Advertisement

ಅಗತ್ಯಕ್ಕೆ ತಕ್ಕಂತೆ ಆಮ್ಲಜನಕ ಪೂರೈಕೆಗೆ ಸಚಿವದ್ವಯರ ಸೂಚನೆ

10:16 PM Apr 19, 2021 | Team Udayavani |

ಬೆಂಗಳೂರು: ಸಚಿವರಾದ ಜಗದೀಶ ಶೆಟ್ಟರ್‌ ಹಾಗೂ ಡಾ.ಕೆ.ಸುಧಾಕರ್‌ ಅವರ ಅಧ್ಯಕ್ಷತೆಯಲ್ಲಿ ಆಮ್ಲಜನಕ ಉತ್ಪಾದಕ ಹಾಗೂ ಪೂರೈಕೆ ಸಂಸ್ಥೆಗಳೊಂದಿಗೆ ನಡೆದ ಸಭೆಯಲ್ಲಿ ರಾಜ್ಯದಲ್ಲಿ ಬೇಡಿಕೆಗೆ ತಕ್ಕಂತೆ ಆಮ್ಲಜನಕ ಪೂರೈಸಬೇಕು ಎಂದು ಸ್ಪಷ್ಟ ಸೂಚನೆ ನೀಡಲಾಯಿತು.

Advertisement

ಕೋವಿಡ್‌ ಸೋಂಕಿತರಿಗೆ ಬೇಡಿಕೆಗೆ ಅನುಗುಣವಾಗಿ ಆಮ್ಲಜನಕ ಪೂರೈಕೆ ಸಂಬಂಧ ವಿಧಾನಸೌಧದಲ್ಲಿ ಸೋಮವಾರ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ರಾಜ್ಯದ ಆರೋಗ್ಯ ವಲಯಕ್ಕೆ ಅಗತ್ಯವಿರುವಷ್ಟು ಆಮ್ಲಜನಕವನ್ನು ಆದ್ಯತೆ ಮೇರೆಗೆ ಪೂರೈಸುವಂತೆ ಸಚಿವದ್ವಯರು ಸ್ಪಷ್ಟ ಸೂಚನೆ ನೀಡಿದರು.
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕೊರತೆಯಾಗದಂತೆ ಆಮ್ಲಜನಕ ಉತ್ಪಾದಿಸಬೇಕು. ಹಾಗೆಯೇ ಕೊರತೆಯಿಲ್ಲದಂತೆ ಸಿಲಿಂಡರ್‌ಗಳನ್ನು ಪೂರೈಸಬೇಕು. ಬೆಂಗಳೂರು ನಗರಕ್ಕೆ 3200 ಆಮ್ಲಜನಕ ಸಿಲಿಂಡರ್‌ ಬೇಡಿಕೆಯಿದ್ದು, ಅದಕ್ಕೆ ತಕ್ಕಂತೆ ಪೂರೈಸಬೇಕು ಎಂದು ಸೂಚಿಸಲಾಯಿತು. ಇದಕ್ಕೆ ಸಭೆಯಲ್ಲಿ ಉತ್ಪಾದಕ- ಪೂರೈಕೆ ಸಂಸ್ಥೆಗಳ ಪ್ರತಿನಿಧಿಗಳು ಸಹಮತ ವ್ಯಕ್ತಪಡಿಸಿದರು. ಜತೆಗೆ ಕೆಲ ವಿಷಯಗಳಿಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಬೇಕಿರುವ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಯಿತು.

