ಹೊಸಕೋಟೆ: ನಂದಗುಡಿ ಹೋಬಳಿ ಮುಗಬಾಳ ಗ್ರಾಪಂನ ಚಿಕ್ಕನಹಳ್ಳಿ ಗ್ರಾಮದಲ್ಲಿ 20 ವರ್ಷದ ಹಿಂದೆ ಬಿ.ಎನ್. ಬಚ್ಚೇಗೌಡರು ಶಾಸಕರಾದ ಸಂದರ್ಭದಲ್ಲಿ ಸರ್ಕಾರದ ಅನುದಾನದಿಂದ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿದ್ದು, ಈವರೆಗೂ ನೀರಿನ ಭಾಗ್ಯ ಕಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಈ ಟ್ಯಾಂಕ್ ಕಟ್ಟಿಸಿದ್ದರು. ಆದರೆ, ಜನರಿಗೆ 1 ದಿನವು ಬಳಕೆ ಆಗದೆ ಹಾಗೆ ಉಳಿದಿದೆ. ಕಾರಣ ಎಂಟಿಬಿ ನಾಗರಾಜ್ ಶಾಸಕರಾಗಿದ್ದ ಸಂದರ್ಭ ಅಧಿಕಾರಿಗಳು ಈ ಓವರ್ ಟ್ಯಾಂಕ್ ಕಳಪೆ ಕಾಮಗಾರಿ ಆಗಿದ್ದು, ನೀರನ್ನು ಟ್ಯಾಂಕ್‌ಗೆ ಬಿಟ್ಟರೆ ಬಿದ್ದು ಹೋಗುವುದರಲ್ಲಿ ಸಂಶಯವೇ ಇಲ್ಲವೆಂದು ಅಧಿಕಾರಿಗಳು ಶಾಸಕರಿಗೆ ದಾರಿ ತಪ್ಪಿಸಿದ್ದರು. ಅದರಲ್ಲೂ ಹೊಸಕೋಟೆ ತಾಲೂಕಿನಲ್ಲಿ ಜಿದ್ದಾಜಿದ್ದಿ ರಾಜಕೀಯವಿದ್ದು. ಇದೇ ಒಂದು ನೆಪ ಮಾಡಿ ಕೊನೆಗೂ ಸರ್ಕಾರದ ಹಣ ಪೋಲಾಗಿ ಜನರಿಗೆ ನೀರಿನ ಸಮಸ್ಯೆ ಬಗೆಹರಿಯಲಿಲ್ಲ.
ಅಧಿಕಾರಿಗಳು ಮೌನ: ಈ ಟ್ಯಾಂಕ್ 50 ಸಾವಿರ ಲೀಟರ್ ಸಾಮರ್ಥ್ಯ ಹೊಂದಿದ್ದು, ನಿರ್ಮಾಣ ಮಾಡಿದ ನಂತರ ಟ್ಯಾಂಕ್‌ಗೆ ನೀರಿನ ಸಂಪರ್ಕ ನೀಡಿಲ್ಲ. ಗ್ರಾಮದ ಜನರಿಗೆ ನೀರಿನ ಸರಬರಾಜು ಮಾಡದೆ, ಸರ್ಕಾರದ ಅನುದಾನ ಮಾತ್ರ ಬಿಡುಗಡೆ ಮಾಡಿಕೊಂಡಿದ್ದಾರೆ. ಒಂದು ದಿನವೂ ಸಹ ಜನಸಾಮಾನ್ಯರಿಗೆ ಅನುಕೂಲವಾಗದ ಓವರ್ ಹೆಡ್ ಟ್ಯಾಂಕ್ ಅನುದಾನ ದುರ್ಬಳಕೆಯ ಬಗ್ಗೆ ಕಣ್ಣಾರೆ ಕಂಡರೂ, ಅಧಿಕಾರಿಗಳು ಮೌನವಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಬಿ.ಎನ್. ಬಚ್ಚೇಗೌಡರ ಮಗ ಶರತ್ ಬಚ್ಚೇಗೌಡರು ಶಾಸಕರಾಗಿದ್ದಾರೆ. ಈಗಲಾದರೂ ಅಧಿಕಾರಿಗಳು ಇದರ ಬಗ್ಗೆ ತನಿಖೆ ಮಾಡಿ ಜನರಿಗೆ ನೀರಿನ ಸೌಕರ್ಯ ಒದಗಿಸುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.
ಶೀಘ್ರ ನೀರು ಪೂರೈಸಲು ಕ್ರಮ: ಭರವಸೆ ಓವರ್‌ಹೆಡ್ ಟ್ಯಾಂಕ್ ಉತ್ತಮವಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಟ್ಯಾಂಕ್‌ಗೆ ನೀರನ್ನು ಬಿಡದೇ ಸರ್ಕಾರದ ಅನುದಾನ ಪೋಲು ಮಾಡುತ್ತಿದ್ದಾರೆ. ಆದರೆ, ವಾರದ ಹಿಂದೆ ನೀರಿನ ಸಂಪರ್ಕ ಕಲ್ಪಿಸಿದ್ದು, ಇದುವರೆಗೂ ಸೋರಿಕೆಯಾಗಲಿ, ಇತರೆ ತೊಂದರೆ ಆಗದೆ ಟ್ಯಾಂಕ್‌ನಲ್ಲಿ ನೀರು ತುಂಬಿದೆ. ಕೆಲವೇ ದಿನಗಳಲ್ಲಿ ಅಲ್ಪಸ್ವಲ್ಪ ಪೈಪ್‌ಲೈನ್ ಕಾಮಗಾರಿಯಿದ್ದು, ಅದನ್ನ ಸರಿಪಡಿಸಿ ಗ್ರಾಮದ ಜನತೆಗೆ ನೀರು ಒದಗಿಸಲಾಗುವುದು ಎಂದು ಚಿಕ್ಕನಹಳ್ಳಿ ಗ್ರಾಪಂ ಸದಸ್ಯ ನಾರಾಯಣಸ್ವಾಮಿ ಹೇಳಿದ್ದಾರೆ.