ಯ ಸೇವೆಗಳ ಬಗ್ಗೆ ಆಳವಾದ ಸಂಶೋಧನೆಯನ್ನು ಮಾಡಲು ನಿರ್ಧರಿಸಿದರು, ಆದ್ದರಿಂದ ಅವರು ಭಾರತದಾದ್ಯಂತ ಮತ್ತೆ ಪ್ರಯಾಣಿಸಲು ಪ್ರಾರಂಭಿಸಿದರು ಮತ್ತು ಸುಮಾರು ನೂರಾರು ಹೋಟೆಲ್‌ಗಳಿಗೆ ಭೇಟಿ ನೀಡಿದರು. ಇದೆಲ್ಲದರ ನಂತರ, ಹೋಟೆಲ್ ಗಳ ಆತಿಥ್ಯ ಕ್ರಮ ಮತ್ತು ಉದ್ಯಮದಲ್ಲಿನ ಪ್ರಮುಖ ಸಮಸ್ಯೆಗಳೆಂದರೆ ಕಡಿಮೆ ಬೆಲೆಗೆ ಉನ್ನತ ಸೇವೆಗಳು ಅಪೇಕ್ಷಿತ ಮಟ್ಟದಲ್ಲಿ ಗ್ರಾಹಕರಿಗೆ ದೊರೆಯುತ್ತಿರಲಿಲ್ಲ ಮತ್ತು ಅನಿರೀಕ್ಷಿತ ಬದಲಾವಣೆಗಳು ಜನರಿಗೆ ಕಿರಿ-ಕಿರಿ ಉಂಟುಮಾಡುತ್ತಿದ್ದವು ಎಂದು ಅವರು ಕಂಡುಕೊಂಡರು ಆದ್ದರಿಂದ ಅವರು (OYO) ಓಯೋ ಎಂಬ ಬ್ರಾಂಡ್‌ ರೂಪಿಸಿ ಅದರ ಸಹಾಯದಿಂದ ಈ ಸಮಸ್ಯೆಗಳನ್ನು ಪರಿಹರಿಸಲು ನಿರ್ಧರಿಸಿದರು.

“OYO ಎಂದರೆ ಆನ್ ಯುವರ್ ಓನ್” ಎಂದರ್ಥ. ರಿತೇಶ್ ನಂತರ ತನ್ನ ಹಳೆಯ ವ್ಯವಹಾರದ ಮಾದರಿಯನ್ನು ಮತ್ತು ತಂತ್ರಜ್ಞಾನಗಳನ್ನು ನವೀಕರಿಸಿದರು ಮತ್ತು ಅದನ್ನು ಹೆಚ್ಚು ಉತ್ತಮ ರೀತಿಯಲ್ಲಿ ಒದಗಿಸಲು ಯೋಜನೆಗಳನ್ನು ರೂಪಿಸಿದರು, ಆ ಯಶಸ್ಸೇ ಈಗಿರುವ OYO ಹೋಟೆಲ್‌ಗಳು ಎಂದು ಎಲ್ಲರಿಗೂ ತಿಳಿದಿದೆ. ಅವರು ಭಾರತದಾದ್ಯಂತ 1000 ಕ್ಕೂ ಹೆಚ್ಚು ಹೋಟೆಲ್‌ಗಳಲ್ಲಿ ಗುಣಮಟ್ಟದ ಸೌಲಭ್ಯಗಳೊಂದಿಗೆ ಕೈಗೆಟುಕುವ ಕೊಠಡಿಗಳನ್ನು ಒದಗಿಸಲು ಪ್ರಾರಂಭಿಸುತ್ತಾರೆ ಮತ್ತು OYO ಆ ಯಾವುದೇ ಹೋಟೆಲ್‌ಗಳನ್ನು ಸ್ವಂತವಾಗಿ ಹೊಂದಿಲ್ಲ ಎನ್ನುವುದು ವಿಶೇಷ. ಈ ಪರಿಕಲ್ಪನೆಯು ರಿತೇಶ್ ಅಗರ್ವಾಲ್ ಅವರನ್ನು 23 ನೇ ವಯಸ್ಸಿನಲ್ಲಿ ಕೋಟ್ಯಾಧಿಪತಿಯನ್ನಾಗಿ ಮಾಡಿತು.

