Advertisement

ಕಷ್ಟಗಳಿರುವುದೇ ಜಯಿಸಲು

10:41 PM Apr 02, 2021 | Team Udayavani |

ಷ್ಟ ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತದೆಯೇ’ ಎನ್ನುವುದು ಹಳೆಯ ಮಾತು. ಹಾಗೆ ನೋಡಿದರೆ ಕಡು ಕಷ್ಟವನ್ನು ಎದುರಿಸಿದರೇನೇ ನಾವು ಗಟ್ಟಿಯಾಗಲು ಸಾಧ್ಯ. ಪುಟಕ್ಕಿಟ್ಟ ಚಿನ್ನದಂತೆ ನಮ್ಮ ವ್ಯಕ್ತಿತ್ವ ಪ್ರಕಾಶಿಸಲು ಅರಂಭಿಸುತ್ತದೆ. ಕಷ್ಟಗಳು ಎದುರಾದಾಗ ಅಂಜಿಕೆ ಸಹಜ. ಅವನ್ನು ಜಯಿಸುವುದು ಅಷ್ಟೊಂದು ಸುಲಭವೇನಲ್ಲ. ಆದರೆ ನಮ್ಮ ಕಷ್ಟಗಳಿಗೆ ಸ್ಪಂದಿಸುವ ಸ್ನೇಹ ವರ್ಗ, ಕೌಟುಂಬಿಕ ಸಾಮರಸ್ಯ, ಮಕ್ಕಳ ಸಹಿತ ಎಳೆಯ ಚೈತನ್ಯಭರಿತ ಜೀವಗಳ ಆಸರೆ.. ಇವೆಲ್ಲ ಇದ್ದರೆ ಕಷ್ಟಗಳನ್ನು ಗೆಲ್ಲುವುದು ಅಸಾಧ್ಯವೇನಲ್ಲ.

Advertisement

ಹಾಗೆಂದು ಕಷ್ಟಗಳು ದಿಢೀರನೆ ಮುಗಿ ಬಿದ್ದಾಗ ಕಂಗಾಲಾಗಿ ಬಿಡುವುದೂ ಮನುಷ್ಯ ಸಹಜ ಗುಣವೇ. ಹಾಗೆಂದು ನೀವು ಕೈಚೆಲ್ಲಿ ಕುಳಿತಿರೋ ನೀವು ಬದುಕಿನ ಓಟದಲ್ಲಿ ಹಿನ್ನಡೆ ಕಂಡಿರಿ ಎಂದೇ ಅರ್ಥ. ಒಮ್ಮೆಗೇ ಎಲ್ಲ ಕಷ್ಟಗ ಳನ್ನು ಪರಿಹರಿಸಿಕೊಳ್ಳಲಾಗದು.

ಹಂತ ಹಂತವಾಗಿ ಕೆಲವೊಮ್ಮೆ ಕೇವಲ ಇಂಚಿಂಚಾಗಿ ಅವನ್ನು ಪರಿಹರಿಸುವ ನಿರಂತರ ಪ್ರಯತ್ನ ಮಾತ್ರ ಅತ್ಯಗತ್ಯ. ಆಗ ಸೋತರೂ ಪರವಾಗಿಲ್ಲ, ಪ್ರಾಮಾಣಿಕ ಪ್ರಯತ್ನ ಮಾಡಿದ ಆತ್ಮ ತೃಪ್ತಿಯಾದರೂ ನಮಗಿರುತ್ತದೆ.

ಕಷ್ಟಗಳು ವಿಧಿ ಲಿಖೀತವೆಂದೋ ಜಾತಕ ದೋಷವೆಂದೋ ದೈವೀ ಶಾಪ ವೆಂದೋ ಬೇರೆ ಬೇರೆ ಕಾರಣಗಳನ್ನು ಹೇಳಿಕೊಳ್ಳುತ್ತೇವೆ. ಇರಬಹುದು. ಹಾಗೆಂದು ಅವುಗಳಿಗೆ ಅಂಜಿ ಓಡಿ ಹೋಗುವುದರಿಂದ ಯಾವ ಸಾರ್ಥಕ ತೆಯೂ ಇಲ್ಲ. ಕೊನೆಯ ಕ್ಷಣದ ವರೆಗೂ ಹೋರಾಡುವುದು ನಮ್ಮ ಧರ್ಮ.

