Advertisement

ಆಮ್ಲಜನಕಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ

08:57 PM Aug 05, 2019 | Team Udayavani |

ಚಾಮರಾಜನಗರ: ಗಿಡಗಳನ್ನು ನೆಡುವುದರಿಂದ ಪರಿಸರ ಹಸಿರಾಗುವುದಲ್ಲದೇ, ಅವುಗಳು ನೀಡುವ ಆಮ್ಲಜನಕಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ನಗರಸಭೆ ಆಯುಕ್ತ ಎಂ. ರಾಜಣ್ಣ ಹೇಳಿದರು. ನಗರದ ಭ್ರಮರಾಂಬಾ ಚಿತ್ರಮಂದಿರದ ಮುಂಭಾಗದಲ್ಲಿ ಈಶ್ವರಿ ಮ್ಯೂಸಿಕಲ್‌ ಅಂಡ್‌ ಸೋಷಿಯಲ್‌ ಟ್ರಸ್ಟ್‌ ವತಿಯಿಂದ ಡಾ. ಬಿ.ಆರ್‌.ಅಂಬೇಡ್ಕರ್‌ ಅವರ 128ನೇ ಜನ್ಮ ದಿನದ ಪ್ರಯುಕ್ತ ಬಿ.ರಾಚಯ್ಯ ಜೋಡಿರಸ್ತೆಯಲ್ಲಿ 250 ಗಿಡಗಳನ್ನು ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ವೆಂಕಟೇಶ್‌ ಜಿಲ್ಲೆಗೆ ಮಾದರಿ: ಪ್ರತಿಯೊಬ್ಬರಿಗೂ ಸ್ವಚ್ಛ ಗಾಳಿ ಮತ್ತು ನೀರು ಅವಶ್ಯಕವಾಗಿದೆ. ಮರಗಳಿದ್ದರೆ ಗಾಳಿ ಮತ್ತು ಮಳೆ ದೊರಕುತ್ತದೆ. ಚಾಮ ರಾಜನಗರದ ಈಶ್ವರಿ ಮ್ಯೂಸಿಕಲ್‌ ಅಂಡ್‌ ಸೋಷಿಯಲ್‌ ಟ್ರಸ್ಟ್‌ ಸಂಸ್ಥಾಪಕ‌ ಸಿ.ಎಂ.ವೆಂಕಟೇಶ್‌ ಅವರು ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಜಿಲ್ಲೆಗೆ ಮಾದರಿಯಾಗಿದ್ದಾರೆ. ಅವರು ನಗರದಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ವಿಶಿಷ್ಟ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಶ್ರಮದ ಫ‌ಲವಾಗಿ ನಗರ ಪ್ರದೇಶವು ಹಸಿರು ಕ್ಷೇತ್ರವಾಗುದರಲ್ಲಿ ಸಂಶಯವೇ ಇಲ್ಲ ಎಂದರು.

ಗಿಡ-ಮರ ರಕ್ಷಿಸಿ: ನಗರಸಭೆ ವತಿಯಿಂದ 3 ಲಕ್ಷ ರೂ. ವೆಚ್ಚದಲ್ಲಿ ಕರಿವರದರಾಜನ ಬೆಟ್ಟದಲ್ಲಿ ಸಮೀಪದಲ್ಲಿ ಗಿಡಗಳನ್ನು ನೆಡಲಾಗಿದ್ದು ಅದರ ಪೋಷಣೆಯನ್ನು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈಶ್ವರಿ ಅಕಾಡೆಮಿ ಜೊತೆ ನಗರಸಭೆಯು ಕೈ ಜೋಡಿಸಿ ಗಿಡಮರಗಳನ್ನು ರಕ್ಷಿಸಿ ಉಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ವಾತಾವರಣ ಸ್ವಚ್ಛವಾಗಿಡಲು ಸಹಕರಿಸಿ: ಪರಿಸರವನ್ನು ಕಾಪಾಡುವ ಜವಾಬ್ದಾರಿ ಸಾರ್ವಜನಿಕರಿಗಿದೆ ನಿಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಡುವುದರಿಂದ ರೋಗ ರುಜಿನಗಳನ್ನು ತಡೆಯಬಹುದು ಎಂದು ರಾಜಣ್ಣ ಸಲಹೆ ನೀಡಿದರು.