  ಈ ಕಥೆಯಿಂದ ಕಲಿಯಬಹುದಾದ ಪಾಠಗಳು:

  • ಒಂದುಪ್ರಮುಖ ಸಮಸ್ಯೆಯನ್ನು ಹುಡುಕಿ ಮತ್ತು ನೀವು ಅದನ್ನು ಹೇಗೆ ಪರಿಹರಿಸಬಹುದು ಎಂಬುದರ ಕುರಿತು ಯೋಚಿಸಿ, ಆ ಸಮಸ್ಯೆಯನ್ನು ಕೇವಲ ಸಮಸ್ಯೆಯಾಗಿ ನೋಡದೆ, ನಮ್ಮ ಆಸಕ್ತಿಗಳ ಆಧಾರದಲ್ಲಿ ಅದನ್ನು ಅವಕಾಶಗಳಾಗಿ ಪರಿವರ್ತಿಸಿಕೊಳ್ಳುವ ಬಗ್ಗೆ ಯೋಜನೆ ರೂಪಿಸಿ.
  • ನಿಮ್ಮಜ್ಞಾನವನ್ನು ನಿಮ್ಮ ಇಷ್ಟದ ಆಸಕ್ತಿಗಳ ಮೇಲೆ ಪ್ರಯೋಗಾತ್ಮಕವಾಗಿ ಮತ್ತು ದೈರ್ಯದಿಂದ ವಿನಿಯೋಗಿಸಿ.
  • ನಿಮ್ಮನೆಚ್ಚಿನ ಕ್ಷೇತ್ರಗಳ ಬಗ್ಗೆ ಕಲಿಯುತ್ತಲೇ ಇರಿ ಮತ್ತು ಅದರಲ್ಲಿ ಪರಿಣಿತರಾಗಿ. ಕಲಿಯಲು ವಯಸ್ಸು, ಸೌಖರ್ಯಗಳಿಗಿಂತ ಮನಸ್ಸು ಮುಖ್ಯ. ಜೀವನದುದ್ದಕ್ಕೂ ಏನೇ ಆದರೂ ನಿಮ್ಮೊಳಗೆ ಒಬ್ಬ ವಿದ್ಯಾರ್ಥಿಯ ಗುಣ ಜೀವಂತವಾಗಿರಲಿ.
  • ನಿಮ್ಮತಪ್ಪುಗಳನ್ನು ಒಪ್ಪಿಕೊಳ್ಳುವ ಸಾಮರ್ಥ್ಯ ಮತ್ತು ಭವಿಷ್ಯದಲ್ಲಿ ಅದನ್ನು ಸುಧಾರಿಸುವ ಗುಣ ರೂಢಿಸಿಕೊಳ್ಳಿ.

ರಿತೇಶ್ ಅಗರ್ವಾಲ್ ತನ್ನ ಜೀವನದಲ್ಲಿ ಏನಾದರೂ ದೊಡ್ಡದನ್ನು ಸಾಧಿಸಲು ಬಯಸುವ ಪ್ರತಿಯೊಬ್ಬರಿಗೂ ನಿಜವಾದ ಸ್ಪೂರ್ತಿದಾಯಕ ಕಥೆ. ಅವರ ವಿಶಿಷ್ಟ ಚಿಂತನೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವು ಅವರನ್ನು ಭಾರತದ ಅತ್ಯಂತ ಕಿರಿಯ ಶತಕೋಟ್ಯಾಧಿಪತಿಯನ್ನಾಗಿ ಮಾಡಿತು ಎಂದರೆ ತಪ್ಪಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next