ಸಂತಸದ ಸಮಯದಂತೆ ಪ್ರತಿ ಯೊಂದೂ ಕಷ್ಟಕ್ಕೂ ಅದರದೇ ಆದ ಕಾಲ ಮಿತಿ ಇರುತ್ತದೆ. ಕಷ್ಟಗಳನ್ನು ಬಡಿದಾಡಿ ಗೆಲ್ಲುವುದಿದೆಯಲ್ಲ; ಅದೊಂದು ಅನನ್ಯ ಅನುಭವ. ಒಂದು ದೊಡ್ಡ ಕಷ್ಟವನ್ನು ಹೋರಾಡಿ ಗೆದ್ದ ಅನುಭವ ನಮ್ಮನ್ನು ಬದುಕಿನುದ್ದಕ್ಕೂ ಕಾಯಬಲ್ಲುದು. ಬದುಕಿನ ತಿರುವಿನಲ್ಲಿ ನಿಂತು ಒಮ್ಮೆ ತಿರುಗಿ ನೋಡಿದಾಗ ಹೆಮ್ಮೆ ಪಟ್ಟುಕೊಳ್ಳುವಂತೆ, “ಇದೇನು ಮಹಾ! ಇದಕ್ಕಿಂತ ದೊಡ್ಡ ಕಷ್ಟವನ್ನೇ ನಾನು ಗೆದ್ದಿದ್ದೇನೆ’ ಎನ್ನುವಂತೆ! ಹಾಗೆ ನೋಡಿದರೆ ಕಷ್ಟಗಳು ಇರದವರು ಯಾರು? “ಆನೆಗೆ ಆನೆಯ ಕಷ್ಟ. ಇರುವೆಗೆ ಇರುವೆಯ ಕಷ್ಟ’ ಎಂಬ ಮಾತೇ ಇದೆಯಲ್ಲ?

Advertisement

ಸರಿಯಾದ ಯೋಜನೆ ಇರದಿರು ವುದು, ಸಮಯವನ್ನು ಸರಿಯಾಗಿ ವಿನಿಯೋಗಿಸದಿರುವುದು, ಆ ವಿಷಯ ದಲ್ಲಿ ಸರಿಯಾದ ಗುರಿಯೇ ಇಲ್ಲದೆ ಇರುವುದರಿಂದ ಹೆಚ್ಚಿನ ಕಷ್ಟಗಳು ಎದುರಾಗಿರಲು ಸಾಧ್ಯ. ಅಲ್ಲದೆ ನಮ್ಮವೇ ಅವಿವೇಕಿತನ, ಉಡಾಫೆ, ಜಾಣ್ಮೆಯ ಕೊರತೆಯಿಂದಲೇ ಬಂದಿರಲು ಸಾಧ್ಯ. ಅತಿಯಾದ ಆತ್ಮವಿಶ್ವಾಸ, ಮುಂದಾ ಲೋಚನೆ ಇಲ್ಲದಿರುವುದು, ಶತ್ರುಗಳು ಇರಬಹುದಾದ ಸಾಧ್ಯತೆಯ ಅವಗಣನೆ, ಆಪ್ತ ವಲಯದಲ್ಲಿ ಉತ್ತಮ ಸಂವಹನ ಇಲ್ಲದಿರುವುದು.. ಹೀಗೆ. ಒಮ್ಮೆ ಈ ಕಷ್ಟಗಳ ಸ್ವರೂಪವನ್ನು, ಮೂಲವನ್ನು ಅರಿತ ಅನಂತರ ಅವನ್ನು ಬಗೆಹರಿಸಲು ಶತಾಯಗತಾಯ ಪ್ರಯತ್ನಿಸಬೇಕು.

ಕಷ್ಟಗಳು ನಮ್ಮನ್ನು ತಿದ್ದುವ ಸಾಧನಗಳು. ಅವುಗಳೊಡನೆ ಸೆಣಸುವುದೇ ಜೀವನ. ಹಾಗೆಂದು ಅನಗತ್ಯವಾಗಿ ನಾವಾಗಿ ಸಮಸ್ಯೆ
ಗಳನ್ನು ತಂದುಕೊಳ್ಳದಿರುವುದೇ ಜಾಣ ತನ ಹಾಗೂ ಸಮಂಜಸ. ನಮ್ಮ ಉತ್ತಮ ಹವ್ಯಾಸಗಳನ್ನೇ ಸಾಧನೆಗೆ ಪೂರಕವಾ
ಗಿಯೋ ಕಷ್ಟಗಳಿಂದ ಬಿಡುಗಡೆಯ ಹಾದಿಯಂತೆಯೂ ಬಳಸಿಕೊಳ್ಳಬಹುದು.

ಈ ನಿಟ್ಟಿನಲ್ಲಿ ತಾಳ್ಮೆ ಅತ್ಯಗತ್ಯ. ಈ ಸಹನೆ ನಮ್ಮ ಶಕ್ತಿಯಾಗಬಲ್ಲುದು ಕೂಡ. ತಾಳ್ಮೆಯಿಂದ, ಸಹನೆಯಿಂದ ನಮ್ಮದಾಗಿಸಿ ಕೊಂಡ ಯಶಸ್ಸು ನಮ್ಮೊಂದಿಗೆ ಬಹು ಕಾಲ ಉಳಿಯುತ್ತದೆ ಕೂಡ. ಕಷ್ಟಗಳಿಗೆ ಅಂಜದೆ, ಭಗವಂತನಿತ್ತ ಆಯುಷ್ಯವನ್ನು ವರದಂತೆ ಪರಿಗಣಿಸೋಣ. ಕಷ್ಟಗಳು ಕಳೆದು ಬೆಳಕು ಹರಿಯುತ್ತದೆ ಎನ್ನುವ ನಂಬಿಕೆಯೇ ಮನುಕುಲವನ್ನು ಮುನ್ನಡೆಸುತ್ತಿದೆ ಅಲ್ಲವೇ?

– ಜಯಶ್ರೀ ಬಿ., ಕದ್ರಿ

Advertisement

Udayavani is now on Telegram. Click here to join our channel and stay updated with the latest news.

Next