ಜಿಲ್ಲೆ ಜನರ ಪರವಾಗಿ ಧನ್ಯವಾದ: ದಲಿತ ಮುಖಂಡ ವೆಂಕಟರಮಣಸ್ವಾಮಿ(ಪಾಪು) ಮಾತನಾಡಿ, ಸಿ.ಎಂ ವೆಂಕಟೇಶ್‌ ಅವರು ಒಂದು ಸಂಸ್ಥೆಯನ್ನು ಸ್ಥಾಪಿಸಿ, ಗಾಯಕರಾಗಿ, ಲೆಕ್ಕ ಪರಿಶೋಧಕರಾಗಿ, ಪರಿಸರ ಪ್ರೇಮಿಯಾಗಿ ನಾಡಿನಾದ್ಯಂತ ಹೆಸರು ಮಾಡಿದ್ದಾರೆ. ಅವರು ನಗರ ಪ್ರದೇಶವನ್ನು ತಮ್ಮ ಮನೆ ಎಂದು ಭಾವಿಸಿ, ತಾವು ದುಡಿದ ಹಣವನ್ನು ಗಿಡಗಳನ್ನು ಬೆಳೆಸಲು ಖರ್ಚುಮಾಡುತ್ತಿದ್ದಾರೆ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

Advertisement

ಗಿಡ ನೆಟ್ಟು ಅಂಬೇಡ್ಕರ್‌ ಜಯಂತಿ ಆಚರಣೆ: ಡಾ.ಬಿ.ಆರ್‌ ಅಂಬೇಡ್ಕರ್‌ ಅವರ 128ನೇ ಜನ್ಮ ದಿನವನ್ನು ಇಂದು ಗಿಡಗಳನ್ನು ನೆಡುವುದರ ಜೊತೆಗೆ ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ನಮ್ಮ ದೇಶಕ್ಕೆ ಸಂವಿಧಾನವನ್ನು ತಂದುಕೊಟ್ಟ ಮಹಾನ್‌ ಚೇತನ ಬಿ.ಆರ್‌.ಅಂಬೇಡ್ಕರ್‌ ಅವರು. ಚಾಮರಾಜನಗರ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಅವರ 72ನೇ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳ ಪರವಾಗಿ ಸಿ.ಎಂ. ವೆಂಕಟೇಶ್‌ ಅವರನ್ನು ಗೌರವಿಸಲಾಗುತ್ತಿದೆ ಎಂದರು.

ಮುಂದಿನ ದಿನಗಳಲ್ಲಿ ಎರಡನೇ ಹಂತ: ಸಿ.ಎಂ. ವೆಂಕಟೇಶ್‌ ಚಾಮರಾಜನಗರ ಜಿಲ್ಲಾದ್ಯಂತ ಪಟ್ಟಣ ಮುಖ್ಯ ರಸ್ತೆಗಳಲ್ಲಿ 10 ಸಾವಿರ ಗಿಡಗಳನ್ನು ನೆಡುವ ಉದ್ದೇಶ ನನ್ನದಾಗಿದೆ ಇಲ್ಲಿಯ ವರೆಗೆ 3000 ಗಿಡಗಳನ್ನು ನೆಡಲಾಗಿದೆ. ಭುವನೇಶ್ವರಿ ವೃತ್ತದಿಂದ ಬೂದಿತಿಟ್ಟು ಕ್ರಾಸ್‌ ವರೆಗೂ 4 ಹಂತಗಳಲ್ಲಿ 1000 ಗಿಡಗಳನ್ನು ನೆಡಲಾಗುವುದು ಮೊದಲ ಹಂತದಲ್ಲಿ ಭುವನೇಶ್ವರಿ ವೃತ್ತದಿಂದ‌ ಡಿ.ವೈ.ಎಸ್‌.ಪಿ ಕಚೇರಿ ವರೆಗೆ 250 ಗಿಡಗಳನ್ನು ನಡೆಲಾಗಿದೆ. ಎರಡನೇ ಹಂತವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌, ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಆಶ್ರಿತ್‌ ಅರಸ್‌, ಬಿ.ಎಸ್‌.ವಿ ಪ್ರತಿಷ್ಠಾನದ ವೆಂಕಟನಾಗಪ್ಪಶೆಟ್ಟಿ, ರೋಟರಿ ಸಂಸ್ಥೆ ಅಧ್ಯಕ್ಷ ಆರ್‌.ಎಂ.ಸ್ವಾಮಿ. ಪ್ರಗತಿ ಪರ ಸಂಘಟನೆಗಳ ಮುಖಂಡರಾದ ಸಿ.ಎಂ. ಕೃಷ್ಣಮೂರ್ತಿ, ವಕೀಲರ ಸಂಘ ಉಪಾಧ್ಯಕ್ಷ ಶಿವರಾಮು, ಪ್ರಧಾನ ಕಾರ್ಯದರ್ಶಿ ಹರವೆಮಂಜು, ಜಾನಪದ ಗಾಯಕ ಸಿ.ಎಂ. ನರಸಿಂಹಮೂರ್ತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next