ಶಿಡ್ಲಘಟ್ಟ: ತಾಲೂಕಿನ ಅಬೂಡು ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಗೆ ಬರುವ ಗ್ರಾಪಂ ಕೇಂದ್ರವಾಗಿರುವ ಆನೂರು ಗ್ರಾಮದಲ್ಲಿ 1988 ರಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ನಿರ್ಮಿಸಿದರೆನ್ನಲಾದ ಓವರ್‌ಹೆಡ್ ಟ್ಯಾಂಕ್ ಸಂಪೂರ್ಣವಾಗಿ ಬಿರುಕು ಬಿಟ್ಟಿದ್ದು, ಅಪಾಯದ ಅಂಚಿಗೆ ತಲುಪಿದೆ. ಕ್ಷೇತ್ರದ ಶಾಸಕರು-ಜಿಪಂ, ತಾಪಂ, ಗ್ರಾಪಂ ಸದಸ್ಯರು ಗಮನ ಹರಿಸದಿರುವುದು ದುರಂತವೇ ಸರಿ.
ಕುಸಿಯುವ ಭೀತಿ: ಆನೂರು ಗ್ರಾಮದ ಸ.ಹಿ.ಪ್ರಾ.ಶಾಲೆ ಆವರಣದಲ್ಲಿ ಅನೇಕ ವರ್ಷಗಳ ಹಿಂದೆ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಮಾಡಿದ್ದು, ಇಡೀ ಗ್ರಾಮಕ್ಕೆ ಇಲ್ಲಿಂದ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಕಾಲ ಕ್ರಮೇಣ ಈ ಟ್ಯಾಂಕ್ ಸಂಪೂರ್ಣ ಶಿಥಿಲಗೊಂಡಿದ್ದು, ಕಂಬಗಳಿಂದ ಸಿಮೆಂಟ್ ಉದುರಿ ಬೀಳುತ್ತಿದೆ. ನೀರು ಸಹ ಪೋಲಾಗುತ್ತಿದ್ದು, ಯಾವ ಸಂದರ್ಭದಲ್ಲೂ ಬೀಳುವ ಅಪಾಯ ತಲೆದೋರಿದೆ.
ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರದ ಮಧ್ಯೆ ಭಾಗದಲ್ಲಿರುವ ಮೇಲ್ಮಟ್ಟದ ಟ್ಯಾಂಕ್ ನೆಲಸಮಗೊಳಿಸಿ ಹೊಸದೊಂದು ಓವರ್‌ಹೆಡ್ ಟ್ಯಾಂಕ್ ನಿರ್ಮಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಆಸಕ್ತಿ ಇಲ್ಲದಂತಾಗಿದೆ. ಶಾಲೆ ಅಥವಾ ಅಂಗನವಾಡಿಗೆ ಪ್ರವೇಶಿಸುವ ವಿದ್ಯಾರ್ಥಿಗಳು ಓವರ್‌ಹೆಡ್ ಟ್ಯಾಂಕ್ ದಾಟಿ ಜ್ಞಾನಾರ್ಜನೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಜೀವಂತವಾಗಿರುವುದು ಆಡಳಿತದ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಆಟವಾಡಲು ಆತಂಕ: ಶಾಲಾ ಮತ್ತು ಅಂಗನವಾಡಿ ವಿದ್ಯಾರ್ಥಿಗಳು ಆಟವಾಡಲು ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿದ್ಯಾರ್ಥಿಗಳು ಆಟವಾಡುವ ಸಮಯದಲ್ಲಿ ಟ್ಯಾಂಕ್ ಧರೆಗುರುಳಿದರೇ ದೊಡ್ಡ ದುರಂತ ಸಂಭವಿಸುವುದು ನಿಶ್ಚಿತ. ಓವರ್‌ಹೆಡ್ ಟ್ಯಾಂಕ್‌ನ ಸ್ಥಿತಿ ಶೋಚನೀಯವಾಗಿದ್ದರೂ ಸಹ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
ನೂತನ ಟ್ಯಾಂಕ್ ನಿರ್ಮಾಣಕ್ಕೆ ಪ್ರಸ್ತಾವನೆ: ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ಮಾಡಲು ಇರುವ ಓವರ್ ಹೆಡ್ ಟ್ಯಾಂಕ್ ಶಿಥಿಲಗೊಂಡಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಶಾಲಾ ವಿದ್ಯಾರ್ಥಿಗಳು ಮತ್ತು ಅಂಗನವಾಡಿ ಕೇಂದ್ರದ ಮಕ್ಕಳ ಹಿತದೃಷ್ಟಿಯಿಂದ ಮತ್ತೂಮ್ಮೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಓವರ್‌ಹೆಡ್ ಟ್ಯಾಂಕ್ ನೆಲಸಮಗೊಳಿಸಿ ನೂತನ ಟ್ಯಾಂಕ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸುತ್ತೇವೆ ಎನ್ನುತ್ತಾರೆ ಆನೂರು ಗ್ರಾಪಂ ಉಪಾಧ್ಯಕ್ಷರು ಬೆಳ್ಳೂಟಿ ವೆಂಕಟೇಶ್.
ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಿರುವ ಶಿಥಿಲಗೊಂಡಿರುವ ಓವರ್ ಹೆಡ್ ಟ್ಯಾಂಕ್ ನೆಲಸಮಗೊಳಿಸಿ ನೂತನ ಮೇಲ್ಮಟ್ಟದ ಟ್ಯಾಂಕ್ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಕಳೆದ 4 ವರ್ಷಗಳ ಹಿಂದೆಯೇ ಪತ್ರ ಬರೆಯಲಾಗಿದೆ. ಇದುವರೆಗೆ ಕ್ರಮ ಕೈಗೊಂಡಿಲ್ಲ. ತಾಪಂ ಇಒಗೆ ಈ ಕುರಿತು ಸಮಗ್ರ ವರದಿ ನೀಡುತ್ತೇನೆ.
-ಅರುಣಾ ಕುಮಾರಿ, ಪಿಡಿಒ, ಆನೂರು ಗ್ರಾಪಂ
* ಎಂ.ಎ.ತಮೀಮ್ ಪಾಷ