ದಿನದಿಂದ ದಿನಕ್ಕೆ ಆಮ್ಲಜನಕದ ಬೇಡಿಕೆಯಲ್ಲಿ ವ್ಯತ್ಯಯವಾಗಬಹುದು. ಅದಕ್ಕೆ ಪೂರಕವಾಗಿ ಉತ್ಪಾದಿಸಿ ಪೂರೈಸಬೇಕು. ಏ. 30ರವರೆಗಿನ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಉತ್ಪಾದನೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಕೈಗಾರಿಕೆಗಳಿಗೂ ಆಮ್ಲಜನಕದ ಅಗತ್ಯವಿದೆ. ಆದರೆ ಆರೋಗ್ಯ ವಲಯಕ್ಕೆ ಆದ್ಯತೆ ಮೇರೆಗೆ ಪೂರೈಸಬೇಕು. ಕೈಗಾರಿಕಾ ಬಳಕೆಗೆ ಪೂರೈಕೆಯಾಗುವ ಆಮ್ಲಜನಕ ಪ್ರಮಾಣ ಕಡಿತಗೊಳಿಸಿ ಆರೋಗ್ಯ ವಲಯಕ್ಕೆ ಹೆಚ್ಚು ಪೂರೈಸಬೇಕು ಎಂದು ಸೂಚಿಸಲಾಯಿತು.

ಇದನ್ನೂ ಓದಿ :ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಬಂದಂತೆ ಕಾಣುತ್ತಿದೆ ; ಡಿ.ಕೆ. ಶಿವಕುಮಾರ್

ಬಳಿಕ ಮಾತನಾಡಿದ ಸಚಿವ ಜಗದೀಶ ಶೆಟ್ಟರ್‌, ರಾಜ್ಯಕ್ಕೆ ಅಗತ್ಯವಿರುವಷ್ಟು ಆಮ್ಲಜನಕ ರಾಜ್ಯದಲ್ಲೇ ಉತ್ಪಾದನೆಯಾಗುತ್ತಿದೆ. ಬೆಂಗಳೂರಿನಲ್ಲಿ ಆಮ್ಲಜನಕಕ್ಕೆ ಹೆಚ್ಚು ಬೇಡಿಕೆ ಸೃಷ್ಟಿಯಾಗುತ್ತಿದೆ. ಆಮ್ಲಜನಕ ಪೂರೈಕೆ ಸಿಲಿಂಡರ್‌ ಕೊರತೆಯಿದ್ದು, ತಕ್ಷಣವೇ ನಿವಾರಣೆಗೆ ಮುಂದಾಗಬೇಕು. ಜತೆಗೆ ನಗರಕ್ಕೆ ಪೂರೈಕೆಯಾಗುವ ಆಮ್ಲಜನಕವನ್ನು ಸಮರ್ಪಕವಾಗಿ, ಅಗತ್ಯ ಪ್ರಮಾಣದಲ್ಲಿ ಆಸ್ಪತ್ರೆಗಳಿಗೆ ತಲುಪಿಸುವ ವ್ಯವಸ್ಥೆ ರೂಪಿಸಿ ಕೊರತೆ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

Advertisement

ನೆರೆ ರಾಜ್ಯಕ್ಕೆ ಆಮ್ಲಜನಕ ಪೂರೈಕೆಗೆ ಬ್ರೇಕ್‌?
ಸಚಿವ ಡಾ.ಕೆ.ಸುಧಾಕರ್‌, ಸದ್ಯ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಆಮ್ಲಜನಕವನ್ನು ನೆರೆಯ ರಾಜ್ಯಗಳಿಗೂ ರವಾನಿಸಲಾಗುತ್ತಿದೆ. ಕೋವಿಡ್‌ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನೆರೆ ರಾಜ್ಯಕ್ಕೆ ಪೂರೈಕೆಯಾಗುವ ಆಮ್ಲಜನಕವನ್ನೂ ರಾಜ್ಯದಲ್ಲೇ ಬಳಸಬೇಕಾಗಲಿದೆ. ಈ ಸಂಬಂಧ ಕಾರ್ಖಾನೆಗಳಿಗೆ ಸ್ಪಷ್ಟ ಸೂಚನೆ ನೀಡಬೇಕು. ರಾಜ್ಯಕ್ಕೆ ಅಗತ್ಯವಿರುವ ಸಿಲಿಂಡರ್‌ಗಳನ್ನು ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜ್‌ಕುಮಾರ್‌ ಕತ್ರಿ, ಆರೋಗ್ಯ ಇಲಾಖೆ ಆಯುಕ್ತ ಡಾ.ಕೆ.ವಿ. ತ್ರಿಲೋಕ್‌ಚಂದ್ರ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next